ಎಸ್‌ಐ ವಿರುದ್ಧ ದೂರು ದಾಖಲಿಸಿದ ಮಹಿಳಾ ಎಸ್‌ಐ| ಹಾರ್ಲಿಕ್ಸ್, ಡ್ರೈ ಫ್ರೂಟ್ಸ್, ವಿಟಮಿನ್ ಮಾತ್ರೆಗಳೆಂದು ಮಾತ್ರೆಗಳನ್ನು ನೀಡಿ ಗರ್ಭಪಾತ ಮಾಡಿಸಿದ್ದ ಎಸ್‌ಐ | ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಠಾಣೆಯ ಪೊಲೀಸರು|
ಮೈಸೂರು(ಡಿ.11): ಪ್ರೀತಿಸಿ ಕೈಕೊಟ್ಟ ಸಬ್ ಇನ್ಸ್‌ಪೆಕ್ಟರ್ ವಿರುದ್ಧ ಮಹಿಳಾ ಸಬ್ ಇನ್ಸ್‌ಪೆಕ್ಟರ್‌ರೊಬ್ಬರು ಮೈಸೂರಿನ ಪೊಲೀಸ್ ಠಾಣೆಯೊಂದರಲ್ಲಿ ದೂರು ದಾಖಲಿಸಿದ್ದಾರೆ.
ಮೈಸೂರಿನ ಠಾಣೆಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಸ್‌ಐ ವಿರುದ್ಧ ನಗರದ ಮತ್ತೊಂದು ಠಾಣೆಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಎಸ್‌ಐ ದೂರು ನೀಡಿದ್ದಾರೆ.
2017ರಲ್ಲಿ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಬಳಿಕ ಮದುವೆಯಾಗುವುದಾಗಿ ನಂಬಿಸಿ ಹಲವಾರು ಕಡೆ ಕರೆದುಕೊಂಡು ಹೋಗಿ ಬಲವಂತವಾಗಿ ಲೈಂಗಿಕ ಸಂಪರ್ಕ ಮಾಡಿ, ಗರ್ಭವತಿಯನ್ನಾಗಿ ಮಾಡಿದ್ದ ಎಂದು ಆರೋಪಿಸಲಾಗಿದೆ.
ಪ್ರಯಾಣಿಕರೇ ಗಮನಿಸಿ : ಬದಲಾಗಿದೆ ರೈಲುಗಳ ಟೈಂ ಟೇಬಲ್
ಗರ್ಭಿಣಿ ವಿಚಾರ ತಿಳಿದ ನಂತರ ಗರ್ಭಪಾತ ಮಾಡಿಸಲು ಒತ್ತಾಯಿಸಿದ್ದ. ಇದಕ್ಕೆ ಒಪ್ಪದಿದ್ದಾಗ ಹಾರ್ಲಿಕ್ಸ್, ಡ್ರೈ ಫ್ರೂಟ್ಸ್, ವಿಟಮಿನ್ ಮಾತ್ರೆಗಳೆಂದು ಮಾತ್ರೆಗಳನ್ನು ನೀಡಿ ಗರ್ಭಪಾತ ಮಾಡಿಸಿದ್ದ. . ಮದುವೆಯಾಗುವಂತೆ ಕೇಳಿದಾಗ ಸಣ್ಣಪುಟ್ಟವಿಚಾರಗಳಿಗೆ ಜಗಳ ಮಾಡಿ, ನೀನು ಬೇರೆ ಮದುವೆ ಮಾಡಿಕೊಂಡು ಚೆನ್ನಾಗಿರು, ನನ್ನನ್ನು ಕೇಳಿದರೆ ಸಾಯಿಸುತ್ತೇನೆಂದು ಬೆದರಿಕೆ ಹಾಕಿದ್ದ ಎಂದು ಮಹಿಳಾ ಪಿಎಸ್‌ಐ ದೂರಿದ್ದಾರೆ.
ಈಗ ಬೇರೊಂದು ಮದುವೆ ಮಾಡಿಕೊಂಡಿದ್ದು, ಅವರ ವಿರುದ್ಧ ಕ್ರಮ ಜರುಗಿಸುವಂತೆ ಮಹಿಳಾ ಎಸ್‌ಐ ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.