* ಗಾಂಜಾ ನಶೆಯಲ್ಲಿ ಯುವ ಸಮುದಾಯ
* ಮೂಡಿಗೆರೆ ತಾಲೂಕಿನ ಮುತ್ತಿಗೆಪುರದಲ್ಲಿ ಗಾಂಜಾ ಮಾರಾಟಕ್ಕೆ ಯತ್ನ
* ಮೂಡಿಗೆರೆ ಮೂಲದ ಮೂವರ ಆರೋಪಿಗಳ ಬಂಧನ
ಚಿಕ್ಕಮಗಳೂರು(ಮೇ.17): ದಿನದಿಂದ ದಿನಕ್ಕೆ ಕಾಫಿನಾಡು ಚಿಕ್ಕಮಗಳೂರು(Chikkamagaluru) ಜಿಲ್ಲೆಯಲ್ಲಿ ಗಾಂಜಾ ಗಮ್ಮತ್ತು ಜೋರಾಗುತ್ತಿದೆ. ಗಾಂಜಾದ ದುಶ್ಚಟಕ್ಕೆ ದಾಸರಾಗಿರುವ ಯುವ ಸಮುದಾಯಕ್ಕೆ ಗಾಂಜಾ ಸರಬರಾಜು ಮಾಡುವ ಒಂದು ಜಾಲವೇ ಮಲೆನಾಡಿನಲ್ಲಿ ಸಕ್ರಿಯವಾಗಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಗಾಂಜಾ ಮಾರಾಟ ಮಾಡುವ ವೇಳೆಯಲ್ಲಿ ಆರೋಪಿಗಳು ಸಿಕ್ಕಿಬಿದ್ದಿರುವುದು.
ಗಾಂಜಾ ಮಾರಾಟ ಯತ್ನ ಮೂವರ ಬಂಧನ
ಹೌದು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ(Mudigere) ತಾಲೂಕಿನ ಮುತ್ತಿಗೆಪುರ ಸಮೀಪ ಗಾಂಜಾ(Marijuana) ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಗಳನ್ನು(Accused) ಪೊಲೀಸರು(Police) ಬಂಧಿಸಿದ್ದಾರೆ(Arrest). ಮೂಡಿಗೆರೆ ತಾಲೂಕು ಮುತ್ತಿಗೆಪುರದಲ್ಲಿ ಗಾಂಜಾ ಮಾರಾಟ ದಂಧೆ ಸಕ್ರಿಯವಾಗಿದ್ದು ಗ್ರಾಮದ ಸಮೀಪವೇ ಗಾಂಜಾ ಮಾರಾಟ ಮಾಡಲು ಆರೋಪಿಗಳು ಯತ್ನಸಿದ್ದಾರೆ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಇಲಾಖೆ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗ್ಳೂರಲ್ಲಿ ಗಾಂಜಾ ಮಾರಾಟಕ್ಕೆ ಯತ್ನ: 82 ಕೆಜಿ ಮಾದಕ ವಸ್ತು ಜಪ್ತಿ, ಇಬ್ಬರ ಬಂಧನ
ಬೆಳ್ತಂಗಡಿ ತಾಲೂಕಿನ ದೇವರ ಗ್ರಾಮದ ಕುಕ್ಕಾವು ಮೂಲದ ಅಬೂಬಕ್ಕರ್ ಸಿದ್ದಿಕ್, ಮೂಡಿಗೆರೆ ತಾಲೂಕಿನ ಬೀಜುವಳ್ಳಿಯ ಎಂ.ಎಸ್.ಅಮೃತ್, ಮೂಡಿಗೆರೆ ಪಟ್ಟಣದ ರಿಷಬ್‌ರಾಜ್ ಬಂಧಿತ ಆರೋಪಿಗಳು. ಬಂಧಿತರಿಂದ 12 ಸಾವಿರ ರೂ. ಮೌಲ್ಯದ 231 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಮೂಡಿಗೆರೆ ಠಾಣೆಯ ಸೋಮಶೇಖರ್, ಸಿಬ್ಬಂದಿ ಗಿರೀಶ್, ಸುರೇಶ್, ಶೇಖರ್, ಮನು, ಪ್ರದೀಪ್, ಉಮೇಶ್ ಇದ್ದರು.
ಕಡಿವಾಣ ಹಾಕಲು ಒತ್ತಾಯ
ಮಲೆನಾಡಿನಾದ್ಯಂತ(Malenadu) ಗಾಂಜಾ ಮಾರಾಟ ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು ಪೊಲೀಸ್ ಇಲಾಖೆ ಕ್ಷಿಪ್ರ ಕಾರ್ಯಾಚರಣೆ ನಡೆಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಸಂಜಯಗೌಡ ಕೊಟ್ಟಿಗೆಹಾರ ಸೇರಿದಂತೆ ಮಲೆನಾಡಿನ ಭಾಗದ ಯುವ ಸಮೂಹ ಗಾಂಜಾ ಚಟಕ್ಕೆ ಬಲಿಯಾಗುತ್ತಿದ್ದಾರೆ.ಮೂಡಿಗೆರೆ ಭಾಗದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಗಾಂಜಾ ದಂಧೆಗೆ ಪೊಲೀಸರು ಕಡಿವಾಣ ಹಾಕಬೇಕಾಗಿದೆ. ಗಾಂಜಾ ದಂಧೆಗೆ ಕಡಿವಾಣ ಹಾಕಲು ಒತ್ತಾಯಿಸಿರುವ ಅವರು ಮೂಡಿಗೆರೆ ತಾಲೂಕಿನಾದ್ಯಂತ ಗಾಂಜಾ ದಂಧ ಎಗ್ಗಿಲ್ಲದೆ ನಡೆಯುತ್ತಿದೆ ಪೊಲೀಸ್ ಇಲಾಖೆ ಈ ಬಗ್ಗೆ ಮತ್ತಷ್ಟು ಮುತುವರ್ಜಿವಹಿಸಿ ಇಂತಹ ಚಟುವಟಿಕೆಗಳನ್ನು ನಿಗ್ರಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.