ಬೆಳಗಾವಿ: ಅಕ್ರಮ ಹಣ ಬದಲಾವಣೆ ದಂಧೆ, ಮೂವರು ಅಂದರ್‌!

By Kannadaprabha News  |  First Published Jun 3, 2023, 12:57 PM IST

2000 ನೋಟು ಬದಲಾಗಿ 500 ನೋಟುಗಳನ್ನು ಬದಲಾವಣೆ ಮಾಡಿಕೊಡುವುದಾಗಿ ನಂಬಿಸಿ, ಖೋಟಾ ನೋಟುಗಳ ಚಲಾವಣೆಗೆ ಮುಂದಾಗಿದ್ದ ಮಹಾರಾಷ್ಟ್ರದ ಒಬ್ಬ ಪೊಲೀಸ್‌ ಪೇದೆ ಸೇರಿದಂತೆ ಮೂವರ ಬಂಧನ  


ಬೆಳಗಾವಿ(ಜೂ.03): ಆರ್‌ಬಿಐ 2000 ನೋಟುಗಳನ್ನು ನಿಷೇಧ ಮಾಡಿರುವುದನ್ನೇ ದುರುಪಯೋಗ ಮಾಡಿಕೊಂಡ ಅಂತಾರಾಜ್ಯ ಮೂವರು ಖದೀಮರನ್ನು ಬೆಳಗಾವಿ ಜಿಲ್ಲೆಯ ಕಾಗವಾಡ ಪೊಲೀಸರು ಬಂಧಿಸಿದ್ದಾರೆ. 2000 ನೋಟು ಬದಲಾಗಿ 500 ನೋಟುಗಳನ್ನು ಬದಲಾವಣೆ ಮಾಡಿಕೊಡುವುದಾಗಿ ನಂಬಿಸಿ, ಖೋಟಾ ನೋಟುಗಳ ಚಲಾವಣೆಗೆ ಮುಂದಾಗಿದ್ದ ಮಹಾರಾಷ್ಟ್ರದ ಒಬ್ಬ ಪೊಲೀಸ್‌ ಪೇದೆ ಸೇರಿದಂತೆ ಮೂವರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಮಹಾರಾಷ್ಟ್ರದ ಮಿರಜ್‌ ನಗರ ಠಾಣೆಯ ಪೊಲೀಸ್‌ ಪೇದೆ ಸಾಗರ ಸದಾಶಿವ ಜಾಧವ (31), ಮಹಾರಾಷ್ಟ್ರ ಲಿಂಗಸೂರು ಗ್ರಾಮದ ಅರಿಫ್‌ ಅಝಿಜ್‌ ಸಾಗರ (34) ಹಾಗೂ ಲಕ್ಷ್ಮಣ ನಾಯಕ (36) ಬಂಧಿತರು. ಪ್ರಮುಖ ಆರೋಪಿ ತಲೆ ಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಹಣ ಬದಲಾವಣೆ ದಂಧೆಯ ಮೂರು ಪ್ರಕರಣಗಳಲ್ಲಿ ಬಂಧಿತರು ಭಾಗಿಯಾಗಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ .15 ಲಕ್ಷ ಮೌಲ್ಯದ ಕಾರು ಹಾಗೂ .2.5 ಲಕ್ಷ ಮೌಲ್ಯದ ಬುಲೆಟ್‌ ಬೈಕ್‌ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜತೆಗೆ ಪೊಲೀಸರು ಪಡೆದುಕೊಂಡಿರುವ ಹಣದ ಕಂತೆಯಲ್ಲಿ ಮೊದಲ 10 ನೋಟುಗಳು ಮಾತ್ರ ಅಸಲಿಯಾಗಿದ್ದು, ಇನ್ನುಳಿದ ನೋಟುಗಳು ಮಕ್ಕಳು ಆಟವಾಡುವ ನಕಲಿ ನೋಟುಗಳಾಗಿವೆ. ಒಟ್ಟು 127 ಕಂತೆಗಳನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.

Tap to resize

Latest Videos

ಬೆಂಗಳೂರು: 1800 ವಿದ್ಯಾರ್ಥಿಗಳ ದಾಖಲೆ ಬಳಸಿ 19 ಕೋಟಿ ಸಾಲ ಪಡೆದು ಟೋಪಿ!

ಏನಿದು ಪ್ರಕರಣ?:

ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ತಾಸಗಾಂವ ತಾಲೂಕಿನ ಸಾವರ್ಡೆ ಗ್ರಾಮದ ಸಮೀರ ಭಾನುದಾಸ ಬೋಸಲೆ ಶೂಅರ್‌ ಶಾಟ್‌ ಇವೆಂಟ್‌ ಮ್ಯಾನೇಜಮೆಂಟ್‌ನಲ್ಲಿ ಸ್ಟ್ರಕ್ಚರ್‌ ಮ್ಯಾನೇಜರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈತನ ಜೊತೆಗೆ ಕಳೆದ ಸಹಾಯಕನಾಗಿ ಅಕ್ಷಯ ಅಲಿಯಾಸ್‌ ಆಕಾಶ ಆನಂದ ಮಂಡಲೆ ಎಂಬಾತ ಕೂಡ ಕೆಲಸ ಮಾಡುತ್ತಿದ್ದ. ಅಕ್ಷಯನಿಗೆ ಅಸ್ಲಂ ಎಂಬಾತ ಪರಿಚಯವಾಗಿದ್ದ. ಆದರೆ, ಈ ಅಸ್ಲಂ ಆರ್‌ಬಿಐ .2000 ಮುಖಬೆಲೆಯ ನೋಟುಗಳನ್ನು ಬ್ಯಾನ್‌ ಮಾಡಿದೆ. ಈ ಹಿನ್ನೆಲೆಯಲ್ಲಿ .500 ಮುಖ ಬೆಲೆಯ .5 ಲಕ್ಷ ಹಣ ನೀಡಿದರೆ, ತಮಗೆ .2000 ಮುಖಬೆಲೆಯ .6 ಲಕ್ಷ ಹಣ ನೀಡುವುದಾಗಿ ಆಮಿಷವೊಡ್ಡಿದ್ದಾನೆ.

ಇದನ್ನು ನಂಬಿದ ಸಮೀರ ಬೋಸಲೆ ಹಾಗೂ ಅಕ್ಷಯ ಮಂಡಲೆ ಇಬ್ಬರೂ ಮಾಲೀಕ ಸಂದೀಪ ಗಿಡ್ಡೆ ಎಂಬುವರಿಗೆ ತಿಳಿಸಿದ್ದಾರೆ. ಇದನ್ನು ನಂಬಿದ ಮಾಲೀಕ ಸಂದೀಪ ತಾನು .500 ಮುಖಬೆಲೆಯ .5 ಲಕ್ಷ ಹಣ ನೀಡುವುದಾಗಿ ಒಪ್ಪಿದ್ದಾನೆ. ನಂತರ ಅಕ್ಷಯ ಮಂಡಲೆ ಎಂಬಾತ ತನಗೆ ಪರಿಚಯವಾಗಿದ್ದ ಅಸ್ಲಂಗೆ ಕರೆ ಮಾಡಿ ಹಣ ನೀಡುವುದಾಗಿ ತಿಳಿಸಿದ್ದಾನೆ. ಆಗ ಅಸ್ಲಂ ಜಾಧವ ಎಂಬಾತನ ನಂಬರ್‌ ಕೊಟ್ಟು ಕರೆ ಮಾಡಲು ಹೇಳಿದ್ದಾನೆ. ಅಸ್ಲಂನ ಸೂಚನೆಯಂತೆ ಜಾಧವಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಮೇ 31 ರಂದು ಜಾಧವ ಫೋನ್‌ ಕರೆ ಮಾಡಿ ಮಾಡಿ .5 ಲಕ್ಷ ಹಣ ತೆಗೆದುಕೊಂಡು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಂಗಸೂಳಿ ಗ್ರಾಮದ ಮಲ್ಲಯ್ಯನ ಗುಡ್ಡದ ಹತ್ತಿರ ಬರಲು ಹೇಳಿದ್ದಾನೆ.

ಇದನ್ನು ನಂಬಿದ ಸಮೀರ ಮತ್ತು ಅಕ್ಷಯ ಇಬ್ಬರೂ ತಾಸಗಾಂವ ಬ್ಯಾಂಕನಿಂದ ಹಣ ಪಡೆದುಕೊಂಡು ಬೈಕ್‌ ಮೇಲೆ ರಾತ್ರಿ8.05ಕ್ಕೆ ಮಲ್ಲಯ್ಯನ ಗುಡ್ಡಕ್ಕೆ ಆಗಮಿಸಿದ್ದಾರೆ. ಆಗ ನಂಬರ್‌ ಪ್ಲೇಟ್‌ ಇಲ್ಲ ಕಾರನಲ್ಲಿ ಬಂದ ಇಬ್ಬರು, ಇವರಿಬ್ಬರಿಂದ .5 ಲಕ್ಷ ಹಣ ಪಡೆದುಕೊಂಡು ಕಾರಲ್ಲಿ ಹಣ ಎಣಿಸಿದ್ದಾರೆ. ಈ ವೇಳೆ ಬುಲೆಟ್‌ ಮೇಲೆ ಇಬ್ಬರು ಖಾಕಿ ಬಣ್ಣದ ಧರಿಸಿದ್ದವರು ಲಾಠಿ ತೋರಿಸಿ ಬೆದರಿಕೆ ಹಾಕುತ್ತಿದ್ದಂತೆ ಹಣ ಪಡೆದುಕೊಂಡ ಗ್ಯಾಂಗ್‌ ಪರಾರಿಯಾಗಿದೆ. ಇದರಿಂದ ಭಯಭೀತರಾಗಿದ್ದ ಸಮೀರ ಬೋಸಲೆ ಹಾಗೂ ಅಕ್ಷಯ ಮಂಡಲೆ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ನಂತರ ನಡೆದ ವಿಚಾರವನ್ನು ತಮ್ಮ ಮಾಲೀಕ ಸಂದೀಪ ಗಿಡ್ಡೆ ಎಂಬುವರಿಗೆ ತಿಳಿಸಿದ್ದಾರೆ. ನಂತರ ಕಾಗವಾಡ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೆಂಗಳೂರು: 10ನೇ ತರಗತಿಗೆ ತೇರ್ಗಡೆಗೆ ಲಂಚ: ಪ್ರಾಂಶುಪಾಲ ಪೊಲೀಸರ ಬಲೆಗೆ

ಈ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ವಾಹನಗಳನ್ನು ಬೆನ್ನು ಬಿದ್ದಿದ್ದಾರೆ. ಪೊಲೀಸರು ಬೀಸಿದ ಬಲೆಗೆ ಹಣ ಬದಲಾವಣೆ ಗ್ಯಾಂಗ್‌ ಬಿದ್ದಿದ್ದು, ಈ ವೇಳೆ ಮೂವರನ್ನು ಬಂಧಿಸಿದ್ದಾರೆ. ಮತ್ತೋರ್ವ ಪ್ರಮುಖ ಆರೋಪಿ ಪರಾರಿಯಾಗಿದ್ದಾನೆ. ಈ ಕುರಿತು ಕಾಗವಾಡ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2000 ಮುಖ ಬೆಲೆ ನೋಟುಗಳನ್ನು ಬ್ಯಾಂಕನಲ್ಲಿ ಬದಲಾವಣೆ ಮಾಡಲು ಇನ್ನೂ ಅವಕಾಶ ಇದೆ. ಆದ್ದರಿಂದ ಇಂತಹ ಗ್ಯಾಂಗ್‌ಗಳ ಮಾತನ್ನು ನಂಬಿ ಹಣ ಬದಲಾವಣೆ ಮಾಡಲು ಮುಂದಾಗಬೇಡಿ. ಹಣ ಬದಲಾವಣೆ ಮಾಡುವುದಾಗಿ ಹೇಳಿಕೊಂಡು ಫೋನ್‌ ಮಾಡಿದ್ದಲ್ಲಿ ತಕ್ಷಣ ಸ್ಥಳೀಯ ಪೊಲೀಸ್‌ ಠಾಣೆ ಅಥವಾ 112ಗೆ ಪೋನ್‌ ಮಾಡಿ ಮಾಹಿತಿ ನೀಡದಲ್ಲಿ ಕ್ರಮಕೈಗೊಳ್ಳಲು ಸಾಧ್ಯವಾಗುತ್ತದೆ ಅಂತ ಬೆಳಗಾವಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಂಜೀವ್‌ ಪಾಟೀಲ ತಿಳಿಸಿದ್ದಾರೆ. 

click me!