ಕದ್ದ ಬೈಕ್‌ನಲ್ಲಿ 32 ಲಕ್ಷದ ಮೊಬೈಲ್‌ ಫೋನ್‌ ದೋಚಿದ ಮೂವರು ಖದೀಮರ ಬಂಧನ

By Kannadaprabha News  |  First Published Dec 2, 2022, 6:30 AM IST

ಕದ್ದ ಮೊಬೈಲ್‌ ವಿಲೇವಾರಿ ಮಾಡುತ್ತಿದ್ದವನೂ ಬಂಧನ, 204 ಮೊಬೈಲ್‌ಗಳ ಜಪ್ತಿ,  ಬೆಂಗಳೂರಿನ ವಿಜಯನಗರ ಪೊಲೀಸರ ಕಾರ್ಯಾಚರಣೆ 


ಬೆಂಗಳೂರು(ಡಿ.02): ನಗರದಲ್ಲಿ ಮೊಬೈಲ್‌ ಕಳ್ಳರ ವಿರುದ್ಧ ಪೊಲೀಸರ ಕಾರ್ಯಾಚರಣೆ ಮುಂದುವರೆದಿದ್ದು, ಈಗ ಮತ್ತೆ ನಾಲ್ವರನ್ನು ಬಂಧಿಸಿ 200ಕ್ಕೂ ಹೆಚ್ಚಿನ ಮೊಬೈಲ್‌ಗಳನ್ನು ವಿಜಯನಗರ ಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ. ಜೆ.ಜೆ.ನಗರದ ತಬ್ರೇಜ್‌ ಖಾನ್‌ ಅಲಿಯಾಸ್‌ ಮಾಮು, ಗಂಗೊಡನಹಳ್ಳಿಯ ಶಾಬಾಜ್‌ ಖಾನ್‌ ಅಲಿಯಾಸ್‌ ಶಾಬು ಹಾಗೂ ಸಜ್ಜಾದ್‌ ಖಾನ್‌ ಅಲಿಯಾಸ್‌ ಸಜ್ಜು ಹಾಗೂ ಕದ್ದ ಮೊಬೈಲ್‌ ಖರೀದಿಸಿ ವಿಲೇವಾರಿ ಮಾಡುತ್ತಿದ್ದ ಮೊಬೈಲ್‌ ಮಾರಾಟಗಾರ ಚಾಮರಾಜಪೇಟೆಯ ರಿಜ್ವಾನ್‌ ಪಾಷ ಬಂಧಿತರು.

ಆರೋಪಿಗಳಿಂದ ವಿವಿಧ ಕಂಪನಿಗಳ 204 ಮೊಬೈಲ್‌ಗಳು, ನಾಲ್ಕು ಬೈಕ್‌ಗಳು ಹಾಗೂ ಆಟೋ ಸೇರಿದಂತೆ .32.40 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಜೆ.ಜೆ.ನಗರದ ಬ್ರಿಡ್ಜ್‌ ಬಳಿ ಸಾರ್ವಜನಿಕರಿಂದ ಮೊಬೈಲ್‌ ದೋಚಿ ಪರಾರಿಯಾಗಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ಆರೋಪಿಗಳನ್ನು ಬಂಧಿಸಲಾಗಿದೆ.

Tap to resize

Latest Videos

37 ಶಾಲಾ ಕಾಲೇಜುಗಳಲ್ಲಿ ಕಳವು: ಇಬ್ಬರು ಕುಖ್ಯಾತ ಕಳ್ಳರ ಸೆರೆ

ತಬ್ರೇಜ್‌, ಶಾಬಾಜ್‌ ಹಾಗೂ ಸಜ್ಜಾದ್‌ ವೃತ್ತಿಪರ ಕಳ್ಳರಾಗಿದ್ದು, ಇವರ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ತಬ್ರೇಜ್‌ ಮೊಬೈಲ್‌ ಕಳ್ಳತನಕ್ಕೆ ಕುಖ್ಯಾತಿ ಪಡೆದಿದ್ದಾನೆ. ಐದು ತಿಂಗಳ ಹಿಂದಷ್ಟೇ ಆತನನ್ನು ಕಬ್ಬನ್‌ ಪಾರ್ಕ್ ಠಾಣೆ ಪೊಲೀಸರು ಬಂಧಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದರು. ಬಳಿಕ ಜಾಮೀನು ಪಡೆದು ಜೈಲಿನಿಂದ ಹೊರ ಬಂದ ಆತ, ಮತ್ತೆ ತನ್ನ ಸಹಚರರ ಜತೆ ಸೇರಿ ಮೊಬೈಲ್‌ ಕಳ್ಳತನ ಶುರು ಮಾಡಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಚಾಮರಾಜಪೇಟೆ ಬಳಿ ಎರಡು ಬೈಕ್‌ಗಳನ್ನು ಕಳವು ಮಾಡಿದ್ದ ಆರೋಪಿಗಳು, ಈ ಕದ್ದ ಬೈಕ್‌ಗಳನ್ನು ಬಳಸಿಕೊಂಡು ಸಾರ್ವಜನಿಕರಿಂದ ಮೊಬೈಲ್‌ ದೋಚುತ್ತಿದ್ದರು. ರಸ್ತೆಯಲ್ಲಿ ಒಂಟಿಯಾಗಿ ಓಡಾಡುವ ನಾಗರಿಕರನ್ನು ಗುರಿಯಾಗಿಸಿಕೊಂಡು ಈ ಮೂವರು ಕೃತ್ಯ ಎಸಗುತ್ತಿದ್ದರು. ರಸ್ತೆಯಲ್ಲಿ ಮೊಬೈಲ್‌ನಲ್ಲಿ ಮಾತನಾಡುತ್ತ ಹೋಗುವಾಗ ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್‌ ಎಗರಿಸಿ ಪರಾರಿಯಾಗುತ್ತಿದ್ದರು. ಕೆಲವು ಬಾರಿ ಜನರಿಗೆ ಬೆದರಿಕೆ ಹಾಕಿ ಮೊಬೈಲ್‌ ದೋಚಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಇದೇ ರೀತಿ ಇತ್ತೀಚೆಗೆ ವಿಜಯನಗರ ವ್ಯಾಪ್ತಿಯಲ್ಲಿ ಎರಡು ಕಡೆ ಮೊಬೈಲ್‌ ಸುಲಿಗೆ ಪ್ರಕರಣಗಳು ವರದಿಯಾಗಿದ್ದವು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಆರೋಪಿಗಳಿಗೆ ಹುಡುಕಾಟ ನಡೆಸಿದ್ದರು. ಆಗ ಜೆ.ಜೆ.ನಗರ ಸಾಗುವ ರೈಲ್ವೆ ಬ್ರಿಡ್ಜ್‌ ಬಳಿ ಜನರಿಂದ ಮೊಬೈಲ್‌ ಎಗರಿಸಿ ಆರೋಪಿಗಳು ಪರಾರಿಯಾಗುತ್ತಿದ್ದರು. ಖಚಿತ ಮಾಹಿತಿ ಪಡೆದು ಅವರನ್ನು ಬಂಧಿಸಲಾಯಿತು. ವಿಚಾರಣೆ ವೇಳೆ ಕಳವು ಮೊಬೈಲ್‌ ಸ್ವೀಕರಿಸುತ್ತಿದ್ದ ರಿಜ್ವಾನ್‌ ಪಾಷ ಮಾಹಿತಿ ಸಿಕ್ಕಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

click me!