ಭ್ರಷ್ಟಾಚಾರ ನಿಗ್ರಹದಳ ಡಿವೈಎಸ್‌ಪಿ ಎಮ್ ವಿ ಮಲ್ಲಾಪುರ ಹೆಸರಲ್ಲಿ ಫೋನ್ ಮಾಡಿ ರೋಣ ತಹಶೀಲ್ದಾರ್ ಸೇರಿದಂತೆ ಅನೇಕರಿಗೆ ಹಣದ ಬೇಡಿಕೆ ಇಟ್ಟಿದ್ದ ಆನ್‌ಲೈನ್ ಖದೀಮರನ್ನ ಎಸಿಬಿ ಟೀಮ್ ಲಾಕ್ ಮಾಡಿದೆ.
ವರದಿ: ಗಿರೀಶ್ ಕಮ್ಮಾರ, ಏಷ್ಯಾನೆಟ್ ಸುವರ್ಣ ನ್ಯೂಸ್, ಗದಗ
ಗದಗ (ಮೇ.28): ಭ್ರಷ್ಟಾಚಾರ ನಿಗ್ರಹದಳ (ACB) ಡಿವೈಎಸ್‌ಪಿ ಎಮ್ ವಿ ಮಲ್ಲಾಪುರ ಹೆಸರಲ್ಲಿ ಫೋನ್ ಮಾಡಿ ರೋಣ ತಹಶೀಲ್ದಾರ್ ಸೇರಿದಂತೆ ಅನೇಕರಿಗೆ ಹಣದ ಬೇಡಿಕೆ ಇಟ್ಟಿದ್ದ ಆನ್‌ಲೈನ್ ಖದೀಮರನ್ನ ಎಸಿಬಿ ಟೀಮ್ ಲಾಕ್ ಮಾಡಿದೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಸದಲಗಾ ಗ್ರಾಮದ ಮುರಿಗೆಪ್ಪಾ ಕುಂಬಾರ (56), ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಮುಗುಲಿ ಗ್ರಾಮದ ರಜನಿಕಾಂತ್ (46) ಬಂಧಿತ ಆರೋಪಿಗಳು. ಆರೋಪಿಗಳನ್ನ ಹಾಸನದಲ್ಲೇ ಎಸಿಬಿ ಅಧಿಕಾರಿಗಳು ಖೆಡ್ಡಾಕ್ಕೆ ಕೆಡವಿದ್ದಾರೆ. ಬಂಧಿತರಿಂದ ಕೆಲ ಸಿಮ್ ಕಾರ್ಡ್ ಹಾಗೂ ಮೊಬೈಲ್ ವಶಕ್ಕೆ ಪಡೆದು ತನಿಖೆ ನಡೆಸಲಾಗ್ತಿದೆ ಅಂತಾ ಮಾಧ್ಯಮ ಪ್ರಕಟನೆಯಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ.
ಭಷ್ಟಾಚಾರ ನಿಗ್ರಹ ದಳ ಅಧಿಕಾರಿಗಳ ಹೆಸರಲ್ಲಿ ಚೀಟ್ ಮಾಡುತ್ತಿದ್ದ ಖದೀಮರ ಟೀಮ್: ಅಧಿಕಾರಿಗಳನ್ನ ಟಾರ್ಗೆಟ್ ಮಾಡಿ ಎಸಿಬಿ ದಾಳಿಯ ಭಯ ಹುಟ್ಟಿಸಿ ಈ ಇಬ್ಬರು ಖದೀಮರು ವಂಚನೆ ಮಾಡುತ್ತಿದ್ದರು. ಎಸಿಬಿ ರೇಡ್ ತಪ್ಪಿಸೋದಕ್ಕೆ ಗೂಗಲ್ ಪೇ ಮೂಲಕ ಹಣ ಸೆಂಡ್ ಮಾಡಿ ಅಂತಾ ವಂಚನ ಮಾಡ್ತಿದ್ರು. ರಾಜ್ಯಾದ್ಯಂತ ವಿವಿಧ ಪೊಲೀಸ್ ಠಾಣೆಗಳಲ್ಲಿ ಫೇಕ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು.
Gadag: 'ಎಸಿಬಿ ರೇಡ್' ನಾಟಕ ಮಾಡಿ ಹಣ ಕಿತ್ತಲು ಮುಂದಾದ ಖದೀಮರ ಟೀಮ್!
ಆರೋಪಿಗಳ ವಿರುದ್ಧ ರಾಜ್ಯಾದ್ಯಂತ 40ಕ್ಕೂ ಹೆಚ್ಚು ಕೇಸ್: ಅಧಿಕಾರಿಗಳನ್ನ ಟಾರ್ಗೆಟ್ ಮಾಡ್ಕೊಂಡು ಫೋನ್ ಮೂಲಕವೇ ಆಪರೇಟ್ ಮಾಡ್ತಿದ್ದ ಈ ತಂಡ, ರಾಜ್ಯದ ವಿವಿಧೆಡೆ ಮೋಸ ಮಾಡಿರೋ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಬಂದಿತ್ತು. ಆರೋಪಿ ಮುರಿಗೆಪ್ಪಾ ಕುಂಬಾರ ಸುಮಾರು 40 ಕ್ಕೂ ಹೆಚ್ಚು ಫ್ರಾಡ್ ಕೇಸ್ ಮಾಡಿದ್ದ. ಎರಡನೇ ಆರೋಪಿ ರಜನಿಕಾಂತ್ 6 ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಇವರ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೇಸ್ ಕೂಡ ದಾಖಲಾಗಿ ತನಿಖಾ ಹಂತದಲ್ಲಿವೆ. ಕೆಲವು ಪ್ರಕರಣಗಳು ವಿಚಾರಣೆ ಹಂತದಲ್ಲಿದ್ದು, ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯದಿಂದ ವಾರೆಂಟ್ ಸಹ ಹೊರಡಿಸಲಾಗಿತ್ತು. ಅಲ್ಲದೆ, ಇವರಿಬ್ಬರು ಈ ಹಿಂದೆ ಬಂಧಿತರಾಗಿ, ನ್ಯಾಯಾಲಯದಿಂದ ಜಾಮೀನು ಪಡೆದು ಪರಾರಿಯಾಗಿದ್ದರು ಎನ್ನಲಾಗಿದೆ.
ರೋಣ ತಹಶೀಲ್ದಾರ್ ಆಗಿದ್ದ ಜಿಬಿ ಜಕ್ಕನಗೌಡರ್ ಅವರಿಗೂ ಬ್ಲ್ಯಾಕ್ ಮೇಲ್: ಗದಗ ಜಿಲ್ಲೆಯ ರೋಣ ತಹಶೀಲ್ದಾರ್ ಆಗಿದ್ದ ಜಿಬಿ ಜಕ್ಕನಗೌಡರ್ ಅವರಿಗೂ ಪೀಡಿಸಿದ್ದ ಖದೀಮರು, ಹಣದ ಬೇಡಿಕೆ ಇಟ್ಟಿದ್ರು. ಈ ಬಗ್ಗೆ ಮೇ ತಿಂಗಳ ನಾಲ್ಕನೇ ತಾರೀಕು ರೋಣ ಪೊಲೀಸ್ ಸ್ಟೇಷನ್‌ನಲ್ಲಿ ಕೇಸ್ ದಾಖಲಾಗಿತ್ತು. ಏಪ್ರಿಲ್ ತಿಂಗಳ 24 ನೇ ತಾರೀಕು ಫೋನ್ ಮಾಡಿದ್ದ ಮುರಗೆಪ್ಪ ಕುಂಬರ್, ಎಸಿಬಿ ಅಧಿಕಾರಿ ಎಮ್ ವಿ ಮಲ್ಲಾಪುರ ಹೆಸರು ಹೇಳಿದ್ದ. 'ಎಸಿಬಿ ಅಧಿಕಾರಿ ಮಲ್ಲಾಪುರ ಮಾತಾಡ್ತಿದಿನಿ. ಅಕ್ರಮ ಆಸ್ತಿ ಗಳಿಕೆ ವಿಚಾರಕ್ಕೆ ಸಬಂಧಿಸಿದಂತೆ ತಮ್ಮ ಮೇಲೆ ದೂರು ಬಂದಿದೆ. ದಾಳಿ ತಪ್ಪಿಸೋದಕ್ಕೆ ಡೀಲ್ ಮಾಡ್ಕೊಳಿ' ಅಂತಾ ಹೇಳಿದ್ದ. ಬೆಂಗಳೂರಿಂದ ಐಜಿಪಿ ಫಾರಿನ್‌ಗೆ ಹೊರಟಿದಾರೆ. ಪ್ಲೇನ್ ಟಿಕೆಟ್ ಬೆಲೆ 60 ಸಾವಿರ, ಇಬ್ಬರಿದ್ದಾರೆ. 1ಲಕ್ಷ 20 ಸಾವಿರ ಹಣ ಫೋನ್ ಪೇ ಮಾಡ್ಬಿಡಿ. ನಿಮ್ಮ ಕೇಸ್ ನಾವ್ ನೋಡ್ಕೊತಿವಿ ಅಂತಾ ಹೇಳಿದ್ನಂತೆ. ತಹಶೀಲ್ದಾರ್ ಜಿಬಿ ಜಕ್ಕನಗೌರ್ ಇದೇ ವಿಚಾರಕ್ಕೆ ಪೊಲೀಸರಿಗೆ ದೂರು ನೀಡಿದ್ರು. ವಿಷಯದ ಗಂಭೀರತೆ ಅರೆತಿದ್ದ ಅಧಿಕಾರಿಗಳು ಟೀಮ್ ರಚಿಸಿ ಆರೋಪಿಯನ್ನ ಖೆಡ್ಡಾಕ್ಕೆ ಬೀಳಿಸಿದ್ದಾರೆ.
ಎಸಿಬಿ ಹೆಸರಿನಲ್ಲಿ ಅಧಿಕಾರಿಗಳಿಗೆ ಬೆದರಿಕೆ, ಗೂಗಲ್ ಪೇ ಮೂಲಕ ಹಣಕ್ಕೆ ಬೇಡಿಕೆ
ಆರೋಪಿಗಳ ಪತ್ತೆಗೆ ನಾಲ್ಕು ಟೀಮ್ ರಚನೆ: ಬಾಗಲಕೋಟೆ ಎಸ್‌ಪಿ ಲೋಕೇಶ್ ಜಗಲಾಸರ್, ಹಾಸನ ಎಸ್‌ಪಿ ಆರ್.ಶ್ರೀನಿವಾಸ್‌ಗೌಡ, ಬೆಳಗಾವಿ ಎಸಿಬಿ ಉತ್ತರ ವಲಯದ ಪೊಲೀಸ್ ಅಧೀಕ್ಷಕ ಬಿ.ಎಸ್.ನೇಮಗೌಡ, ಮೈಸೂರು ಎಸಿಬಿ ದಕ್ಷಿಣ ವಲಯದ ಪೊಲೀಸ್ ಅಧೀಕ್ಷಕ ಸಜೀತ ವಿ.ಜೆ. ಅವರ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಲಾಗಿತ್ತು. ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆ ತಲಾಶ್ ನಡೆಸಿ ಸದ್ಯ ಇಬ್ಬರನ್ನ ಅಂದರ್ ಮಾಡಿದಾರೆ.. ಉಳಿದಂತೆ ಈ ಟೀಮ್ ನಲ್ಲಿ ಮತ್ತಷ್ಟು ಜನರಿರೋ ಬಗ್ಗೆಯೂ ಪೊಲೀಸರಿಗೆ ಅನುಮಾನವಿದ್ದು, ತನಿಖೆ ನಡೆಸಲಾಗಿದೆ.