* ಪ್ರೇಯಸಿಗೆ, ಪ್ರಿಯಕರನಿಂದ ಚೂರಿ ಇರಿತ ಪ್ರಕರಣ
* ಚಿಕಿತ್ಸೆ ಫಲಕಾರಿಯಾಗದೇ ಯುವತಿ ಆಸ್ಪತ್ರೆಯಲ್ಲಿ ಸಾವು
* ಸೌಮ್ಯಶ್ರೀ ಭಂಡಾರಿ ಇರಿತಕ್ಕೊಳಗಾಗಿ ಸಾವನ್ನಪ್ಪಿದ ಯುವತಿ
* ಸೌಮ್ಯಳಿಗೆ ಚೂರಿ ಇರಿದು, ತಾನು ಕತ್ತು ಕತ್ತರಿಸಿಕೊಂಡ ಸಂದೇಶ್ ಕುಲಾಲ್
ಉಡುಪಿ(ಆ. 30) ಪ್ರೇಯಸಿಗೆ ಚಾಕುವಿನಿಂದ ಇರಿದ ಪಾಗಲ್ ಪ್ರೇಮಿ ನಂತರ ತಾನೂ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಘಟನೆ ಉಡುಪಿ ಅಂಬಾಗಿಲು ಸಮೀಪದ ಸಂತೆಕಟ್ಟೆಯ ಪೆಟ್ರೋಲ್ ಬಂಕ್ ಬಳಿಯಲ್ಲಿ ಘಟನೆ ನಡೆದಿದೆ.
ಸೌಮ್ಯಶ್ರೀ ಭಂಡಾರಿ ಇರಿತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ. ಸೌಮ್ಯಳಿಗೆ ಚೂರಿ ಇರಿದು, ತಾನು ಕತ್ತು ಕೊಯಿದುಕೊಂಡ ಸಂದೇಶ್ ಕುಲಾಲ್ ಪರಿಸ್ಥಿತಿ ಚಿಂತಾಜನಕವಾಗಿದೆ. ಸೌಮ್ಯ ಕೆಲಸ ಮುಗಿಸಿ, ಮನೆಗೆ ಹೋಗುತ್ತಿದ್ದಾಗ ಸ್ಕೂಟಿಯನ್ನು ತಡೆದ ಸಂದೇಶ್ ಪ್ರಶ್ನೆ ಮಾಡಿದ್ದಾನೆ.
ಪ್ರೀತಿ ನಿರಾಕರಿಸಿದವಳಿಗೆ ಮನಬಂದಂತೆ ಇರಿದ
ಪೆಟ್ರೋಲ್ ಬಂಕ್ ನಿಂದ ಸ್ವಲ್ಪ ಮುಂದಕ್ಕೆ ಬರುತ್ತಿದ್ದಂತೆಯೇ ಪರಸ್ಪರ ಜಗಳಕ್ಕೆ ಇಳಿದಿದ್ದಾರೆ. ಜಗಳ ವಿಕೋಪಕ್ಕೆ ತಿರುಗುತ್ತಿದ್ದಂತೆಯೇ ಪ್ರೇಯಸಿಗೆ ಯುವಕ ಚಾಕುವಿನಿಂದ ಇರಿದಿದ್ದಾನೆ. ನಂತರದ ಯುವತಿ ಪ್ರಜ್ಞೆ ತಪ್ಪಿ ಬೀಳುತ್ತಿದ್ದಂತೆಯೇ ತಾನೂ ಕೂಡ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಯುವತಿ ಪ್ರಾಣ ಬಿಟ್ಟಿದ್ದಾಳೆ. ಯುವಕನ ಸ್ಥಿತಿಯೂ ಚಿಂತಾಜನಕವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ.
ನಿಶ್ಚಿತಾರ್ಥವೇ ಕಾರಣ; ವಾರದ ಹಿಂದೆ ಯುವತಿಗೆ ನಿಶ್ಚಿತಾರ್ಥ ಆಗಿತ್ತು, ಇದರಿಂದ ಕೋಪಗೊಂಡ ಯುವಕ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.