ಉಪ್ಪಿಟ್ಟನಲ್ಲಿ ವಿಷಹಾಕಿ ಗಂಡನನ್ನೇ ಕೊಲೆ ಮಾಡಲು ಯತ್ನಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಗೋರೆಬಾಳ ಗ್ರಾಮದಲ್ಲಿ ನಡೆದ ಘಟನೆ.
ಬೆಳಗಾವಿ(ಆ.19): ಉಪ್ಪಿಟ್ಟನಲ್ಲಿ ವಿಷಹಾಕಿ ಗಂಡನನ್ನೇ ಕೊಲೆ ಮಾಡಲು ಯತ್ನಿಸಿರುವ ಘಟನೆ ಸವದತ್ತಿ ತಾಲೂಕಿನ ಗೋರೆಬಾಳ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಈ ಪ್ರಕರಣ ಕುರಿತು ಪತ್ನಿ ಹಾಗೂ ಆಕೆಯ ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ.
ಗೋರೆಬಾಳ ಗ್ರಾಮದ ನಿಂಗಪ್ಪ ಫಕ್ಕೀರಪ್ಪ ಹಮಾನಿ (35) ವಿಷ ಹಾಕಿದ ಉಪ್ಪಿಟ್ಟು ತಿಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈತನ ಪತ್ನಿ ಸಾವಕ್ಕ ನಿಂಗಪ್ಪ ಹಮಾನಿ (32) ಹಾಗೂ ಈಕೆಯ ಸಹೋದರ ಫಕ್ಕೀರಪ್ಪ ಲಕ್ಷ್ಮಣ ಸಿಂದೋಗಿ ಬಂಧಿತರು. ಈ ಕುರಿತು ಸದವತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಲ್ಲಿ ಪೋಕ್ಸೋ ಆರೋಪಿ ನೇಣು ಬಿಗಿದುಕೊಂಡು ಆತ್ಮಹತ್ಯೆ: ಸ್ವಗ್ರಾಮಕ್ಕೆ ಮೃತದೇಹ!
ಆಗಿದ್ದೇನು?:
ನಿಂಗಪ್ಪ ಹಮಾನಿ ಹೆಸರಿನಲ್ಲಿರುವ 2 ಎಕರೆ ಜಮೀನನ್ನು ತಮ್ಮದಾಗಿಸಿಕೊಳ್ಳುವ ದುರುದ್ದೇಶದಿಂದ ಆರೋಪಿ ಫಕ್ಕೀರಪ್ಪ ಸಿಂದೋಗಿ ಆಕೆಯ ಸಹೋದರಿ ಸಾವಕ್ಕನಿಗೆ ಪ್ರಚೋದನೆ ನೀಡಿದ್ದಾನೆ. ಈತನ ಪ್ರಚೋದನೆಯಿಂದ ಪತ್ನಿ ಸಾವಕ್ಕ ತನ್ನ ಪತಿಗೆ ವಿಷಯ ಹಾಕಿದ ಉಪ್ಪಿಟ್ಟು ಮಾಡಿ ಕೊಟ್ಟಿದ್ದಾಳೆ. ಇದನ್ನು ತಿಂದು ಅಸ್ವಸ್ಥನಾಗುತ್ತಿದ್ದಂತೆ ಸ್ಥಳೀಯರು ತಕ್ಷಣ ಚಿಕಿತ್ಸೆಗೆಂದು ಹುಬ್ಬಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದು, ನೊಂದ ನಿಂಗಪ್ಪ ಹಮಾನಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾನೆ. ಆದರೆ, ನಿಂಗಪ್ಪ ತಿಂದು ಬಿಟ್ಟಿದ್ದ ಉಪ್ಪಿಟ್ಟನ್ನು ಅವರ ಮನೆಯಲ್ಲಿದ್ದ ನಾಯಿ ಮತ್ತು ಬೆಕ್ಕು ತಿಂದು ಸಾವನ್ನಪ್ಪಿದ್ದರಿಂದ ಅನುಮಾನಗೊಂಡು ನಿಂಗಪ್ಪನ ತಂದೆ ಫಕ್ಕೀರಪ್ಪ ಯಲ್ಲಪ್ಪ ಹಮಾನಿ ದೂರು ನೀಡಿದ್ದಾನೆ.
ಈ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ತಮ್ಮ ರೀತಿಯಲ್ಲಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪತ್ನಿ ಸಾವಕ್ಕ ಹಮಾನಿ ಹಾಗೂ ಈಕೆಯ ಸಹೋದರ ಫಕ್ಕೀರಪ್ಪ ಸಿಂದೋಗಿ ಕೃತ್ಯ ಎಸಗಿರುವ ಕುರಿತು ಮಾಹಿತಿ ನೀಡಿದ್ದಾರೆ.