ಪತ್ನಿಯ ಶೀಲ ಶಂಕಿಸಿ ರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಮಾರಕಾಸ್ತ್ರದಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ ಪತಿಯನ್ನು ಜೀವನಭಿಮಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು (ಫೆ.21): ಪತ್ನಿಯ ಶೀಲ ಶಂಕಿಸಿ ರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಮಾರಕಾಸ್ತ್ರದಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ ಪತಿಯನ್ನು ಜೀವನಭಿಮಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರ್.ಟಿ.ನಗರದ ನಿಗರ್(28) ಹಲ್ಲೆಗೆ ಒಳಗಾದವರು. ಈಕೆಯ ಪತಿ ಷೇಕ್ ಮುಜೀಬ್(35) ಎಂಬಾತನನ್ನು ಬಂಧಿಸಲಾಗಿದೆ. ಸೋಮವಾರ ರಾತ್ರಿ 7 ಗಂಟೆ ಸುಮಾರಿಗೆ ಜೀವನಭೀಮಾನಗರದ ಮುರಗೇಶಪಾಳ್ಯದ ವಿಂಡ್ ಟನಲ್ ರಸ್ತೆಯ ಒಮೆಗಾ ಹೆಲ್ತ್ ಕೇರ್ ಹಿಂಭಾಗ ಈ ಘಟನೆ ನಡೆದಿದೆ.
undefined
ಬೆಟ್ಟಿಂಗ್ ಜತೆ ಹುಡುಗಿಯರ ಚಟ, ಹಗಲು ದರೋಡೆಗಿಳಿದ ರಿಯಲ್ ಎಸ್ಟೇಟ್ ಉದ್ಯಮಿ ಉದ್ಯೋಗಸ್ಥ ದಂಪತಿಯೇ ಟಾರ್ಗೆಟ್!
ಏನಿದು ಘಟನೆ?: ಆರೋಪಿ ಷೇಕ್ ಮುಜೀಬ್ ಮತ್ತು ನಿಗರ್ ದಂಪತಿ ಆರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಆರ್.ಟಿ.ನಗರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ವೃತ್ತಿಯಲ್ಲಿ ಚಾಲಕನಾಗಿರುವ ಷೇಕ್ ಮುಜೀಬ್, ಪತ್ನಿಗೆ ಸಲೀಂ ಎಂಬಾತನ ಜತೆಗೆ ಅನೈತಿಕ ಸಂಬಂಧ ಇರುವ ಬಗ್ಗೆ ಅನುಮಾನವಿತ್ತು. ಈ ವಿಚಾರವಾಗಿ ದಂಪತಿ ನಡುವೆ ಆಗಾಗ ಮನೆಯಲ್ಲಿ ಗಲಾಟೆ ಆಗುತ್ತಿತ್ತು. ಇದರಿಂದ ಮನನೊಂದು ಪತ್ನಿ ನಿಗರ್ ಪತಿಯಿಂದ ಪ್ರತ್ಯೇಕಗೊಂಡು ಕಳೆದ ಆರು ತಿಂಗಳಿಂದ ಜೀವನಭೀಮಾನಗರದ ಪೇಯಿಂಗ್ ಗೆಸ್ಟ್‌ನಲ್ಲಿ ನೆಲೆಸಿದ್ದಳು. ಊಬರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು.
ಕಾದು ಮಾರಣಾಂತಿಕ ಹಲ್ಲೆ: ಪತ್ನಿ ನಿಗರ್ ಪ್ರತ್ಯೇಕವಾಗಿ ನೆಲೆಸಿದ್ದರೂ ಸಹ ಪತಿ ಷೇಕ್ ಮುಜೀಬ್ ಆಕೆಯ ಬಗ್ಗೆ ಕೋಪಗೊಂಡಿದ್ದ. ಹೀಗಾಗಿ ನಿಗರ್ ಉಳಿದಿಕೊಂಡಿರುವ ಪೇಯಿಂಗ್ ಗೆಸ್ಟ್ ಬಳಿಗೆ ಸೋಮವಾರ ಸಂಜೆ ಹುಡುಕಿಕೊಂಡು ಬಂದಿದ್ದ. ಪೇಯಿಂಗ್ ಗೆಸ್ಟ್‌ಗೆ ಪತ್ನಿ ಇನ್ನೂ ಬಾರದಿದ್ದ ಹಿನ್ನೆಲೆಯಲ್ಲಿ ಹೊರಗೆ ಕಾದುಕುಳಿತ್ತಿದ್ದ. ಸಂಜೆ 7 ಗಂಟೆ ಸುಮಾರಿಗೆ ಪತ್ನಿ ನಿಗರ್ ಪೇಯಿಂಗ್ ಗೆಸ್ಟ್ ಬಳಿ ಬರುವುದನ್ನು ನೋಡಿದ ಷೇಕ್ ಮುಜೀಬ್ ಏಕಾಏಕಿ ಆಕೆಯ ಮೇಲೆ ಎರಗಿ ರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಮಾರಕಾಸ್ತ್ರದಿಂದ ಮನಸೋಯಿಚ್ಛೆ ಹಲ್ಲೆ ಮಾಡಿ ಪರಾರಿಯಾಗಿದ್ದ.
ಜನರ ಗಮನ ಬೇರೆಡೆ ಸೆಳೆದು ಮೊಬೈಲ್, ಬೈಕ್ ಕಳವು ಮಾಡುತ್ತಿದ್ದ ಖದೀಮರು ಅರೆಸ್ಟ್
ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ನಿಗರ್‌ನನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕೊಲೆಗೆ ಯತ್ನ ಪ್ರಕರಣ ದಾಖಲಿಸಿಕೊಂಡಿರುವ ಜೀವನಭೀಮಾನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೈ ಬೆರಳು ಕತ್ತರಿಸಲು ಯತ್ನ: ಹಲ್ಲೆಗೊಳಗಾದ ನಿಗರ್, ‘ನಾನು ದುಡಿಯುತ್ತಿದ್ದೇನೆ. ನನ್ನದೇ ಸಂಪಾದನೆಯಲ್ಲಿ ಬದುಕುತ್ತಿದ್ದೇನೆ’ ಎಂದು ಹೇಳಿದ್ದಳು ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡಿದ್ದ ಆರೋಪಿ ಷೇಕ್ ಮುಜೀಬ್, ಆಕೆಯ ಕೈ ಬೆರಳುಗಳನ್ನು ಕತ್ತರಿಸಲು ನಿರ್ಧರಿಸಿದ್ದ. ಏಕೆಂದರೆ, ಕೈ ಬೆರಳು ಇದ್ದರೆ ದುಡಿಯುತ್ತಾಳೆ. ಕೈ ಬೆರಳುಗಳೇ ಇಲ್ಲವಾದರೆ, ನಾನು ಹೇಳಿದ ಹಾಗೆ ಕೇಳಿಕೊಂಡು ಮನೆಯಲ್ಲೇ ಇರುತ್ತಾಳೆ ಎಂದು ಆರೋಪಿ ಭಾವಿಸಿದ್ದ. ಹೀಗಾಗಿ ಆಕೆಯ ಮೇಲೆ ಹಲ್ಲೆಗೆ ಮುಂದಾಗಿದ್ದ. ಆದರೆ, ಕೈ ಬೆರಳಿಗೆ ಹಲ್ಲೆ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆಕೆಯ ತಲೆ ಹಾಗೂ ದೇಹದ ಸುಮಾರು 20 ಕಡೆಗೆ ಹಲ್ಲೆ ಮಾಡಿದ್ದ ಎಂದು ಪೊಲೀಸರ ವಿಚಾರಣೆಯಿಂದ ತಿಳಿದು ಬಂದಿದೆ.