ಬಳ್ಳಾರೀಲಿ ಸ್ಫೋಟಕ ವಸ್ತು ಖರೀದಿಸಿದ್ದ ಶಂಕಿತ ಉಗ್ರರು?

By Kannadaprabha News  |  First Published Dec 27, 2023, 6:02 AM IST

ಗೊಬ್ಬರದ ಅಂಗಡಿಯಲ್ಲಿ 1 ಕೆಜಿ ಅಮೋನಿಯಂ ನೈಟ್ರೇಟ್‌ ಖರೀದಿ। ವಿಚಾರಣೆ ವೇಳೆ ಮಾಹಿತಿ, ನಿಷೇಧಿತ ಐಸಿಸ್ ಸಂಘಟನೆಗೆ ವಿದ್ಯಾರ್ಥಿಗಳನ್ನು ಸೆಳೆಯುತ್ತಿದ್ದರೆ?, ಡಿ.18ರಂದು ಬಳ್ಳಾರಿಯಲ್ಲಿ ನಡೆದಿದ್ದ ಎನ್‌ಐಎ ದಾಳಿ. 


ಬಳ್ಳಾರಿ(ಡಿ.27):  ಡಿ.18ರಂದು ನಗರದಲ್ಲಿ ನಡೆದ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ದಾಳಿ ವೇಳೆ ಬಂಧಿತರಾದ ಇಬ್ಬರು ಶಂಕಿತ ಉಗ್ರರು ಸ್ಫೋಟಕ ವಸ್ತು ತಯಾರಿಕೆಗೆ ಅಮೋನಿಯಂ ನೈಟ್ರೇಟ್‌ ಅನ್ನು ಬಳ್ಳಾರಿಯಲ್ಲಿಯೇ ಖರೀದಿಸಿದ್ದರು ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.

ಬಂಧಿತ ಪ್ರಮುಖ ಆರೋಪಿಗಳಾದ ಮಿನಾಜ್ ಅಲಿಯಾಸ್ ಮಹ್ಮದ್ ಸುಲೇಮನ್ ಹಾಗೂ ಸೈಯದ್ ಸಮೀರ್ ಅವರು ಸ್ಫೋಟಕ ತಯಾರಿಕೆಗೆ ಒಂದು ಕೆಜಿಯಷ್ಟು ಅಮೋನಿಯಂ ನೈಟ್ರೇಟ್‌ ಅನ್ನು ನಗರದ ಫರ್ಟಿಲೈಸರ್ ಅಂಗಡಿಯೊಂದರಲ್ಲಿ ಅಕ್ಟೋಬರ್‌ 22ರಂದು ಖರೀದಿ ಮಾಡಿದ್ದರು ಎಂದು ಎನ್‌ಐಎ ಅಧಿಕಾರಿಗಳ ವಿಚಾರಣೆ ವೇಳೆ ಗೊತ್ತಾಗಿದೆ. ಆದರೆ, ಅಮೋನಿಯಂ ನೈಟ್ರೇಟ್ ನ್ನು ಖರೀದಿ ಮಾಡಿದ್ದು ಯಾವ ಅಂಗಡಿಯಿಂದ ಎಂಬುದರ ಕುರಿತು ಸ್ಪಷ್ಟ ಸುಳಿವನ್ನು ಬಂಧಿತ ಆರೋಪಿಗಳು ನೀಡಿಲ್ಲ. ಖರೀದಿ ಕುರಿತು ರಸೀದಿ ಲಭ್ಯವಾಗಿಲ್ಲ.

Tap to resize

Latest Videos

undefined

ಒಂದೇ ವರ್ಷದಲ್ಲಿ ಮೂರು ಬಾರಿ ಎನ್‌ಐಎ ದಾಳಿ: ಬಳ್ಳಾರಿಯನ್ನೇ ಸೆಂಟರ್ ಮಾಡಿಕೊಂಡ್ರಾ ಉಗ್ರರು?!

ಅಮೋನಿಯಂ ನೈಟ್ರೇಟ್, ಹೊಲ-ಗದ್ದೆಗಳಿಗೆ ಬಳಸುವ ಯೂರಿಯಾ ಮಾದರಿಯಲ್ಲಿಯೇ ಇರಲಿದ್ದು, ಇದರ ಮಾರಾಟಕ್ಕೆ ಯಾವುದೇ ನಿರ್ಬಂಧವಿಲ್ಲ. ಈ ವಸ್ತುವನ್ನು ಸ್ಫೋಟಕ ವಸ್ತು ತಯಾರಿಕೆಗೂ ಬಳಕೆ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.

ಡಿ.18ರಂದು ಕರ್ನಾಟಕ ಸೇರಿದಂತೆ ದೇಶದ 19 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು, ಬಳ್ಳಾರಿಯಲ್ಲಿ ಇಬ್ಬರನ್ನು ಬಂಧಿಸಿದ್ದರು. ಐಸಿಸ್‌ನಿಂದ ಪ್ರೇರಣೆಗೊಂಡು ಬಳ್ಳಾರಿಯನ್ನು ಕೇಂದ್ರವಾಗಿ ಇರಿಸಿಕೊಂಡಿದ್ದ ( ಬಳ್ಳಾರಿ ಮಾಡ್ಯೂಲ್) ಉಗ್ರರು, ದೇಶದ ನಾನಾ ಕಡೆ ವಿಧ್ವಂಸಕ ಕೃತ್ಯ ನಡೆಸಲು ಸಜ್ಜಾಗಿದ್ದರು ಎಂಬ ಸ್ಫೋಟಕ ಮಾಹಿತಿ ತನಿಖೆ ವೇಳೆ ಬಹಿರಂಗಗೊಂಡಿತ್ತು.

ಬಂಧಿತರಲ್ಲಿ ಒಬ್ಬ ಕಾನೂನು, ಮತ್ತೊಬ್ಬ ಬಿಸಿಎ ವಿದ್ಯಾರ್ಥಿ. ಇಬ್ಬರೂ ರಾಜ್ಯದ ವಿವಿಧ ಕಾಲೇಜು, ವಿವಿ ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟುಕೊಂಡು ನಿಷೇಧಿತ ಐಸಿಸ್ ಸಂಘಟನೆಗೆ ವಿದ್ಯಾರ್ಥಿಗಳನ್ನು ಸೆಳೆಯುತ್ತಿದ್ದರು ಎಂಬ ಮಾಹಿತಿ ತನಿಖೆ ವೇಳೆ ಗೊತ್ತಾಗಿದೆ ಎಂದು ಹೇಳಲಾಗುತ್ತಿದೆ.

click me!