ಮೊಬೈಲ್ ಚಾರ್ಜಿಂಗ್ ವಿಚಾರಕ್ಕೆ ಗಲಾಟೆ ನಡೆದು, ಕಣ್ಣಿಗೆ ಗಂಭೀರ ಸ್ವರೂಪದ ಗಾಯವಾಗಿ ವ್ಯಕ್ತಿಯೋರ್ವ ಮೃತಪಟ್ಟಘಟನೆ ತಾಲೂಕಿನ ಮುರಳ್ಳಿ ಮರಾಠಿ ಗ್ರಾಮದಲ್ಲಿ ನಡೆದಿದೆ.
ಸಾಗರ (ನ.12): ಮೊಬೈಲ್ ಚಾರ್ಜಿಂಗ್ ವಿಚಾರಕ್ಕೆ ಗಲಾಟೆ ನಡೆದು, ಕಣ್ಣಿಗೆ ಗಂಭೀರ ಸ್ವರೂಪದ ಗಾಯವಾಗಿ ವ್ಯಕ್ತಿಯೋರ್ವ ಮೃತಪಟ್ಟಘಟನೆ ತಾಲೂಕಿನ ಮುರಳ್ಳಿ ಮರಾಠಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ತಿಮ್ಮಪ್ಪನವರ ಮನೆಗೆ ನ.7ರಂದು ಅದೇ ಗ್ರಾಮದ ಸಿದ್ದಪ್ಪ ಮೊಬೈಲ್ ಚಾರ್ಜಿಂಗ್ ಮಾಡಿಕೊಳ್ಳಲು ಬಂದಿದ್ದ. ಇದೇ ವಿಚಾರವಾಗಿ ಮಾತಿಗೆ ಮಾತು ಬೆಳೆದು ಸಿದ್ದಪ್ಪ, ತಿಮ್ಮಪ್ಪ ಹಾಗೂ ಆತ ಹೆಂಡತಿಯ ಜೊತೆಗೆ ಗಲಾಟೆ ಮಾಡಿಕೊಂಡಿದ್ದಾನೆ. ಅನಂತರ ಅಲ್ಲೆ ಇದ್ದ ದೊಣ್ಣೆಯಿಂದ ಮನೆಗೆ ಅಳವಡಿಸಿದ್ದ ಡಿಶ್ ಬುಟ್ಟಿಗೆ ಹೊಡೆದಿದ್ದಾನೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ತಿಮ್ಮಪ್ಪನ ಎಡಗಣ್ಣಿಗೆ ಸಿದ್ದಪ್ಪ ದೊಣ್ಣೆಯಿಂದ ಬಲವಾಗಿ ಹೊಡೆದಿದ್ದಾನೆ ಎನ್ನಲಾಗಿದೆ. ಇದರಿಂದ ತಿಮ್ಮಪ್ಪನ ಕಣ್ಣಿಗೆ ತೀವ್ರ ಸ್ವರೂಪದ ಗಾಯಗಳಾಗಿತ್ತು.
ಆರ್ಥಿಕವಾಗಿ ಸಬಲರಲ್ಲದ ತಿಮ್ಮಪ್ಪ ಕಣ್ಣಿಗಾದ ಗಾಯಕ್ಕೆ ಚಿಕಿತ್ಸೆ ಮಾಡಿಸಿಕೊಳ್ಳುವಲ್ಲಿ ತಡ ಮಾಡಿದ್ದಾನೆ. ಒಂದು ದಿನದ ಬಳಿಕ ಚಿಕಿತ್ಸೆ ಪಡೆದುಕೊಳ್ಳಲು ಸಾಗರದ ಸರ್ಕಾರಿ ಆಸ್ಪತ್ರೆಗೆ ಬಂದಾಗ ಕಣ್ಣಿಗೆ ಸ್ಕಾ ್ಯನಿಂಗ್ ಮಾಡಿಸುವಂತೆ ವೈದ್ಯರು ಸೂಚಿಸಿದ್ದಾರೆ. ಇದಕ್ಕೆ ಹಣವಿಲ್ಲದೆ ಸುಮ್ಮನಾಗಿದ್ದ ತಿಮ್ಮಪ್ಪ ನಂತರ ನೋವು ಉಲ್ಬಣಿಸಿದಾಗ ಶಿವಮೊಗ್ಗದ ಆಸ್ಪತ್ರೆಗೆ ಹೋಗಿದ್ದಾರೆ. ಅಲ್ಲಿಯೂ ಸಮಸ್ಯೆಗೆ ಪರಿಹಾರ ದೊರೆಯದೆ ಸಂಬಂಧಿಕರ ಸಹಕಾರದಿಂದ ಉಡುಪಿಯ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ತಿಮ್ಮಪ್ಪ ನ. 9ರಂದು ಮೃತಪಟ್ಟಿದ್ದಾನೆ.
ಸಿಎಂ ನಿವಾಸ ಪಕ್ಕದಲ್ಲೇ ಖ್ಯಾತ ಉದ್ಯಮಿಯ ಹತ್ಯೆ, ಹಾಡಹಗಲೇ ನಡೆದ ಭೀಕರ ದೃಶ್ಯ ವೈರಲ್!
ಈ ಸಂಬಂಧ ಮೃತನ ಪತ್ನಿ ಲಕ್ಷ್ಮೇ ನೀಡಿದ ದೂರಿನ ಮೇರೆಗೆ ನ. 9ರಂದು ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಕಲಾಗಿದ್ದು, ತನಿಖೆ ಪ್ರಾರಂಭಿಸಿದ ಕಾರ್ಗಲ್ ವೃತ್ತ ನಿರೀಕ್ಷರ ನೇತೃತ್ವದ ತಂಡವು ಅದೇ ದಿನ ಆರೋಪಿ ಸಿದ್ದಪ್ಪನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.