
ಬೆಂಗಳೂರು : ಹೈಟೆನ್ಷನ್ ತಂತಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಗಾಳಿಪಟವನ್ನು ತೆಗೆದುಕೊಳ್ಳಲು ಯತ್ನಿಸಿದಾಗ ವಿದ್ಯುತ್ ಪ್ರವಹಿಸಿ ಇಬ್ಬರು ಬಾಲಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಿನಾಯಕ ನಗರದ ನಿವಾಸಿಗಳಾದ ಸೈಯದ್ ಮೊಹಿದ್ದೀನ್ (10) ಹಾಗೂ ಮೊಹಮ್ಮದ್ ತೌಸಿಫ್ (9) ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ಇಬ್ಬರು ಜೀವನ್ಮರಣ ಹೋರಾಟ ನಡೆಸಿದ್ದಾರೆ. ಮೂರು ದಿನಗಳ ಹಿಂದೆ ಸಾರಾಯಿಪಾಳ್ಯದಲ್ಲಿ ಗಾಳಿಪಟ ಹಾರಿಸುವಾಗ ವಿದ್ಯುತ್ ದುರಂತಕ್ಕೆ ಸೈಯದ್ ಹಾಗೂ ತೌಸಿಫ್ ಸಿಲುಕಿದ್ದಾರೆ.
ಖಾಸಗಿ ಶಾಲೆಯಲ್ಲಿ 5ನೇ ತರತಿಯಲ್ಲಿ ಸೈಯದ್ ಹಾಗೂ 4ನೇ ತರಗತಿಯಲ್ಲಿ ತೌಸಿಫ್ ಓದುತ್ತಿದ್ದರು. ತಮ್ಮ ಕುಟುಂಬದ ಜತೆ ಅವರು ನೆಲೆಸಿದ್ದರು. ಶಾಲೆಗೆ ದಸರಾ ರಜೆ ಹಿನ್ನಲೆಯಲ್ಲಿ ಸೆ.23 ರಂದು ಮನೆ ಬಳಿ ಗೆಳೆಯರು ಗಾಳಿಪಟ ಹಾರಿಸುತ್ತಿದ್ದರು. ಆಗ ಗಾಳಿ ಪಟ ಹಾರಿಕೊಂಡು ಹೈಟೆನ್ಷನ್ ತಂತಿಗೆ ಸಿಲುಕಿಕೊಂಡಿದೆ. ಆ ಗಾಳಿಪಟ ತೆಗೆದುಕೊಳ್ಳಲು ಇಬ್ಬರು ಯತ್ನಿಸಿದ್ದಾರೆ. ತಮ್ಮ ಮನೆಗೆ ಹೋಗಿ ಪರದೆ ಕಟ್ಟುವ ಕಬ್ಬಿಣದ ರೋಲ್ ಅನ್ನು ಬಾಲಕರು ತಂದಿದ್ದಾರೆ. ಬಳಿಕ ಮೂರು ಅಂತಸ್ತಿನ ಕಟ್ಟಡದ ಮಹಡಿಗೆ ಹೋಗಿ ಅಲ್ಲಿಂದ ನಿಂತು ಕಬ್ಬಿಣದ ರೋಲ್ ನಿಂದ ಗಾಳಿಪಟ ತೆಗೆದುಕೊಳ್ಳಲು ಸೈಯದ್ ಹಾಗೂ ತೌಸಿಫ್ ಪ್ರಯತ್ನಿಸಿದ್ದಾರೆ. ಆಗ ಕಬ್ಬಿಣದ ರೋಲ್ ತಾಕಿದ ಕೂಡಲೇ ಹೈಟೆನ್ಷನ್ ತಂತಿಯಿಂದ ಬಾಲಕರಿಗೆ ವಿದ್ಯುತ್ ಪ್ರವಹಿಸಿದೆ.
ಕೂಡಲೇ ಚೀರಾಟ ಕೇಳಿ ಧಾವಿಸಿದ ಸ್ಥಳೀಯರು, ವಿದ್ಯುತ್ ಅವಘಡದಲ್ಲಿ ಸಿಲುಕಿದ್ದ ಬಾಲಕರನ್ನು ರಕ್ಷಿಸಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಅಲ್ಲಿಂದ ವಿಕ್ಟೋರಿಯಾ ಆಸ್ಪತ್ರೆಗೆ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಸ್ಥಳಾಂತರಿಸಲಾಗಿದೆ. ಘಟನೆಯಲ್ಲಿ ಶೇ.30 ರಷ್ಟು ಬಾಲಕರ ದೇಹವು ಸುಟ್ಟು ಹೋಗಿದ್ದು, ತುರ್ತು ಚಿಕಿತ್ಸಾ ಘಟಕದಲ್ಲಿ ಅವರಿಗೆ ವೈದ್ಯೋಪಾಚರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ