
ಬೆಂಗಳೂರು(ಡಿ.05): ಕರ್ತವ್ಯ ನಿರತ ಮಹಿಳಾ ಪಿಎಸ್‌ಐ ಜತೆಗೆ ಅನುಚಿತವಾಗಿ ವರ್ತಿಸಿ, ಜೀವ ಬೆದರಿಕೆ ಹಾಕಿದ ಆರೋಪದಡಿ ಹೋಟೆಲ್ ಮಾಲೀಕ ಸೇರಿ ಮೂವರನ್ನು ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅನ್ನಪೂರ್ಣೇಶ್ವರಿನಗರ ಠಾಣೆ ಪಿಎಸ್‌ಐ ಬಿ.ಎಂ.ಪ್ರತಿಮಾ ನೀಡಿದ ದೂರಿನ ಮೇರೆಗೆ ಮುದ್ದಿನಪಾಳ್ಯ ಮುಖ್ಯರಸ್ತೆಯ ಅಶ್ವ ವೆಜ್ ಇನ್ ನಾನ್ ವೆಜ್ ಹೋಟೆಲ್‌ನ ಮಾಲೀಕ ಸಂಜೀವ್ ಗೌಡ, ಕ್ಯಾಶಿಯರ್ ಸಂದೀಪ್ ಕುಮಾರ್ ಹಾಗೂ ಹೇಮಂತ್ ಎಂಬುವವರನ್ನು ಬಂಧಿಸಲಾಗಿದೆ.
ಏನಿದು ಘಟನೆ?:
ಪಿಎಸ್‌ಐ ಪ್ರತಿಮಾ ಅವರು ಶನಿವಾರ ತಡರಾತ್ರಿ ಗಸ್ತು ಕರ್ತವ್ಯದಲ್ಲಿದ್ದರು. ತಡರಾತ್ರಿ 1.20ರ ಸುಮಾರಿಗೆ ಮುದ್ದಿನಪಾಳ್ಯ ಮುಖ್ಯರಸ್ತೆಯಲ್ಲಿ ಬರುವಾಗ ಅಶ್ವ ವೆಜ್ ಇನ್ ನಾನ್ ವೆಜ್ ಹೋಟೆಲ್ ತೆರೆದಿರುವುದು ಕಂಡು ಬಂದಿದೆ. ವ್ಯಾಪಾರದ ಅವಧಿ 1 ಗಂಟೆ ಮುಗಿದಿದ್ದು, ಹೋಟೆಲ್ ಬಾಗಿಲು ಹಾಕುವಂತೆ ಪಿಎಸ್‌ಐ ಪ್ರತಿಮಾ ಅವರು ಹೋಟೆಲ್ ಸಿಬ್ಬಂದಿಗೆ ಸೂಚಿಸಿದ್ದಾರೆ. ಈ ವೇಳೆ ಹೋಟೆಲ್ ಮಾಲೀಕ ಸಂಜೀವ್ ಗೌಡ, ‘ನನಗೆ ದಿನದ 24 ತಾಸು ಹೋಟೆಲ್ ತೆರೆದು ವ್ಯಾಪಾರ ಮಾಡಲು ಅನುಮತಿ ಇದೆ’ ಎಂದಿದ್ದಾನೆ. ಇದಕ್ಕೆ ಅನುಮತಿ ಪತ್ರ ತೋರಿಸಿ ಎಂದು ಪ್ರತಿಮಾ ಕೇಳಿದ್ದಾರೆ. ಇದರಿಂದ ಕೋಪಗೊಂಡ ಸಂಜೀವ್ ಗೌಡ, ‘ನೀನು ಮೊದಲು ಕಾನೂನು ತಿಳಿದಿಕೋ. 10 ರು. ಖರ್ಚು ಮಾಡಿ ಆರ್‌ಟಿಐನಲ್ಲಿ ಪಡೆದಿಕೋ’ ಎಂದು ಏಕವಚನದಲ್ಲಿ ಮಹಿಳಾ ಅಧಿಕಾರಿಗೆ ಹೇಳಿದ್ದಾನೆ.
38ರ ಯುವತಿಗೆ ಮತ್ತಿನೌಷಧಿ ನೀಡಿ ರೇಪ್: 72 ವರ್ಷದ ನಿವೃತ್ತ ಐಎಎಸ್ ಅಧಿಕಾರಿ ವಿರುದ್ಧ ಕೇಸ್
‘ಬಟ್ಟೆ ಬಿಚ್ಚಿಸಿ ಜನ್ಮಜಾಲಾಡುವೆ !
‘ನೀವು ಲಂಚ ಕೇಳಲು ಬಂದಿದ್ದೀರಿ ಎಂದು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವೆ. ನಿಮ್ಮ ಮೇಲಾಧಿಕಾರಿಗಳಿಗೆ ಸುಳ್ಳು ದೂರು ನೀಡಿ ನಾಳೆಯೇ ನಿಮ್ಮ ಬಟ್ಟೆ ಬಿಚ್ಚಿಸಿ ಜನ್ಮ ಜಾಲಾಡುವೆ ಎಂದು ಅವಾಚ್ಯವಾಗಿ ಮಾತನಾಡಿ ಬೆದರಿಕೆ ಹಾಕಿದ್ದಾನೆ’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಸಂಬಂಧ ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ