
ಬೆಂಗಳೂರು(ಜೂ.10): ತನಗೆ ಕಣ್ಣು ಸರಿಯಾಗಿ ಕಾಣುವುದಿಲ್ಲ ಎಂದು ಮನೆಗಳ್ಳತನಕ್ಕೆ ಮತ್ತೊಬ್ಬನ ನೆರವು ಪಡೆದು ಕೃತ್ಯ ಎಸಗುತ್ತಿದ್ದ ಕುಖ್ಯಾತ ಖದೀಮ ಹಾಗೂ ಆತನ ಸಹಾಯಕ ಮಾರತ್ತಹಳ್ಳಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ಆ್ಯಂಡರ್‌ಸನ್‌ಪೇಟೆಯ ಜ್ಞಾನಪ್ರಕಾಶ್ ಹಾಗೂ ಅರವಿಂದ ಅಲಿಯಾಸ್ ಮುಟಾಮಿ ಬಂಧಿತರಾಗಿದ್ದು, ಆರೋಪಿಗಳಿಂದ 80 ಗ್ರಾಂ ಚಿನ್ನಾಭರಣ ಹಾಗೂ 1.15 ಕೆಜಿ ಬೆಳ್ಳಿ ಹಾಗೂ ಲ್ಯಾಪ್‌ಟಾಪ್ ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಮುನೇಕೊಳಲದ ಭುವನೇಶ್ವರಿ ಲೇಔಟ್‌ನಲ್ಲಿ ಮನೆ ಬೀಗ ಮುರಿದು ಕಳ್ಳತನವಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಸಿಸಿಟಿವಿ ಕ್ಯಾಮೆರಾ ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೆಜಿಎಫ್‌ನ ಜ್ಞಾನಪ್ರಕಾಶ್ ವೃತ್ತಿಪರ ಕ್ರಿಮಿನಲ್ ಆಗಿದ್ದು, ಮೂರು ದಶಕಗಳಿಂದ ಮನೆಗಳ್ಳತನ ಕೃತ್ಯದಲ್ಲಿ ಆತ ಸಕ್ರಿಯವಾಗಿದ್ದಾನೆ. ಈ ಸಂಬಂಧ ಬೆಂಗಳೂರು ಸೇರಿದಂತೆ ವಿವಿಧೆಡೆ ಪ್ರಕರಣಗಳು ದಾಖಲಾಗಿವೆ. ಇತ್ತೀಚೆಗೆ 43 ವರ್ಷದ ಜ್ಞಾನಪ್ರಕಾಶ್‌ಗೆ ಕಣ್ಣು ಸರಿಯಾಗಿ ಕಾಣುತ್ತಿರಲಿಲ್ಲ. ಹಾಗಾಗಿ ಕಳ್ಳತನಕ್ಕೆ ನೆರವಾಗುವಂತೆ ಹಣದಾಸೆ ತೋರಿಸಿ ತನ್ನೂರಿನ ಯುವಕ ಅರವಿಂದ್‌ನನ್ನು ಬಳಸಿಕೊಂಡಿದ್ದ. ಇತ್ತೀಚೆಗೆ ಮುನೇಕೊಳಲು ಸೇರಿದಂತೆ ಜ್ಞಾನಪ್ರಕಾಶ್ ಎಸಗಿದ ಮನೆಗಳ್ಳತನಕ್ಕೆ ಅರವಿಂದ್ ಸಾಥ್ ಕೊಟ್ಟಿದ್ದ. ಆರೋಪಿಗಳ ಬಂಧನದಿಂದ ಬಾಣಸವಾಡಿ ಹಾಗೂ ಮಾರತ್ತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮೂರು ಮನೆಗಳ್ಳತನ ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ