Bengaluru Crime: ಐಷಾರಾಮಿ ಕಾರು ಕದ್ದು ತಂದು ಬೆಂಗ್ಳೂರಲ್ಲಿ ಮಾರಾಟ, ಇಬ್ಬರ ಬಂಧನ

By Kannadaprabha NewsFirst Published Sep 3, 2022, 7:43 AM IST
Highlights

ಆಸ್ಟಿನ್‌ ಟೌನ್‌ನಲ್ಲಿ ಕಳವು ಕಾರು ಮಾರಾಟಕ್ಕೆ ಬಂದಿದ್ದಾಗ ಆರೋಪಿಗಳನ್ನು ಸೆರೆ ಹಿಡಿದ ಪೊಲೀಸರು 

ಬೆಂಗಳೂರು(ಸೆ.03):  ಹೊರ ರಾಜ್ಯಗಳಲ್ಲಿ ಐಷರಾಮಿ ಕಾರುಗಳನ್ನು ಕದ್ದು ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಅಶೋಕ ನಗರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ. ಪಾದರಾಯನಪುರದ ಆಯಾಜ್‌ ಪಾಷ ಅಲಿಯಾಸ್‌ ಮೌಲಾ ಹಾಗೂ ಘೋರಿಪಾಳ್ಯದ ಮತೀನ್‌ವುದ್ದೀನ್‌ ಬಂಧಿತರಾಗಿದ್ದು, ಆರೋಪಿಗಳಿಂದ 1.2 ಕೋಟಿ ರು. ಮೌಲ್ಯದ 9 ಕಾರುಗಳನ್ನು ಜಪ್ತಿ ಮಾಡಲಾಗಿದೆ. ತಪ್ಪಿಸಿಕೊಂಡಿರುವ ಸೈಯದ್‌ ಸಮೀರ್‌, ಡೆಲ್ಲಿ ಇಮ್ರಾನ್‌, ತನ್ವೀರ್‌ ಹಾಗೂ ಯಾರಬ್‌ ಪತ್ತೆಗೆ ತನಿಖೆ ನಡೆದಿದೆ.

ಇತ್ತೀಚಿಗೆ ಆಸ್ಟಿನ್‌ ಟೌನ್‌ ಸಮೀಪ ಅನುಮಾನಾಸ್ಪದವಾಗಿ ಕಾರು ನಿಲ್ಲಿಸಿಕೊಂಡು ಪಾಷ ಹಾಗೂ ಮತೀನ್‌ ನಿಂತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಇನ್ಸ್‌ಪೆಕ್ಟರ್‌ ಶ್ರೀಕಾಂತ್‌.ಎಸ್‌.ತೋಟಗಿ ಹಾಗೂ ಸಬ್‌ ಇನ್ಸ್‌ಪೆಕ್ಟರ್‌ ಎನ್‌.ಸಿ.ಮಲ್ಲಿಕಾರ್ಜುನ್‌ ತಂಡವು, ತಕ್ಷಣವೇ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಾರು ಕಳ್ಳತನ ಕೃತ್ಯಗಳು ಬಯಲಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತುಮಕೂರು: ಪದೇ ಪದೇ ಮೂತ್ರ ಮಾಡಿದ ಬಾಲಕನ ಗುಪ್ತಾಂಗ ಸುಟ್ಟ ಶಿಕ್ಷಕಿ

ಮೆಕ್ಯಾನಿಕ್‌ಗಳಾದ್ರು ಕಳ್ಳರು:

ಪಾಷ ಹಾಗೂ ಮತೀನ್‌ವುದ್ದೀನ್‌ ಮೆಕ್ಯಾನಿಕ್‌ಗಳಾಗಿದ್ದು, ಹಣದಾಸೆಗೆ ಕಾರುಗಳ್ಳತಕ್ಕಿಳಿದಿದ್ದರು. ಕೆಲ ದಿನಗಳ ಹಿಂದೆ ಈ ಇಬ್ಬರಿಗೆ ಡೆಲ್ಲಿ ಇಮ್ರಾನ್‌ ಪರಿಚಯವಾಗಿದೆ. ವೃತ್ತಿಪರ ಕಾರು ಕಳ್ಳನಾದ ಆತ, ತನ್ನ ಸಹಚರರ ಮೂಲಕ ದೆಹಲಿ, ಪಂಜಾಬ್‌, ಹಿಮಾಚಲ ಪ್ರದೇಶ ಹಾಗೂ ಉತ್ತರ ಪ್ರದೇಶ ಸೇರಿದಂತೆ ಹೊರ ರಾಜ್ಯಗಳಲ್ಲಿ ಐಷರಾಮಿ ಕಾರುಗಳನ್ನು ಕಳವು ಮಾಡುತ್ತಿದ್ದ. ಬಳಿಕ ಅವುಗಳಿಗೆ ನಕಲಿ ನಂಬರ್‌ ಪ್ಲೇಟ್‌ಗಳನ್ನು ಅಳವಡಿಸಿ ಪಾಷ ಹಾಗೂ ಮತೀನ್‌ ಮೂಲಕ ಬೆಂಗಳೂರಿನಲ್ಲಿ ಡೆಲ್ಲಿ ಇಮ್ರಾನ್‌ ಗ್ಯಾಂಗ್‌ ಮಾರುತ್ತಿದ್ದರು. ಈಗ ಆರೋಪಿಗಳಿಂದ ಹುಂಡೈ ಕ್ರೇಟಾ, 2 ಇನ್ನೋವಾ, ಮಾರುತಿ ಬಲೆನೋ ಹಾಗೂ ವೋಲ್ಸ್‌ ವ್ಯಾಗನ್‌ ಸೇರಿ 9 ಕಾರುಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳ್ಳ ಕಾರುಗಳ ಮಾರಾಟದ ಪಿಎಸ್‌ಐ ಮಲ್ಲಿಕಾರ್ಜುನ್‌ ಅವರಿಗೆ ಮಾಹಿತಿ ಸಿಕ್ಕಿತು. ಕೂಡಲೇ ಆ ಸುಳಿವು ಬೆನ್ನಹತ್ತಿದ್ದ ಅವರು, ಆಸ್ಟಿನ್‌ ಟೌನ್‌ನಲ್ಲಿ ಕಳವು ಕಾರು ಮಾರಾಟಕ್ಕೆ ಬಂದಿದ್ದಾಗ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
 

click me!