ಬೋರ್‌ವೆಲ್‌ ಆನ್‌ ಮಾಡುವಾಗ ಕರೆಂಟ್‌ ಶಾಕ್‌: ಅಜ್ಜ, ಅಜ್ಜಿ, ಮೊಮ್ಮಗಳು ಸಾವು

By Kannadaprabha NewsFirst Published Aug 13, 2023, 7:04 PM IST
Highlights

ನಿರ್ಮಾಣ ಹಂತದ ಕಟ್ಟಡದಲ್ಲಿರುವ ಬೋರ್‌ವೆಲ್‌ ಪ್ರಾರಂಭಿಸಲು ಹೋದಾಗ ವಿದ್ಯುತ್‌ ಶಾಕ್‌ ತಗುಲಿ ಎಂಟು ವರ್ಷದ ಮಗು ಸೇರಿದಂತೆ ಮೂವರು ದಾರುಣ ಸಾವಿಗೀಡಾದ ಘಟನೆ ಬೆಳಗಾವಿಯ ಶಾಹುನಗರದಲ್ಲಿ ನಡೆದಿದೆ. 

ಬೆಳಗಾವಿ (ಆ.13): ನಿರ್ಮಾಣ ಹಂತದ ಕಟ್ಟಡದಲ್ಲಿರುವ ಬೋರ್‌ವೆಲ್‌ ಪ್ರಾರಂಭಿಸಲು ಹೋದಾಗ ವಿದ್ಯುತ್‌ ಶಾಕ್‌ ತಗುಲಿ ಎಂಟು ವರ್ಷದ ಮಗು ಸೇರಿದಂತೆ ಮೂವರು ದಾರುಣ ಸಾವಿಗೀಡಾದ ಘಟನೆ ಬೆಳಗಾವಿಯ ಶಾಹುನಗರದಲ್ಲಿ ನಡೆದಿದೆ. ಮೂಲತಃ ರಾಮದುರ್ಗ ತಾಲೂಕಿನ ಅರಬೆಂಚಿ ತಾಂಡಾದ ನಿವಾಸಿಗಳಾದ ಈರಪ್ಪಾ ಲಮಾಣಿ (50), ಶಾಂತವ್ವ ಲಮಾಣಿ (45) ಹಾಗೂ ಇವರ ಮೊಮ್ಮಗಳಾದ ಅನ್ನಪೂರ್ಣ ಲಮಾಣಿ (8) ವಿದ್ಯುತ್‌ ಅವಘಡದಲ್ಲಿ ಬಲಿಯಾದವರು. ತಮ್ಮ ಬದುಕಿನ ಬಂಡಿ ಸಾಗಿಸಲು ಅರಬೆಂಚಿ ತೊರೆದು ಕಾವಲು ಕೆಲಸ ಮಾಡುವ ಸಂಬಂಧ ಬೆಳಗಾವಿಗೆ ಬಂದಿದ್ದರು. ಆದರೆ, ದುರಾದೃಷ್ಟವಶಾತ್‌ ವಿದ್ಯುತ್‌ ಶಾಕ್‌ಗೆ ಮೂವರೂ ಬಲಿಯಾಗಿದ್ದಾರೆ.

ಏನಿದು ಘಟನೆ?: ಮೃತ ಈರಪ್ಪಾ ಲಮಾಣಿ ಶಾಹುನಗರದ ನಿರ್ಮಾಣ ಹಂತದಲ್ಲಿರುವ ಮನೆಯೊಂದರ ವಾಚಮನ್‌ ಆಗಿ ಕೆಲಸ ಮಾಡುತ್ತಿದ್ದರು. ಈ ಕಟ್ಟಡದಲ್ಲಿರುವ ಬೋರವೆಲ್‌ ಪ್ರಾರಂಭಿಸಲು ಈರಪ್ಪ ಮುಂದಾಗಿದ್ದಾನೆ. ಆಗ ಆತನಿಗೆ ವಿದ್ಯುತ್‌ ಸ್ಪರ್ಶವಾಗಿ ನೆಲಕ್ಕೆ ಬಿದ್ದು ಹೊರಳಾಡಿದ್ದಾನೆ. ಇದನ್ನು ಕಂಡ ಆತನ ಪತ್ನಿ ಶಾಂತವ್ವ ತನ್ನ ಮೊಮ್ಮಗಳನ್ನು ಕರೆದುಕೊಂಡು ಓಡೋಡಿ ಬಂದಿದ್ದಾಳೆ. ಈ ವೇಳೆ ಆತಂಕದಲ್ಲಿದ್ದ ಶಾಂತವ್ವ ಹಿಂದೆ ಮುಂದೆ ನೋಡದೆ ನೆಲಕ್ಕೆ ಬಿದ್ದಿದ್ದ ಈರಪ್ಪನನ್ನು ಮುಟ್ಟಿದ್ದಾಳೆ. 

ಪ್ರತಿಯೊಬ್ಬರು ಸ್ವಂತ ಮನೆ ಹೊಂದಬೇಕೆಂಬುದು ನಮ್ಮ ಗುರಿ: ಸಚಿವ ಪರಮೇಶ್ವರ್‌

ಅಷ್ಟರದಲ್ಲಿ ವಿದ್ಯುತ್‌ ಈರಪ್ಪನ ದೇಹಕ್ಕೆ ಪಸರಿಸಿದ್ದರಿಂದ ಶಾಂತವ್ವ ಹಾಗೂ ಬಾಲಕಿ ಅನ್ನಪೂರ್ಣಗೂ ವಿದ್ಯುತ್‌ ತಗುಲಿದೆ. ದುರಾದೃಷ್ಟಎಂಬಂತೆ ಮೂವರು ಸ್ಥಳದಲ್ಲೇ ಅಸುನೀಗಿದ್ದಾರೆ. ಶನಿವಾರ ಬೆಳಗ್ಗೆ ವಿದ್ಯುತ್‌ ದುರಂತದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಸುದ್ದಿ ನಗರದಲ್ಲಷ್ಟೇ ಅಲ್ಲದೇ ಜಿಲ್ಲೆಯಾದ್ಯಂತ ಪಸರಿಸಿತು. ಸುತ್ತಮುತ್ತಲಿನ ಜನರು ಜಮಾಯಿಸಿ ಮರುಕ ಪಟ್ಟರು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ನಂತರ ಮಾಹಿತಿ ಪಡೆದ ಡಿಸಿಪಿ ಸ್ನೇಹಾ ಪಿ.ವಿ ಹಾಗೂ ಎಪಿಎಂಸಿ ಪೊಲೀಸರು ದೌಡಾಯಿಸಿ ಘಟನೆಯ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹೊಟ್ಟೆಪಾಡಿಗೆ ನಗರಕ್ಕೆ ಬಂದಿದ್ದ ಕುಟುಂಬ: ಹೊಟ್ಟೆಪಾಡಿಗೆಂದು ರಾಮದುರ್ಗ ತಾಲೂಕಿನ ಅರಬೆಂಚಿ ತಾಂಡಾದಿಂದ ಬೆಳಗಾವಿಯ ಶಾಹುನಗರಕ್ಕೆ ಈರಪ್ಪ ತನ್ನ ಪತ್ನಿ, ಮೊಮ್ಮಗಳೊಂದಿಗೆ ಬಂದಿದ್ದ. ಒಂದೇ ಕುಟುಂಬದ ಮೂವರು ನಿರ್ಮಾಣ ಹಂತದ ಕಟ್ಟಡದಲ್ಲಿ ಕಾವಲುಗಾರನಾಗಿ ಸೇರಿಕೊಂಡಿದ್ದ. ಬಂದ ಅಲ್ಪ ಕೂಲಿಯಿಂದ ಹೊಟ್ಟೆಹೊರೆಯುತ್ತ ಬಾಲಕಿಯ ಓದು ಹಾಗೂ ಕ್ಷೇಮ ನೋಡಿಕೊಳ್ಳುತ್ತಿದ್ದರು. ರಾಮದುರ್ಗ ತಾಲೂಕಿನ ಅರಬೆಂಚಿ ತಾಂಡಾದಲ್ಲಿ ಬಾಲಕಿಯ ಪೋಷಕರು ಉಪಜೀವನ ನಡೆಸುತ್ತಿದ್ದರು. ಕೆಲ ವರ್ಷಗಳಿಂದ ಅಜ್ಜ, ಅಜ್ಜಿಯೊಂದಿಗೆ ಮೊಮ್ಮಗಳು ಬೆಳಗಾವಿಯಲ್ಲಿದ್ದಾರೆ.

ನಿರ್ಮಾಣ ಹಂತದ ಕಟ್ಟಡದ ಬೋರ್‌ವೆಲ್‌ ವಿದ್ಯುತ್‌ ಅವಘಡದಲ್ಲಿ ಮೃತಪಟ್ಟಬಾಲಕಿ ಅನ್ನಪೂರ್ಣ, ಈರಪ್ಪಾ, ಶಾಂತವ್ವ ಕುಟುಂಬಸ್ಥರು ಸ್ಥಳಕ್ಕೆ ಕಟ್ಟಡದ ಮಾಲೀಕ, ಇಂಜಿನಿಯರ್‌ ಬಂದು ಸ್ಥಳದಲ್ಲಿಯೇ ಪರಿಹಾರ ನೀಡಬೇಕೆಂದು ಶವ ಇಟ್ಟು ಪ್ರತಿಭಟನೆ ನಡೆಸಿದರು. ನಂತರ ಎಪಿಎಂಸಿ ಪೊಲೀಸರು ಕುಟುಂಬಸ್ಥರ ಮನವೊಲಿಕೆಗೆ ಹರಸಾಹಸ ಪಟ್ಟರು. ಆದರೂ ಪೊಲೀಸರ ಮನವೊಲಿಗೆ ಸೊಪ್ಪು ಹಾಕದ ಕುಟುಂಬಸ್ಥರ ವಿರೋಧದ ನಡುವೆಯೂ ಪೊಲೀಸರು ಮೃತ ದೇಹವನ್ನು ಬಿಮ್ಸ್‌ ಶವಾಗಾರಕ್ಕೆ ತೆಗೆದುಕೊಂಡು ಹೋಗಿ ಮರಣೋತ್ತರ ಪರೀಕ್ಷೆ ನಡೆಸಿದರು. ಈ ಕುರಿತು ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತರಿಗೆ ತಲಾ .2 ಲಕ್ಷ ಪರಿಹಾರ ಕೊಡಿಸಿದ ಸಚಿವೆ: ಶಾಹುನಗರದಲ್ಲಿ ವಿದ್ಯುತ್‌ ದುರಂತದಲ್ಲಿ 3 ಜನರು ಸಾವಿಗೀಡಾದ ಸುದ್ದಿ ತಿಳಿಯುತ್ತಿದ್ದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೇ ಹೆಬ್ಬಾಳಕರ ಧಾವಿಸಿ, ಕುಟುಂಬಕ್ಕೆ ಸಾಂತ್ವನ ಹೇಳಿದರು. ಜತೆಗೆ ಸರ್ಕಾರದಿಂದ ತಲಾ .2 ಲಕ್ಷ ಪರಿಹಾರ ಮಂಜೂರು ಮಾಡಿಸಿದರು. ಬಳಿಕ ಲಕ್ಷ್ಮೇ ತಾಯಿ ಫೌಂಡೇಶನ್‌ ವತಿಯಿಂದ ಸಹ ಆರ್ಥಿಕ ಸಹಾಯ ಮಾಡಿದರು. ವಿದ್ಯುತ್‌ ಶಾಕ್‌ನಿಂದ ಇಲ್ಲಿನ ಶಾಹುನಗರದ ಮನೆಯಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ಅವಘಡ ನಡೆದಿದ್ದು ಅಜ್ಜ, ಅಜ್ಜಿ, ಮೊಮ್ಮಗಳು ಸೇರಿ ಮೂವರು ಮೃತಪಟ್ಟಿದ್ದಾರೆ. 

ಕಸಾಪಗೆ 1 ಕೋಟಿ ಸದಸ್ಯರ ನೋಂದಣಿ ಗುರಿ: ಮಹೇಶ್‌ ಜೋಶಿ

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸಚಿವೆ ಲಕ್ಷ್ಮೇ ಹೆಬ್ಬಾಳಕರ, ಮೃತ ಕುಟುಂಬದವರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು. ಜತೆಗೆ ಮುಖ್ಯಮಂತ್ರಿಗಳಿಗೆ ಸ್ಥಳದಿಂದಲೇ ಕರೆ ಮಾಡಿ ಈ ಘಟನೆಯ ಬಗ್ಗೆ ವಿವರಿಸಿ, ಪ್ರತಿ ವ್ಯಕ್ತಿಗೆ ತಲಾ . 2 ಲಕ್ಷ ಮಂಜೂರು ಮಾಡಿ ಕೊಡುವಂತೆ ಕೋರಿದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ತ್ವರಿತಗತಿಯಲ್ಲಿ ಪರಿಹಾರದ ಹಣ ಬಿಡುಗಡೆಗೊಳಿಸಲು ಆದೇಶ ಹೊರಡಿಸಿದ್ದಾರೆ. ಇದಲ್ಲದೆ ಲಕ್ಷ್ಮೇ ತಾಯಿ ಫೌಂಡೇಶನ್‌ನಿಂದಲೂ ಆರ್ಥಿಕ ಸಹಾಯ ಮಾಡಿದರು.

click me!