
ಬೆಂಗಳೂರು(ಏ.18): ತಮ್ಮ ತೋಟದ ಪಂಪ್ ಹೌಸ್‌ನಲ್ಲಿ ಕೆ.ಜಿ.ಗಟ್ಟಲೇ ಗಾಂಜಾ ಸಂಗ್ರಹಿಸಿ ರಾಜಧಾನಿಗೆ ಪೂರೈಕೆ ಮಾಡುತ್ತಿದ್ದ ಇಬ್ಬರನ್ನು ಹುಳಿಮಾವು ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.
ತಮಿಳುನಾಡಿನ ರಾಧಾ ರವಿ ಅಲಿಯಾಸ್ ರವಿ ಹಾಗೂ ಪಳನಿವೇಲು ಬಂಧಿತರಾಗಿದ್ದು, ಆರೋಪಿಗಳಿಂದ 54 ಲಕ್ಷ ಮೌಲ್ಯದ 120.750 ಕೆ.ಜಿ. ಗಾಂಜಾ ಜಪ್ತಿ ಮಾಡಲಾಗಿದೆ. ಕಾರ್ಯಾಚರಣೆಯಲ್ಲಿ ತಪ್ಪಿಸಿಕೊಂಡಿರುವ ಆಂಧ್ರಪ್ರದೇಶದ ಸೋಮೇಶ್ ಹಾಗೂ ಮೌಳಿ ಪತ್ತೆಗೆ ತನಿಖೆ ನಡೆದಿದೆ. ಹುಳಿಮಾವು ಸಮೀಪದ ಬಿಜಿ ರಸ್ತೆಯ ಕ್ರೈಸ್ಟ್ ಕಾಲೇಜು ಮುಂದೆ ಗಾಂಜಾ ಮಾರಾಟಕ್ಕೆ ಯತ್ನಿಸಿದ್ದಾಗ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹದೇವ ಜೋಶಿ ತಿಳಿಸಿದ್ದಾರೆ.
ರೈತ ಪಳನಿವೇಲು, ಗಾರೆ ಕೆಲಸಗಾರ ರವಿ ಹಾಗೂ ಮತ್ತೊಬ್ಬ ಆರೋಪಿ ಮೌಳಿ ಒಂದೇ ಊರಿನವರು. ರವಿಗೆ ಗಾಂಜಾ ಪೆಡ್ಲರ್ ಸುರೇಶ್ ಎಂಬಾತನೊಂದಿಗೆ ಸ್ನೇಹವಿತ್ತು. ಗಾಂಜಾ ವ್ಯವಹಾರದಲ್ಲಿ ಸುಲಭವಾಗಿ ಹಣ ಸಂಪಾದಿಸಬಹುದು ಎಂದು ಆಸೆ ತೋರಿಸಿ ರವಿಯನ್ನು ದಂಧೆಗೆ ಸೆಳೆದಿದ್ದ. ಕೆಲ ದಿನಗಳ ಹಿಂದೆ ಗಾಂಜಾ ಪ್ರಕರಣದಲ್ಲಿ ಸುರೇಶ್ ಜೈಲು ಸೇರಿದ್ದ. ಇದಕ್ಕೂ ಮುನ್ನ ರವಿಗೆ ಆಂಧ್ರಪ್ರದೇಶದ ವಿಶಾಖಪಟ್ಟಣದ ಸೋಮೇಶ್‌ನನ್ನು ಸುರೇಶ್ ಪರಿಚಯ ಮಾಡಿಸಿಕೊಟ್ಟಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕ್ರಿಕೆಟ್ ಕಿಟಲ್ಲಿ ಡ್ರಗ್ಸ್ ಇಟ್ಟು ಸರಬರಾಜು..!
ಅಂತೆಯೇ ಸೋಮೇಶ್ ಮೂಲಕ ಗಾಂಜಾ ಖರೀದಿಸಿ ಆರೋಪಿಗಳು, ಬಳಿಕ ತಮ್ಮೂರು ತಮಿಳುನಾಡಿನ ನೇರಳಗಿರಿ ಗ್ರಾಮಕ್ಕೆ ಸಾಗಿಸುತ್ತಿದ್ದರು. ಅಲ್ಲಿ ಪಳನಿಗೆ ಸೇರಿದ ತೋಟದ ಪಂಪ್‌ಹೌಸ್‌ನಲ್ಲಿ ಸಂಗ್ರಹಿಸುತ್ತಿದ್ದರು. ನಂತರ ಚಿಕ್ಕ ಪೊಟ್ಟಣಗಳಲ್ಲಿ ಗಾಂಜಾ ತುಂಬಿ ಬನ್ನೇರುಘಟ್ಟ ರಸ್ತೆ, ಹೊಸೂರು, ಎಲೆಕ್ಟ್ರಾನಿಕ್ ಸಿಟಿ, ಆನೇಕಲ್ ಹಾಗೂ ಅತ್ತಿಬೆಲೆ ಸೇರಿದಂತೆ ಇತರೆಡೆ ಅವರು ಮಾರಾಟ ಮಾಡುತ್ತಿದ್ದರು. ಪ್ರತಿ ಕೆ.ಜಿಗೆ 45 ಸಾವಿರ ಸಂಪಾದಿಸಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಹುಳಿಮಾವು ಸಮೀಪ ಮಾರಾಟಕ್ಕೆ ಯತ್ನಿಸಿದ್ದಾಗ ರವಿ ಸಿಕ್ಕಿಬಿದ್ದ. ಆಗ ಆತನ ಬಳಿ 3.750 ಕೆ.ಜಿ ಗಾಂಜಾ ಹಾಗೂ ಬೈಕ್ ಜಪ್ತಿ ಮಾಡಲಾಯಿತು. ಬಳಿಕ ವಿಚಾರಣೆ ವೇಳೆ ರವಿ ನೀಡಿದ ಮಾಹಿತಿ ಮೇರೆಗೆ ಪಳನಿವೇಲು ಬಂಧಿಸಲಾಯಿತು. ಕೊನೆಗೆ ಪಂಪ್‌ಹೌಸ್‌ನಲ್ಲಿ ಸಂಗ್ರಹಿಸಿಟ್ಟಿದ್ದ 117 ಕೆ.ಜಿ ಗಾಂಜಾ ಜಪ್ತಿ ಮಾಡಲಾಯಿತು. ಇನ್‌ಸ್ಪೆಕ್ಟರ್ ಮಹೇಶ್ ಕನಕಗಿರಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ