ಬೆಂಗಳೂರು: ವೃದ್ಧೆಯ ಚಿನ್ನದ ಸರ ಎಗರಿಸಿದ್ದ ಇಬ್ಬರು ಕಳ್ಳರು, ಖರೀದಿಸಿದ ಇನ್ನೊಬ್ಬನ ಬಂಧನ

By Kannadaprabha NewsFirst Published Jan 27, 2023, 1:51 PM IST
Highlights

ಬಂಧಿತ ಆರೋಪಿಗಳಿಂದ 48.50 ಗ್ರಾಂ ತೂಕದ ಚಿನ್ನದ ಸರ, ಕದ್ದ ಮೊಬೈಲ್‌ ಮಾರಾಟದಿಂದ ಬಂದಿದ್ದ 4,720 ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಜಪ್ತಿ. 

ಬೆಂಗಳೂರು(ಜ.27):  ಇತ್ತೀಚೆಗೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೃದ್ಧೆಯನ್ನು ಹಿಂಬಾಲಿಸಿ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ಸೇರಿ ಮೂವರು ಆರೋಪಿಗಳನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಾಮರಾಜಪೇಟೆಯ ಸೈದ್‌ ಖಾಸೀಫ್‌(22), ಫರೀದ್‌ ಅಹಮದ್‌(20) ಹಾಗೂ ಕಳವು ಮಾಲು ಸ್ವೀಕರಿಸಿದ್ದ ಪಾದರಾಯನಪುರದ ಸುಲ್ತಾನ್‌ ಪಾಷಾ(27) ಬಂಧಿತರು. ಆರೋಪಿಗಳಿಂದ 48.50 ಗ್ರಾಂ ತೂಕದ ಚಿನ್ನದ ಸರ, ಕದ್ದ ಮೊಬೈಲ್‌ ಮಾರಾಟದಿಂದ ಬಂದಿದ್ದ 4,720 ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.

ಶಾಂತಿನಗರ ನಿವಾಸಿ ಹೇಮಾವತಿ(70) ಅವರು ಜ.5ರಂದು ಬೆಳಗ್ಗೆ ದೇವಸ್ಥಾನಕ್ಕೆ ತೆರಳಲು ಬಸಪ್ಪ ರಸ್ತೆಯ ಜಂಕ್ಷನ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಏಕಾಏಕಿ ಹೇಮಾವತಿ ಅವರ ಕತ್ತಿಗೆಗೆ ಕೈ ಹಾಕಿ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಘಟನಾ ಸ್ಥಳ ಹಾಗೂ ಸುತ್ತಮುತ್ತಲ ಸ್ಥಳಗಳ 400ಕ್ಕೂ ಅಧಿಕ ಸಿಸಿಟಿವಿ ಕ್ಯಾಮರಾ ದೃಶ್ಯ ಪರಿಶೀಲಿಸಿ ಸಿಕ್ಕ ಸುಳಿವಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Davanagere: ಹಣಕಾಸಿನ ಜಗಳ ಮಧ್ಯೆ ಪ್ರವೇಶಿಸಿದ ಪೊಲೀಸರ ಮೇಲೆ ಹಲ್ಲೆ: ಯುವತಿಯರು ಸೇರಿ ನಾಲ್ವರ ಬಂಧನ

ಆರೋಪಿ ಸೈಯದ್‌ ಖಾಸೀಫ್‌ ವೃತ್ತಿಪರ ಕಳ್ಳನಾಗಿದ್ದಾನೆ. ಈತನ ವಿರುದ್ಧ ಈ ಹಿಂದೆ ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಅಪರಾಧ ಪ್ರಕರಣಗಳು ದಾಖಲಾಗಿವೆ. ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ಆರೋಪಿಯು ಜಾಮೀನು ಪಡೆದು ಹೊರಬಂದ ಬಳಿಕ ಮತ್ತೊಬ್ಬ ಆರೋಪಿ ಫರೀದ್‌ ಅಹಮ್ಮದ್‌ ಜತೆ ಸೇರಿಕೊಂಡು ಅಪರಾಧ ಕೃತ್ಯಗಳನ್ನು ಮುಂದುವರೆಸಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ಆರೋಪಿಗಳು ಬಿಟಿಎಂ ಲೇಔಟ್‌ನಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡಿದ್ದು, ಈ ದ್ವಿಚಕ್ರ ವಾಹನದಲ್ಲೇ ನಗರದ ವಿವಿಧೆಡೆ ಸುತ್ತಾಡಿ ಸಾರ್ವಜನಿಕರ ಮೊಬೈಲ್‌ ಫೋನ್‌ ಕಳವು ಮಾಡುತ್ತಿದ್ದರು. ಶಾಂತಿನಗರದಲ್ಲಿ ವೃದ್ಧೆಯ ಸರ ಕಸಿಯಲು ಇದೇ ದ್ವಿಚಕ್ರ ವಾಹನ ಬಳಸಿದ್ದರು. ಕದ್ದ ಮಾಲುಗಳನ್ನು ಸ್ನೇಹಿತನಾದ ಆರೋಪಿ ಸುಲ್ತಾನ್‌ ಪಾಷಾನಿಗೆ ಮಾರಾಟ ಮಾಡಿ ಹಣ ಪಡೆದಿದ್ದರು. ವಿಚಾರಣೆ ವೇಳೆ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಕಳವು ಮಾಡಲು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!