
ಬೆಂಗಳೂರು(ಆ.29): ಆನ್‌ಲೈನ್ ಡೇಟಿಂಗ್ ಆ್ಯಪ್‌ನಲ್ಲಿ ಪರಿಚಿತನಾದ ಯುವಕನಿಗೆ ಹುಡುಗಿ ಕೊಡಿಸುವುದಾಗಿ ಆಮಿಷವೊಡ್ಡಿ ಕರೆಸಿಕೊಂಡು ಬೆದರಿಸಿ ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಎಚ್‌ಎಸ್‌ಆರ್ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹಾಸನ ಮೂಲದ ನಾಗೇಶ್ (37) ಮತ್ತು ಕುರುಬರಹಳ್ಳಿಯ ನದೀಮ್ ಪಾಷಾ (28) ಬಂಧಿತರು. ಆರೋಪಿಗಳಿಂದ .60 ಸಾವಿರ ಹಾಗೂ ಕೃತ್ಯಕ್ಕೆ ಬಳಸಿದ್ದ ಆಟೋರಿಕ್ಷಾ ಜಪ್ತಿ ಮಾಡಲಾಗಿದೆ. ಪ್ರಕರಣದ ಮತ್ತೊಬ್ಬ ಆರೋಪಿ ಮೈಸೂರಿನ ಚಂದ್ರಶೇಖರ್ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ.
ಬಂಧನಕ್ಕೆ ಹೆದರಿ ಕ್ರಿಮಿನಾಶಕ ಸೇವಿಸಿದ ಆರೋಪಿ; ಮಂಗಳೂರು ಜಿಲ್ಲಾಸ್ಪತ್ರೆಗೆ ದಾಖಲು!
ಆರೋಪಿಗಳು ಆ.21ರಂದು ಎಚ್‌ಎಸ್‌ಆರ್ ಲೇಔಟ್ ರಾಜೀವ್‌ಗಾಂಧಿನಗರದ ಎಂ.ಗೌತಮ್(27) ಎಂಬಾತನಿಗೆ ಯುವತಿಯನ್ನು ಕೊಡಿಸುವುದಾಗಿ ಆಮಿಷವೊಡ್ಡಿ ಕರೆಸಿಕೊಂಡು ಬಳಿಕ .62 ಸಾವಿರ ಸುಲಿಗೆ ಮಾಡಿ ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದರು.
ದೂರುದಾರ ಗೌತಮ್ ಆ.21ರಂದು ಮೊಬೈಲ್‌ನಲ್ಲಿ ಆನ್‌ಲೈನ್‌ನಲ್ಲಿ ಹುಡುಕುವಾಗ ‘ಲೊಕ್ಯಾಂಟೋ’ ಆ್ಯಪ್ ಮುಖಾಂತರ ಒಂದು ಲಿಂಕ್ ಬಂದಿದೆ. ಅದನ್ನು ತೆರೆದು ನೋಡಿ ಅದರಲ್ಲಿದ್ದ ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಕರೆ ಮಾಡಿದಾಗ, ಕರೆ ಸ್ವೀಕರಿಸಿದ ವ್ಯಕ್ತಿ ಹುಡುಗಿಯನ್ನು ಕೊಡಿಸುತ್ತೇನೆ, ಎಚ್‌ಎಸ್‌ಆರ್ ಲೇಔಟ್‌ನ 6ನೇ ಸೆಕ್ಟರ್ ರಿಲಯನ್ಸ್ ಡಿಜಿಟಲ್ ಬಳಿ ಬರುವಂತೆ ಸೂಚಿಸಿದ್ದಾನೆ. ಅದರಂತೆ ಗೌತಮ್ ಸಂಜೆ 7.30ರ ಸುಮಾರಿಗೆ ಸೂಚಿತ ಸ್ಥಳಕ್ಕೆ ತೆರಳಿದ್ದರು.
ನಿರ್ಜನ ಪ್ರದೇಶದಲ್ಲಿ ಸುಲಿಗೆ:
ಈ ವೇಳೆ ಆರೋಪಿಗಳು ಗೌತಮ್‌ನನ್ನು ಬಲವಂತವಾಗಿ ಆಟೋರಿಕ್ಷಾದೊಳಗೆ ಕೂರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಚಾಕು ತೋರಿಸಿ ಹಣ ನೀಡುವಂತೆ ಬೆದರಿಕೆ ಹಾಕಿದ್ದರು. ಆಗ ಗೌತಮ್ ತನ್ನ ಬಳಿ ಇದ್ದ .2 ಸಾವಿರ ನಗದು ನೀಡಿದ್ದರು. ಅಷ್ಟಕ್ಕೆ ಸುಮ್ಮನಾಗದ ಆರೋಪಿಗಳು ಯುಪಿಐ ಮುಖಾಂತರ .60 ಸಾವಿರ ಹಣ ವರ್ಗಾಯಿಸಿಕೊಂಡಿದ್ದರು. ಬಳಿಕ ‘ಈ ವಿಚಾರವನ್ನು ಯಾರಿಗಾದರೂ ಹೇಳಿದರೆ, ಸುಮ್ಮನೆ ಬಿಡುವುದಿಲ್ಲ’ ಎಂದು ಬೆದರಿಕೆ ಹಾಕಿ ಆಟೋದಿಂದ ಇಳಿಸಿ ಪರಾರಿಯಾಗಿದ್ದರು.
Mangaluru crime: ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ!
ಹಣ ಕಳೆದುಕೊಂಡ ಗೌತಮ್ ಈ ಸಂಬಂಧ ಎಚ್‌ಎಸ್‌ಆರ್ ಲೇಔಟ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಗೌತಮ್‌ನಿಂದ ಹಣ ವರ್ಗಾಯಿಸಿಕೊಂಡಿದ್ದ ಯುಪಿಐ ಐಡಿ ಹಾಗೂ ಮೊಬೈಲ್ ಸಂಖ್ಯೆ ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಲುಗೆಯ ಮಾತಾಡಿ ಸುಲಿಗೆ!
ಆರೋಪಿಗಳು ಲೊಕ್ಯಾಂಟೋ ಆ್ಯಪ್‌ನಲ್ಲಿ ಯುವತಿಯರ ಹೆಸರಿನಲ್ಲಿ ಖಾತೆ ತೆರೆದು ಸುಂದರ ಫೋಟೋ ಹಾಕುತ್ತಿದ್ದರು. ಈ ಫೋಟೋಗಳನ್ನು ನೋಡಿ ಸಂದೇಶ ಕಳುಹಿಸುವ ವ್ಯಕ್ತಿಗಳ ಜತೆಗೆ ಸಲುಗೆಯಿಂದ ಚಾಟಿಂಗ್ ಮಾಡುತ್ತಿದ್ದರು. ದೈಹಿಕ ಸಂಪರ್ಕ ಬೆಳೆಸಲು ಸಿದ್ಧ ಎನ್ನುವಂತೆ ಸಲುಗೆಯಿಂದ ಸಂದೇಶ ಕಳುಹಿಸಿದ್ದರು. ಆ ವ್ಯಕ್ತಿ ಆಸಕ್ತಿ ತೋರಿಸಿದರೆ ಸ್ಥಳದ ಮಾಹಿತಿ ನೀಡಿ ಆಹ್ವಾನಿಸುತ್ತಿದ್ದರು. ಇದನ್ನು ನಂಬಿ ಸ್ಥಳಕ್ಕೆ ಬಂದರೆ, ಚಾಕು ತೋರಿಸಿ ಬೆದರಿಸಿ ಹಣ, ಚಿನ್ನಾಭರಣ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಸುಲಿಗೆ ಮಾಡುತ್ತಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ