ರೆಮ್‌ಡಿಸಿವಿಯರ್‌ ಇಂಜೆಕ್ಷನ್‌ ಕಾಳಸಂತೆಯಲ್ಲಿ ಮಾರಾಟ..!

By Kannadaprabha News  |  First Published Apr 24, 2021, 3:43 PM IST

ನರ್ಸ್‌, ಲ್ಯಾಬ್‌ ಟೆಕ್ನಿಶಿಯನ್‌ ಸೇರಿದಂತೆ ಮೂವರ ಸೆರೆ, 14 ಇಂಜೆಕ್ಷನ್‌ ವಯಲ್‌ ಜಪ್ತಿ| ಖಚಿತ ಮಾಹಿತಿ ಮೇರೆಗೆ ದಾಳಿ| ಅಗತ್ಯವಿರುವ ಕೋವಿಡ್‌ ರೋಗಿಗಳಿಗೆ ಪ್ರತಿ ವಯಲ್‌ಗೆ 25 ಸಾವಿರ ರು.ಗೆ ಮಾರಾಟ| ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬ್ರಹ್ಮಪುರ ಠಾಣೆಯ ಪೊಲೀಸರು| 


ಕಲಬುರಗಿ(ಏ.24): ಕೊರೋನಾ ಸೋಂಕಿನ ಚಿಕಿತ್ಸೆಯಲ್ಲಿ ಬಳಸುವ ರೆಮ್‌ಡಿಸಿವಿಯರ್‌ ಇಂಜೆಕ್ಷನ್‌ ಕಾಳಸಂತೆ ಮಾರಾಟದಲ್ಲಿ ತೊಡಗಿದ್ದ ಮೂವರನ್ನು ನಗರ ಪೊಲೀಸರು ಬಂಧಿಸಿದ್ದು ಅವರಿಂದ 14 ಇಂಜೆಕ್ಷನ್‌ ವಯಲ್‌, 3 ಮೊಬೈಲ್‌ ಜಪ್ತಿ ಮಾಡಿದ್ದಾರೆ.

ನಾಗಲೇಕರ್‌ ಡೈಗ್ನೋಸ್ಟಿಕ್‌ ಮತ್ತು ಅಥರ್ವ ಚೆಸ್ಟ್‌ ಕ್ಲಿನಿಕ್‌ಗಳಲ್ಲಿ ಎಕ್ಸರೇ ತಂತ್ರಜ್ಞನಾಗಿರುವ ಭೀಮಾಶಂಕರ ಅರಬೋಳ್‌, ಸಿದ್ದಗಂಗಾ ಮೆಡಿಕಲ್ಸ್‌ನಲ್ಲಿ ಉದ್ಯೋಗಿಯಾಗಿರುವ ಲಕ್ಷ್ಮೀಕಾಂತ ಮುಲಗೆ, ಸ್ಟಾಫ್‌ ನರ್ಸ್‌ ಜಿಲಾನಿ ಕಾಜಾ ಖಮರ್‌ ಕಾಲೋನಿ ಇವರನ್ನು ಬಂಧಿಸಿರುವ ಪೊಲೀಸರು ಇವರಿಂದ 14 ವಯಲ್‌ ಇಂಜೆಕ್ಷನ್‌ ಜಪ್ತಿ ಮಾಡಿದ್ದಾರೆ.

Tap to resize

Latest Videos

ಬೆಂಗಳೂರು ಹಾಗೂ ಬೆಳಗಾವಿಯಲ್ಲಿ ಪರಿಚಯವಿರುವ ತಮ್ಮವರಿಂದ ರೆಮ್‌ಡಿಸಿವಿಯರ್‌ ಇಂಜೆಕ್ಷನ್‌ ಖರೀದಿಸಿ ಖಾಸಗಿ ಬಸ್ಸುಗಳ ಮೂಲಕ ಅವುಗಳನ್ನು ಕಲಬುರಗಿಗೆ ತಂದು ಅಗತ್ಯವಿರುವ ಕೋವಿಡ್‌ ರೋಗಿಗಳಿಗೆ ಪ್ರತಿ ವಯಲ್‌ಗೆ 25 ಸಾವಿರ ರುಪಾಯಿಯಂತೆ ಮಾರಾಟ ಮಾಡುತ್ತಿದ್ದರು.

ಕಲಬುರಗಿ: ಕೊರೋನಾ ‘ಯಮಪಾಶ’ ತಪ್ಪಿಸುವುದೇ ಜಿಲ್ಲಾಡಳಿತ?

ಈ ಇಂಜೆಕ್ಷನ್‌ ಬೆಲೆಗೆ ಕೇಂದ್ರ ಸರ್ಕಾರ ಈಚೆಗಷ್ಟೇ ನಿಖರ ಬೆಲೆ ನಿಗದಿಪಡಿಸಿತ್ತು. ಉತ್ಪಾದಕ ಕಂಪನಿಗಳನ್ನಾಧರಿಸಿ ಸದರಿ ಇಂಜೆಕ್ಷನ್‌ 2, 700 ರು ನಿಂದ 3, 700 ರು ವರೆಗೆ ಎಂಆರ್‌ಪಿ ದರದಲ್ಲೇ ಮಾರಾಟವಾಗಬೇಕು, ಆದರೆ 25 ಸಾವಿರಕ್ಕೆ ಇದನ್ನು ಕಾಳಸಂತೆ ಕೋರರು ಮಾರಾಟ ಮಾಡುತ್ತಿರುವ ಖಚಿತ ಮಾಹಿತಿಯನ್ನಾಧರಿಸಿ ದಾಳಿ ಮಾಡಿದಾಗ ಆರೋಪಿಗಳು ಈ ಅಕ್ರಮ ಮಾರಾಟದಲ್ಲಿ ತೊಡಗಿದ್ದಾಗಲೇ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.

ವಂಚನೆ ಪ್ರಕರಣ ಹಾಗೂ ಔಷಧಿ ಬೆಲೆ ನಿಯಂತ್ರಣ ಕಾಯಿದೆಯಡಿ ಇವರೆಲ್ಲರ ಮೇಲೆ ಸ್ಥಳೀಯವಾಗಿ ಬ್ರಹ್ಮಪುರ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಎ ಉಪ ವಿಭಾಗದ ಎಸಿಪಿ ಅಂಶು ಕುಮಾರ್‌ ನೇತೃತ್ವದಲ್ಲಿ ಪಿಎಸ್‌ಐ ವಾಹೀದ್‌ ಕೋತ್ವಾಲ್‌, ಎಎಸ್‌ಐ ಹುಸೇನ್‌ ಬಾಷಾ, ರಾಜಕುಮಾರ್‌, ತೌಸೀಫ್‌, ಶಿವಾನಂದ, ಈರಣ್ಣ ಇವರನ್ನೊಳಗೊಂಡ ಪೊಲೀಸ್‌ ತಂಡ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು ಎಂದು ನಗರ ಒಪಲೀಸ್‌ ಆಯುಕ್ತ ಸತೀಶ ಕುಮಾರ್‌ ಹೇಳಿದ್ದಾರೆ.
 

click me!