
ಬೆಂಗಳೂರು ದಕ್ಷಿಣ (ನ.22): ಒಡಹುಟ್ಟಿದ ತಮ್ಮನನ್ನು ಅಣ್ಣನೇ ಕೊಲೆ ಮಾಡಿ ಮೃತದೇಹವನ್ನು ರಸ್ತೆ ಬದಿಯ ಪೊದೆಗೆ ಎಸೆದಿರುವ ಘಟನೆ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಲಬುರಗಿ ಜಿಲ್ಲೆಯ ಆಳಂದ ಮೂಲದ ಧನರಾಜ್ (24) ಕೊಲೆಯಾದವ. ಹತ್ಯೆ ಮಾಡಿದ ಅಣ್ಣ ಶಿವರಾಜ್(28) ಮತ್ತು ಆತನ ಸ್ನೇಹಿತರಾದ ಸಂದೀಪ್(24), ಪ್ರಶಾಂತ್(26) ಎಂಬುವರನ್ನು ಬನ್ನೇರುಘಟ್ಟ ಪೊಲೀಸ್ ಇನ್‌ಸ್ಪೆಕ್ಟರ್ ಕೃಷ್ಣಕುಮಾರ್ ನೇತೃತ್ವದ ತಂಡ ಬಂಧಿಸಿದೆ.
ಅಣ್ಣ ಶಿವರಾಜ್ ಕ್ಯಾಬ್ ಡ್ರೈವರ್ ಕೆಲಸ ಮಾಡಿಕೊಂಡು ಹೆಚ್.ಎಸ್.ಆರ್ ಲೇಔಟ್ ನಲ್ಲಿ ವಾಸವಾಗಿದ್ದ, ತಮ್ಮ ಧನರಾಜ್ ಕಲಬುರ್ಗಿಯಲ್ಲಿ ತಂದೆ ತಾಯಿಯ ಜೊತೆಗೆ ವಾಸವಾಗಿದ್ದು, ಕೆಲಸವಿಲ್ಲದೆ ಕುಡಿದು ಬಂದು ಗಲಾಟೆ ಮಾಡುವುದು, ಕಳ್ಳತನ ಮಾಡುವುದನ್ನೆ ಕಾಯಕ ಮಾಡಿಕೊಂಡಿದ್ದ, ಪ್ರಶ್ನೆ ಮಾಡಿದ ಅಣ್ಣನ ಮೇಲೆ ಹಲ್ಲೆ ಮಾಡುತ್ತಿದ್ದ ಎನ್ನಲಾಗಿದೆ.
ಜನರು ಮನೆ ಬಳಿ ಬಂದು ಧನರಾಜ ಕಳ್ಳತನ ಮಾಡಿದ್ದಾನೆ ಅಂತ ದಿನಾಲೂ ಗಲಾಟೆ ಮಾಡುತ್ತಿದ್ದರು. ತಮ್ಮನ ಕಾಟ ತಾಳಲಾರದೆ ಅಣ್ಣ ಶಿವರಾಜ್ ಸ್ನೇಹಿತರ ಜೊತೆ ಸೇರಿ ಕೊಲೆ ಮಾಡಲು ಸಂಚು ರೂಪಿಸಿದ್ದ. ನವೆಂಬರ್ 2 ರಂದು ಕೆಲಸ ಕೊಡಿಸುವುದಾಗಿ ನಂಬಿಸಿ ಕಲಬುರ್ಗಿಯಿಂದ ಕರೆಸಿಕೊಂಡು ಬನ್ನೇರುಘಟ್ಟ ನೈಸ್ ರೋಡ್ ಜಂಕ್ಷನ್ ಬಳಿ ಕಾರಿನಲ್ಲಿ ಹತ್ತಿಸಿಕೊಂಡಿದ್ದರು. ಮುಂದೆ ಡ್ರೈವರ್ ಸೀಟ್ ಪಕ್ಕದಲ್ಲಿ ಕುಳಿತು ಮೊಬೈಲ್ ನೋಡುತ್ತಿದ್ದ ವೇಳೆಯಲ್ಲಿ ಧನರಾಜ ಕೈಗಳನ್ನು ಸಂದೀಪ್ ಮತ್ತು ಪ್ರಶಾಂತ್ ಹಿಡಿದು ಕೊಂಡು ಮಚ್ಚಿನಿಂದ ಕತ್ತಿನ ಭಾಗಕ್ಕೆ ಹೊಡೆದು ಕೊಲೆ ಮಾಡಿ ಶವವನ್ನು ಬನ್ನೇರುಘಟ್ಟ- ಕಗ್ಗಲೀಪುರ ರಸ್ತೆಯಲ್ಲಿ ಎಸೆದು ಹೋಗಿದ್ದರು.
ಪೊಲೀಸರಿಗೆ ನವೆಂಬರ್ 6ರಂದು ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಮೊದಲಿಗೆ ಇದು ಅಸಹಜ ಸಾವು ಎಂದು ದಾಖಲಿಸಿಕೊಂಡಿದ್ದ ಪೊಲೀಸರಿಗೆ ಪಕ್ಕದಲ್ಲಿದ್ದ ಖಾಸಗಿ ಕಂಪನಿಯ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಕಾರಿನಲ್ಲಿ ಶವ ಎಸೆದು ಹೋಗಿರುವ ದೃಶ್ಯ ಸಿಕ್ಕಿತ್ತು. ಕಾರಿನ ನಂಬರ್ ಪ್ಲೇಟ್ ಆಧಾರದ ಮೇಲೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ