
ದಾಬಸ್‌ಪೇಟೆ(ನ.11): ರಾಷ್ಟ್ರೀಯ ಹೆದ್ದಾರಿಯಲ್ಲಿ ದರೋಡೆ ಮಾಡಲು ಯತ್ನಿಸುತ್ತಿದ್ದ ಐವರು ದುಷ್ಕರ್ಮಿಗಳ ಪೈಕಿ ಮೂವರನ್ನು ನೆಲಮಂಗಲ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಾಗಡಿ ತಾಲೂಕಿನ ಮೋಟಗಾನಹಳ್ಳಿ ನಿವಾಸಿಗಳಾದ ಕಿರಣ್(24), ಮಹದೇವ್(23), ಬೆಂಗಳೂರಿನ ಮಾಳಗಾಳ ನಿವಾಸಿ ರಕ್ಷಿತ್(23) ಬಂಧಿತರು. ಮೋಟಗಾನಹಳ್ಳಿ ನಿವಾಸಿ ನವೀನ್‌ಕುಮಾರ್ (24), ತಾಲೂಕಿನ ಇಸ್ಲಾಂಪುರ ನಿವಾಸಿ ಪರ್ವೀಜ್ (25) ತಲೆ ಮರೆಸಿಕೊಂಡಿದ್ದು ಇವರ ಪತ್ತೆಗೂ ಬಲೆ ಬೀಸಲಾಗಿದೆ.
ಘಟನೆ ಹಿನ್ನೆಲೆ:
ಕಳೆದ ನ.7ರಂದು ರಾತ್ರಿ 11 ಗಂಟೆ ವೇಳೆಯಲ್ಲಿ ಬೆಂಗಳೂರು - ತುಮಕೂರು ರಾಷ್ಟ್ರೀಯ ಹೆದ್ದಾರಿ 48ರ ಬ್ಯಾಡರಹಳ್ಳಿ ಬಳಿ ನಾಲ್ಕೈದು ಮಂದಿ ಮಾರಕಾಸ್ತ್ರಗಳನ್ನು ಹಿಡಿದು ದರೋಡೆಗೆ ಯತ್ನಿಸಿದ್ದಾರೆಂದು ಸ್ಥಳೀಯರ ಖಚಿತ ಮಾಹಿತಿ ಮೇರೆಗೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಸಬ್‌ಇನ್‌ಸ್ಪೆಕ್ಟರ್ ಶ್ರೀನಿವಾಸಯ್ಯ ನೇತೃತ್ವದ ಸಿಬ್ಬಂದಿ ದಾಳಿ ಮಾಡಿದಾಗ ಐವರು ದುಷ್ಕರ್ಮಿಗಳು ಪರಾರಿಯಾಗಲು ಯತ್ನಿಸಿದ್ದಾರೆ. ಆದರೂ ಮೂವರನ್ನು ಪೊಲೀಸರು ಬಂಧಿಸಿದ್ದು ಇಬ್ಬರು ಪರಾರಿಯಾಗಿದ್ದಾರೆ.
ಬೆಂಗಳೂರು: ಅಕ್ರಮ ಸಂಬಂಧ ಪ್ರಶ್ನಿಸಿದ ಪತ್ನಿಯ ಕೊಂದು ಆತ್ಮಹತ್ಯೆ ಕಥೆ ಕಟ್ಟಿದ್ದ ಪತಿ ಸೆರೆ
ಬಂಧಿತರಿಂದ ಮಚ್ಚು, ಚಾಕು, ರಾಡು, ಮರದ ದೊಣ್ಣೆ, ಖಾರದಪುಡಿ ಸೇರಿದಂತೆ 2 ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ನೆಲಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತಲೆಮರೆಸಿಕೊಂಡಿರುವ ಇಬ್ಬರ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
ಶೋಕಿ ಜೀವನಕ್ಕಾಗಿ ದರೋಡೆ:
ಐವರು ಆರೋಪಿಗಳು ಸ್ನೇಹಿತರಾಗಿದ್ದು ಕುಡಿತದ ಚಟ ಹೊಂದಿದ್ದರು. ಬಂಧಿತ ಐವರು ಈ ಹಿಂದೆ ತಾಲೂಕಿನ ವಿವಿಧೆಡೆ ಕಳ್ಳತನ ಹಾಗೂ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಮೋಜು ಮಸ್ತಿ ಹಾಗೂ ಶೋಕಿ ಜೀವನಕ್ಕಾಗಿ ದರೋಡೆ ಮಾಡುತ್ತಿದ್ದರೆನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ