ಬೆಂಗಳೂರು: ಕದ್ದ ಬೈಕ್‌ನಲ್ಲಿ ವ್ಹೀಲಿಂಗ್‌ ಮಾಡಿ ಜಾಲತಾಣದಲ್ಲಿ ವಿಡಿಯೋ..!

By Kannadaprabha NewsFirst Published Nov 2, 2022, 8:30 AM IST
Highlights

ಮೂವರ ಬಂಧನ, ಬಂಧಿತ ಆರೋಪಿಗಳಿಂದ 15 ಲಕ್ಷ ಮೌಲ್ಯದ 23 ಬೈಕ್‌ ಜಪ್ತಿ

ಬೆಂಗಳೂರು(ನ.02):  ಬೈಕ್‌ ಕಳ್ಳತನ ಮಾಡುತ್ತಿದ್ದ ರೌಡಿ ಸೇರಿದಂತೆ ಮೂವರನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ. ಎಇಎಸ್‌ ಲೇಔಟ್‌ನ ನಿವಾಸಿ ಶೇಕ್‌ ಸಾಹಿಲ್‌ ಪಾಷ, ಬೆಟ್ಟಹಳ್ಳಿಯ ಶೇಕ್‌ ನಿಸಾರ್‌ ಹಾಗೂ ಎಂ.ಎಸ್‌.ಪಾಳ್ಯದ ಶೇಕ್‌ ತೌಸಿಫ್‌ ಬಂಧಿತರಾಗಿದ್ದು, ಆರೋಪಿಗಳಿಂದ 15 ಲಕ್ಷ ಮೌಲ್ಯದ 23 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. 

ಇತ್ತೀಚೆಗೆ ಎಂ.ಎಸ್‌.ಪಾಳ್ಯದ ಅಂಬೂರು ಬಿರಿಯಾನಿ ಹೋಟೆಲ್‌ ಬಳಿ ವಿಜಯ ಬ್ಯಾಂಕ್‌ ಲೇಔಟ್‌ ನಿವಾಸಿ ಹೇಮಚಂದ್ರ ಅವರಿಗೆ ಸೇರಿದ ಬೈಕ್‌ ಕಳ್ಳತನವಾಗಿತ್ತು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಇನ್‌ಸ್ಪೆಕ್ಟರ್‌ ಸುಂದರ್‌ ಹಾಗೂ ಸಬ್‌ ಇನ್‌ಸ್ಪೆಕ್ಟರ್‌ ಪ್ರಭು ನೇತೃತ್ವದ ತಂಡ, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಅನೂಪ್‌ ಶೆಟ್ಟಿತಿಳಿಸಿದ್ದಾರೆ.

ದೇಗುಲದಿಂದ ಕದ್ದ ವಸ್ತುಗಳನ್ನು ಕ್ಷಮಾಪಣೆ ಪತ್ರದೊಂದಿಗೆ ವಾಪಸ್‌ ನೀಡಿದ ಕಳ್ಳ..!

ಈ ಮೂವರು ಆರೋಪಿಗಳು ವೃತ್ತಿಪರ ಕ್ರಿಮಿನಲ್‌ಗಳಾಗಿದ್ದು, ನಗರದ ವಿವಿಧ ಠಾಣೆಗಳಲ್ಲಿ ಅವರ ಮೇಲೆ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಶೇಕ್‌ ಸಾಹಿಲ್‌ ಪಾಷ ವಿರುದ್ಧ ವಿದ್ಯಾರಣ್ಯಪುರ ಠಾಣೆಯಲ್ಲಿ ರೌಡಿಶೀಟ್‌ ತೆರೆಯಲಾಗಿದೆ. ಮನೆ, ಹಾಸ್ಟೆಲ್‌, ಹೋಟೆಲ್‌ಗಳು ಹಾಗೂ ಬಸ್‌ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸುತ್ತಿದ್ದ ಬೈಕ್‌ಗಳನ್ನು ನಕಲಿ ಕೀ ಬಳಸಿ ಅಥವಾ ಹ್ಯಾಂಡಲ್‌ ಮುರಿದು ಸಾಹಿಲ್‌ ತಂಡ ಕಳವು ಮಾಡುತ್ತಿತ್ತು. ನಂತರ ಗೌರಿಬಿದನೂರು ಹಾಗೂ ಚಿಂತಾಮಣಿ ತಾಲೂಕು ಸೇರಿದಂತೆ ಹೊರ ಜಿಲ್ಲೆಗಳಲ್ಲಿ ನಕಲಿ ನಂಬರ್‌ ಪ್ಲೇಟ್‌ ಬಳಸಿ ಮಾರಾಟ ಮಾಡಿ ಬಂದ ಹಣದಿಂದ ಮೋಜು ಮಾಡುತ್ತಿದ್ದರು. ಗಾಂಜಾ ಖರೀದಿಗೆ ಸಹ ಬೈಕ್‌ ಕಳವು ಮಾಡಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.

ವ್ಹೀಲಿಂಗ್‌ ಸಲುವಾಗಿಯೇ ಆರ್‌ಎಕ್ಸ್‌ 100 ಕಳ್ಳತನ!

ಇತ್ತೀಚಿಗೆ ಚಿಕ್ಕಜಾಲ, ಯಶವಂತಪುರ, ಹೆಣ್ಣೂರು, ಶೇಷಾದ್ರಿಪುರ, ಯಲಹಂಕ ಉಪ ನಗರ, ಬಾಗಲಗುಂಟೆ, ವಿಜಯನಗರ ಹಾಗೂ ನೆಲಮಂಗಲ ಸೇರಿದಂತೆ ವಿವಿಧ ಠಾಣೆಗಳಲ್ಲಿ ಕಳ್ಳವಾಗಿದ್ದ 23 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಕಳವು ಮಾಡಿದ ಬೈಕ್‌ಗಳಲ್ಲಿ ಆರೋಪಿಗಳು, ಹೊರ ಜಿಲ್ಲೆಗಳಿಗೆ ಜಾಲಿ ರೈಡ್‌ ಹೋಗುವಾಗ ಮಾಡುತ್ತಿದ್ದ ವ್ಹೀಲಿಂಗ್‌ ವಿಡಿಯೋಗಳನ್ನು ಇನ್‌ ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್‌ ಮಾಡುತ್ತಿದ್ದರು. ವ್ಹೀಲಿಂಗ್‌ ಸಲುವಾಗಿಯೇ ಆರ್‌ಎಕ್ಸ್‌ 100 ಬೈಕ್‌ಗಳನ್ನು ಹೆಚ್ಚು ಕಳವು ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
 

click me!