ಮೈಕ್ರೋ ಫೈನಾನ್ಸ್‌ಗಳಿಂದ ಸಾಲ ಪಡೆದವರಿಗೆ ಮಾನಸಿಕ ಹಿಂಸೆ| ವಿವಿಧ ಕಂಪನಿಗಳ ಮೇಲೆ ದಾಳಿ, ಇಬ್ಬರ ಬಂಧನ| ಖಾಸಗಿ ಕಂಪನಿಗಳ ಮೇಲೆ ಸಿಐಡಿ ಪೊಲೀಸರ ದಾಳಿ|
ಬೆಂಗಳೂರು(ಡಿ.25): ಅಧಿಕ ಬಡ್ಡಿಗೆ ಸಣ್ಣ ಮೊತ್ತದ (ಮೈಕ್ರೋ ಫೈನಾನ್ಸ್) ಸಾಲ ನೀಡಿ ಗ್ರಾಹಕರ ಮೊಬೈಲ್‌ನಿಂದ ಗೌಪ್ಯ ಮಾಹಿತಿ ಕದ್ದು ಕಿರುಕುಳ ನೀಡುತ್ತಿದ್ದ ಖಾಸಗಿ ಕಂಪನಿಗಳ ಮೇಲೆ ಸಿಐಡಿ ಪೊಲೀಸರು ದಾಳಿ ನಡೆಸಿದ್ದು, ಕಂಪನಿಯ ಇಬ್ಬರು ಸಿಬ್ಬಂದಿಯನ್ನು ಬಂಧಿಸಿದ್ದಾರೆ.
ಬೆಂಗಳೂರಿನ ಮ್ಯಾಡ್ ಎಲಿಫೆಂಟ್ ಟೆಕ್ನಾಲಜೀಸ್ ಪ್ರೈ.ಲಿ, ಬಾರಾಯಾಂಕ್ಸಿ ಟೆಕ್ನಾಲಜೀಸ್ ಪ್ರೈ.ಲಿ, ಪಾಫಿಟೈಸ್ ಟೆಕ್ನಾಲಜೀಸ್, ವಿಝ್ ಪ್ರೋ ಸಲ್ಯೂಷನ್ಸ್ ಕಂಪನಿಗಳ ಮೇಲೆ ದಾಳಿ ನಡೆಸಲಾಗಿದೆ. ದಾಳಿ ವೇಳೆ ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಲ್ಯಾಪ್‌ಟಾಪ್, ಮೊಬೈಲ್, ದಾಖಲಾತಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ.
ಪ್ರತಿಯೊಂದು ಕಂಪನಿಗಳು ತಮ್ಮದೇ ಆದ ಹಲವಾರು ಮೈಕ್ರೋಲೋನ್ ಆ್ಯಪ್‌ಗಳನ್ನು ಹೊಂದಿವೆ. ಇವುಗಳಿಗೆ ನೆರೆ ದೇಶದ ವ್ಯಕ್ತಿಗಳು ಹಣ ಹೂಡಿಕೆ ಮಾಡಿ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಮೂಲಕ ಸಾಲ ನೀಡುತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
1 ಕೋಟಿ ಮೌಲ್ಯದ ಡ್ರಗ್ಸ್ ವಶ: ಇಬ್ಬರು ವಿದೇಶಿ ಪೆಡ್ಲರ್‌ಗಳ ಬಂಧನ
ಏನಿದು ವಂಚನೆ?:
ಕಂಪನಿಗಳು ಸಾಲ ನೀಡಲು ‘ಪೈಸಾಲೋನ್’ ಸೇರಿದಂತೆ ಇನ್ನಿತರ ಹೆಸರಿನ ಆ್ಯಪ್‌ಗಳನ್ನು ಹೊಂದಿವೆ. ಸಾಲ ಪಡೆಯುವಾಗ ಗ್ರಾಹಕರು ಪ್ಲೇ ಸ್ಟೋರ್‌ಗಳ ಮೂಲಕ ಆ್ಯಪ್‌ಡೌನ್‌ಲೋಡ್ ಮಾಡಿಕೊಳ್ಳಬೇಕು. ಈ ಸಮಯದಲ್ಲಿ ಆ್ಯಪ್ ಕೇಳುವ ಆಧಾರ್, ಪಾನ್ ಸಂಖ್ಯೆ, ಬ್ಯಾಂಕ್ ಖಾತೆ ವಿವರ, ಇಬ್ಬರು ಪರಿಚಯಸ್ಥರ ಮೊಬೈಲ್ ಸಂಖ್ಯೆ ಸೇರಿದಂತೆ ಇತರೆ ವೈಯಕ್ತಿಕ ಮಾಹಿತಿಗಳನ್ನು ಬಳಕೆದಾರರು ನಮೂದಿಸಬೇಕು. ಕಾಂಟಾಕ್ಟ್$್ಸ, ಎಸ್‌ಎಂಎಸ್, ಕರೆ ವಿವರದ ಗೌಪ್ಯ ಮಾಹಿತಿಯನ್ನು ಬಳಸಿಕೊಳ್ಳಲು ಅನಿವಾರ್ಯವಾಗಿ ಅನುಮತಿಯನ್ನು ಗ್ರಾಹಕ ನೀಡಬೇಕು.
ಹೆಚ್ಚಿನ ಬಡ್ಡಿ ವಸೂಲಿ: ಆ್ಯಪ್‌ನಿಂದ ಮಂಜೂರಾದ ಮೊತ್ತದಲ್ಲಿ ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತಿದ್ದರು. ಉದಾಹರಣೆಗೆ .3 ಸಾವಿರ ಸಾಲ ಮಂಜೂರು ಮಾಡಿದ್ದಲ್ಲಿ ಶೇಕಡ 36 ಬಡ್ಡಿ ಕಡಿತ ಸೇರಿದಂತೆ ಪ್ರೊಸೆಸಿಂಗ್ ಶುಲ್ಕ, ಇತ್ಯಾದಿಗಳನ್ನು ಕಡಿತಗೊಳಿಸಿ ಗ್ರಾಹಕನ ಖಾತೆಗೆ .1800 ಜಮೆ ಮಾಡುತ್ತಿದ್ದರು. ಈ ಸಾಲಕ್ಕೆ ಒಂದು ವಾರ ಗಡುವು ಇರುತ್ತಿತ್ತು. ನಿಗದಿತ ಸಮಯಕ್ಕೆ ಸಾಲ ಮರು ಪಾವತಿ ಮಾಡಿದರೆ ಹೆಚ್ಚಿನ ಸಾಲ ನೀಡುತ್ತಿದ್ದರು. ಸಾಲ ಮರುಪಾವತಿ ಮಾಡಲು ತಡವಾದರೆ, ಕಂಪನಿಯ ಏಜೆಂಟ್‌ಗಳು ಸಾಲಗಾರನಿಗೆ ಕರೆ ಮಾಡಿ ಅಶ್ಲೀಲವಾಗಿ ನಿಂದಿಸಿ, ಬೆದರಿಕೆ ಹಾಕುತ್ತಿದ್ದರು ಎಂದು ಸಿಐಡಿ ಅಧಿಕಾರಿಗಳು ವಿವರಿಸಿದ್ದಾರೆ.
ಇದಲ್ಲದೆ, ಸಾಲಗಾರರ ಮೊಬೈಲ್ ದತ್ತಾಂಶಗಳನ್ನು ಹ್ಯಾಕ್ ಮಾಡಿ ಅವುಗಳನ್ನು ಬಳಸಿಕೊಂಡು ಸಾಲ ಪಡೆದವರ ಕಾಂಟಾಕ್ಟ್ನಲ್ಲಿರುವ ಎಲ್ಲ ವ್ಯಕ್ತಿಗಳನ್ನು ಒಳಗೊಂಡಂತೆ ವಾಟ್ಸಪ್ ಗ್ರೂಪ್ ಮಾಡಿ ಸಾಲ ಪಡೆದವರ ವೈಯಕ್ತಿಕ ಫೋಟೋಗಳೊಂದಿಗೆ ‘ಚೋರ್, ಫ್ರಾಡ್, ಡಿಫಾಲ್ಟರ್’ ಎಂಬಿತ್ಯಾದಿ ತಲೆ ಬರಹಗಳೊಂದಿಗೆ ನಿಂದನೆ ಮಾಡುತ್ತಿದ್ದರು.
ಯುವತಿಯರಿಗೆ ಕಿರುಕುಳ
ಯುವತಿಯರಿಬ್ಬರು ಜನವರಿಯಲ್ಲಿ ಗೂಗಲ್ ಪ್ಲೇಸ್ಟೋರ್ ಮೂಲಕ ಮೈಕ್ರೋ ಫೈನಾನ್ಸ್ ಲೋನ್ ಆ್ಯಪ್‌ಗಳಿಂದ ಸಾಲ ಪಡೆದು, ಮರುಪಾವತಿಸಿದ್ದರು. ಇತ್ತೀಚೆಗೆ ಆ್ಯಪ್ ಕಂಪನಿಯಿಂದ ಕರೆ ಮಾಡಿದ್ದ ವಂಚಕರು, ಹೆಚ್ಚಿನ ಬಡ್ಡಿ ನೀಡುವಂತೆ ಯುವತಿಯರಿಗೆ ಒತ್ತಾಯಿಸಿದ್ದರು. ಇದಕ್ಕೆ ನಿರಾಕರಿಸಿದಾಗ ಮೊಬೈಲ್ ಹ್ಯಾಕ್ ಮಾಡಿ, ಅದರಲ್ಲಿನ ಫೋನ್ ನಂಬರ್ ಮತ್ತು ಫೋಟೋ ಸೇರಿದಂತೆ ಇನ್ನಿತರ ವೈಯಕ್ತಿಕ ವಿವರಗಳನ್ನು ಕಳವು ಮಾಡಿದ್ದರು.
ಈ ಬಗ್ಗೆ ದೂರುಗಳು ದಾಖಲಾಗಿದ್ದವು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದು, ದಾಳಿ ಮಾಡಲಾದ ಕಂಪನಿ ಮಾಲೀಕರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಬೇರೆ ಉದ್ದೇಶಕ್ಕೆ ವೈಯಕ್ತಿಕ ದಾಖಲೆಗಳನ್ನು ಬಳಸಿಕೊಳ್ಳಲಾಗುತ್ತಿದೆಯೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸಿಐಡಿ ಅಧಿಕಾರಿಗಳು ಮಾಹಿತಿ ನೀಡಿದರು.
ಆ್ಯಪ್‌ಗಳ ಮೂಲಕ ಸಾಲ ಪಡೆದು ಗೌಪ್ಯ ಮಾಹಿತಿ ಹಂಚಿಕೊಳ್ಳುವ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಯಾವುದೇ ವ್ಯಕ್ತಿಗಳು ಈ ರೀತಿ ವಂಚನೆಗೊಳಗಾಗಿ, ಕಿರುಕುಳ ಅನುಭವಿಸಿದ್ದರೆ ಸಿಐಡಿ ಸೈಬರ್ ಅಪರಾಧ ವಿಭಾಗಕ್ಕೆ ದೂರು ನೀಡಲು ಸಂಪರ್ಕ ಮಾಡಬಹುದು ಎಂದು ಸಿಐಡಿ ಎಸ್ಪಿ (ಸೈಬರ್) ಎಂ.ಡಿ.ಶರತ್ ತಿಳಿಸಿದ್ದಾರೆ.