ಅನೈತಿಕ ಸಂಬಂಧ| ಹಳಿಯ ಮೇಲೆ ಸಿಕ್ಕ ಅಪರಿಚಿತ ಶವದ ಕೊಲೆಯ ರಹಸ್ಯ ಬಯಲು| ಹತ್ಯೆಯಾದವನ ಗೆಳೆಯ ಸೇರಿ ಮೂವರ ಬಂಧನ| ಸುಳಿವು ನೀಡಿದ ಕೊನೆ ಕರೆ|
ಬೆಂಗಳೂರು(ಜ.14): ಕೆಲ ದಿನಗಳ ಹಿಂದೆ ಹಂಪಿನಗರದ ಹತ್ತಿರದ ರೈಲ್ವೆ ಹಳಿಗಳ ಸಮೀಪ ಹೋಟೆಲ್ ಮಾಲೀಕನೊಬ್ಬನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಂದಿದ್ದ ಆತನ ‘ಸ್ನೇಹಿತ’ ಸೇರಿದಂತೆ ಮೂವರು ಸಿಟಿ ರೈಲ್ವೆ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಯಶವಂತಪುರದ ಆರ್‌ಎಂಸಿ ಯಾರ್ಡ್ ನಿವಾಸಿ ಅಫ್ರೇಜ್ (34) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಮೃತನ ಗೆಳೆಯ ಪಾದರಾಯನಪುರದ ಸಿದ್ದಿಕಿ, ಖಲೀಲ್ ಹಾಗೂ ಮುಬಾರಕ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಕೆಲ ದಿನಗಳ ಹಿಂದೆ ಹಂಪಿ ನಗರದಲ್ಲಿರುವ ಶ್ರೀ ಕೃಷ್ಣದೇವರಾಯ ರೈಲ್ವೆ ನಿಲ್ದಾಣ ಹತ್ತಿರ ರುಂಡ ಮುಂಡ ಬೇರ್ಪಟ್ಟಿದ್ದ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತು. ಈ ಕೃತ್ಯದ ತನಿಖೆ ಆರಂಭಿಸಿದ ಪಿಎಸ್‌ಐ ಭಾರತಿ ನೇತೃತ್ವದ ತಂಡವು, ಮೃತನ ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
undefined
ಸಲಿಂಗ ಕಾಮಕ್ಕೆ ಒತ್ತಾಯ:
ಬಿಹಾರ ಮೂಲದ ಅಫ್ರೇಜ್, ಹಲವು ವರ್ಷಗಳಿಂದ ಯಶವಂತಪುರದ ಆರ್‌ಎಂಸಿ ಯಾರ್ಡ್‌ನಲ್ಲಿ ಹೋಟೆಲ್ ನಡೆಸುತ್ತಿದ್ದ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿಯಿಂದ ಪ್ರತ್ಯೇಕವಾದ ಬಳಿಕ ಅಫ್ರೇಜ್, ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದ. ಕೆಲ ವರ್ಷಗಳ ಹಿಂದೆ ಆತನಿಗೆ ಪ್ರಾರ್ಥನಾ ಮಂದಿರದ ಶಾಲೆಯ ಸಹಪಾಠಿ ಮೂಲಕ ಸಿದ್ದಿಕಿ ಪರಿಚಯವಾಗಿತ್ತು. ತರುವಾಯ ಅವರಿಬ್ಬರಲ್ಲಿ ಆತ್ಮೀಯ ಮೂಡಿತು. ಇದು ಸಲಿಂಗ ಕಾಮಕ್ಕೂ ತಿರುಗಿತ್ತು. ಪದೇ ಪದೇ ಹಣದಾಸೆ ತೋರಿಸಿ ಸಿದ್ದಿಕಿಗೆ ಆತ ಲೈಂಗಿಕ ಕ್ರಿಯೆಗೆ ಪೀಡಿಸುತ್ತಿದ್ದ. ಇತ್ತೀಚೆಗೆ ಪರಿಚಿತ ಯುವತಿಯೊಂದಿಗೆ ಲೈಂಗಿಕ ಕ್ರಿಯೆಗೆ ಅಫ್ರೇಜ್ ಒತ್ತಾಯಿಸುತ್ತಿದ್ದ. ಇದಕ್ಕೆ ಸಿದ್ದಿಕಿ ವಿರೋಧ ವ್ಯಕ್ತಪಡಿಸಿದರೂ ಆತ ಕಾಡುತ್ತಿದ್ದ ಎಂದು ತಿಳಿದು ಬಂದಿದೆ.
ಚಿತ್ರದುರ್ಗ; ಯಾರನ್ನೋ ಕೊಲೆ ಮಾಡುವ ಬದಲು ಇನ್ಯಾರನ್ನೋ ಹತ್ಯೆ ಮಾಡಿದ
ಇದರಿಂದ ಕೆರಳಿದ ಸಿದ್ದಿಕಿ, ತನ್ನ ಸ್ನೇಹಿತರ ಜತೆ ಸೇರಿ ಅಫ್ರೇಜ್ ಕೊಲೆಗೆ ಸಂಚು ರೂಪಿಸಿದ್ದ. ಅಂತೆಯೇ ಜ.2ರಂದು ರಾತ್ರಿ ‘ಮಾತುಕತೆ’ ನೆಪದಲ್ಲಿ ಹಂಪಿನಗರದ ಶ್ರೀ ಕೃಷ್ಣದೇವರಾಯ ರೈಲ್ವೆ ನಿಲ್ದಾಣದ ಬಳಿಗೆ ಬರುವಂತೆ ಅಫ್ರೇಜ್‌ಗೆ ಸಿದ್ದಿಕಿ ಸೂಚಿಸಿದ್ದ. ಅಲ್ಲಿಗೆ ಬಂದ ಅಫ್ರೇಜ್, ಎಂದಿನಂತೆ ಆರೋಪಿಗಳಿಗೆ ಮದ್ಯ ಸೇವಿಸಲು ಹಣ ಕೊಟ್ಟಿದ್ದಾನೆ. ಆ ವೇಳೆ ಏಕಾಏಕಿ ಮೃತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಆರೋಪಿಗಳು, ಬಳಿಕ ಮೃತದೇಹವನ್ನು ರೈಲ್ವೆ ಹಳಿಗಳ ಮೇಲೆಸೆದು ಪರಾರಿಯಾಗಿದ್ದರು. ಅದೇ ಮಾರ್ಗದಲ್ಲಿ ಬಂದ ರೈಲು ಹರಿದು ಮೃತದೇಹ ತುಂಡಾಗಿತ್ತು ಎಂದು ಪೊಲೀಸರು ವಿವರಿಸಿದ್ದಾರೆ.
ಸುಳಿವು ನೀಡಿದ ಕೊನೆ ಕರೆ
ಈ ಹತ್ಯೆ ಬಳಿಕ ಆರೋಪಿಗಳು, ಮೃತನ ಬಟ್ಟೆಹಾಗೂ ಶೂಗಳನ್ನು ಸುಟ್ಟು ಹಾಕಿದ್ದರು. ಆದರೆ ಮೊಬೈಲ್‌ಗೆ ಸಿದ್ದಿಕಿ ಮಾಡಿದ್ದ ಕೊನೆ ಕರೆಯೇ ಆತನಿಗೆ ಶೂಲವಾಗಿ ಪರಿಣಾಮಿಸಿದೆ. ರುಂಡ-ಮಂಡು ತುಂಡಾಗಿ ಬಿದ್ದಿದ್ದ ಅಪರಿಚಿತ ಮೃತದೇಹ ಕಂಡು ಪೊಲೀಸರಿಗೆ ಸಾರ್ವಜನಿಕರು ತಿಳಿಸಿದ್ದರು. ಬಳಿಕ ಮರಣೋತ್ತರ ಪರೀಕ್ಷೆಯಲ್ಲಿ ಸಾವಿಗೆ ಬಲವಂತ ಆಯುಧದಿಂದ ಹಲ್ಲೆಯಾಗಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದರು. ಈ ಮಾಹಿತಿ ತಿಳಿದು ತನಿಖೆ ಆರಂಭಿಸಿದ ಪಿಎಸ್‌ಐ ಭಾರತಿ ನೇತೃತ್ವ ತಂಡವು, ಘಟನಾ ಸ್ಥಳದ ಪತ್ತೆಯಾದ ಮೊಬೈಲನ್ನು ಪರಿಶೀಲಿಸಿದ್ದರು. ಆಗ ಕೊನೆ ಕರೆಯನ್ನು ಬೆನ್ನಹತ್ತಿದ್ದ ಕೊಲೆ ರಹಸ್ಯ ಬಯಲಾಗಿದೆ. ಮೊದಲು ಸಿದ್ದಿಕಿಯನ್ನು ವಶಕ್ಕೆ ಪಡೆಯಲಾಯಿತು. ನಂತರ ಆತ ನೀಡಿದ ಮಾಹಿತಿ ಮೇರೆ ಇನ್ನುಳಿದವರು ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.