ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವಿದ್ಯಾರ್ಥಿ ಡಿಬಾರ್‌

By Kannadaprabha NewsFirst Published Dec 10, 2020, 8:58 AM IST
Highlights

ರಾಷ್ಟ್ರೀಯ ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ| ಇಂಟರ್ನ್‌ಶಿಪ್‌ಗಾಗಿ ಕಾನೂನು ಕಾಲೇಜಿಗೆ ಬಂದಿದ್ದ ಉತ್ತರ ಭಾರತದ ವಿದ್ಯಾರ್ಥಿನಿ| ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ವೇಳೆ ವಿದ್ಯಾರ್ಥಿನಿಗೆ ಮತ್ತು ಭರಿಸಿ ಕೃತ್ಯ ಎಸಗಿದ್ದ ವಿದ್ಯಾರ್ಥಿ| ವಿಚಾರಣೆಯಲ್ಲಿ ಆರೋಪ ಸಬೀತು ಹಿನ್ನೆಲೆ| 

ಪ್ರಭುಸ್ವಾಮಿ ನಟೇಕರ್‌

ಬೆಂಗಳೂರು(ಡಿ.10): ರಾಜ್ಯದಲ್ಲಿನ ಪ್ರತಿಷ್ಠಿತ ರಾಷ್ಟ್ರೀಯ ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಅದೇ ಕಾಲೇಜಿನ ಹೊರ ವಿದ್ಯಾರ್ಥಿಯೊಬ್ಬನನ್ನು ವಜಾಗೊಳಿಸಿದ ಪ್ರಸಂಗ ನಡೆದಿದೆ.

ಇದೇ ಮೊದಲ ಬಾರಿಗೆ ರಾಜ್ಯದಲ್ಲಿರುವ ಏಕೈಕ ರಾಷ್ಟ್ರೀಯ ಕಾನೂನು ಕಾಲೇಜು ವಿದ್ಯಾರ್ಥಿಯೊಬ್ಬನನ್ನು ವಜಾಗೊಳಿಸಿದೆ. ರಿಹಾನ್‌ ಗುಪ್ತಾ ವಜಾಗೊಂಡಿರುವ ವಿದ್ಯಾರ್ಥಿ. ಈ ಮೂಲಕ ಕಾಲೇಜಿನಲ್ಲಿ ಅಸಭ್ಯವಾಗಿ ವರ್ತಿಸಿದರೆ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಸಂದೇಶವನ್ನು ಸ್ಪಷ್ಟವಾಗಿ ರವಾನಿಸಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕಾಲೇಜು, ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವ ಮಾದರಿಯಲ್ಲಿಯೇ ವಿಚಾರಣೆ ನಡೆಸಿ ತೀರ್ಮಾನ ಪ್ರಕಟಿಸಲಾಗಿದೆ. ಕಳೆದ ಆರು ತಿಂಗಳ ಕಾಲ ನಡೆದ ವಿಚಾರಣೆಯಲ್ಲಿ ವಿದ್ಯಾರ್ಥಿ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕಾಲೇಜಿನಿಂದ ವಜಾಗೊಳಿಸಲಾಗಿದೆ ಎಂದು ಮೂಲಗಳು ಹೇಳಿವೆ.

ವಿದ್ಯಾರ್ಥಿಯ ತಂದೆ ವಕೀಲರಾಗಿದ್ದು, ಪಂಜಾಬ್‌ನಲ್ಲಿ ವಕೀಲ ವೃತ್ತಿಯನ್ನು ಮಾಡುತ್ತಿದ್ದಾರೆ. ತಾಯಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿಯ ಪೋಷಕರು ಪ್ರಕರಣವನ್ನು ಮುಚ್ಚಿಹಾಕಲು ಸಾಕಷ್ಟುಪ್ರಯತ್ನ ನಡೆಸಿದರು. ಗಣ್ಯಾತಿಗಣ್ಯರಿಂದಲೂ ಒತ್ತಡ ಹಾಕಲಾಯಿತು. ಆದರೆ, ಯಾವುದೇ ಒತ್ತಡಕ್ಕೆ ಮಣಿಯದೆ ರಾಷ್ಟ್ರೀಯ ಕಾನೂನು ಕಾಲೇಜು ತನ್ನ ವಿದ್ಯಾರ್ಥಿಯನ್ನು ಕಾಲೇಜಿನಿಂದ ವಜಾಗೊಳಿಸಿದೆ.

ತನ್ನಿಬ್ಬರು ಪುತ್ರಿಯರ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ : ಪಾಪಿ ತಂದೆಗೆ ಆಜೀವ ಜೈಲು

ಘಟನೆಯ ವಿವರ:

ಉತ್ತರ ಭಾರತದ ರಾಷ್ಟ್ರೀಯ ಕಾನೂನು ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ಕಾನೂನು ವಿದ್ಯಾರ್ಥಿನಿ ಇಂಟರ್ನ್‌ಶಿಪ್‌ಗಾಗಿ ರಾಜ್ಯದ ರಾಷ್ಟ್ರೀಯ ಕಾನೂನು ಕಾಲೇಜಿಗೆ ಆಗಮಿಸಿ ಅಲ್ಲಿನ ವಸತಿ ನಿಲಯದಲ್ಲಿ ತಂಗಿದ್ದಳು. ಕೋವಿಡ್‌ಗೂ ಮುನ್ನ ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಮೋಜು ಮಸ್ತಿ ನಡೆದಿದ್ದು, ಮದ್ಯ ಸೇವನೆ ನಡೆದಿದೆ. ವಿದ್ಯಾರ್ಥಿ ರಿಹಾನ್‌ಗುಪ್ತಾ, ವಿದ್ಯಾರ್ಥಿನಿಗೆ ಮತ್ತು ಬೆರೆಸಿ ಪ್ರಜ್ಞೆ ಇಲ್ಲದಂತೆ ಮಾಡಿದ್ದಾನೆ. ಕೊಠಡಿಯೊಂದಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ವಿದ್ಯಾರ್ಥಿಗಳ ಓಡಾಟ ಇದ್ದ ಕಾರಣ ಪ್ರಜ್ಞಾಹೀನಳಾದ ವಿದ್ಯಾರ್ಥಿನಿಯನ್ನು ಹೊರಗೆ ಕರೆದುಕೊಂಡು ಬಂದು ಕುರ್ಚಿಯ ಮೇಲೆ ಕೂರಿಸಿ ಅಲ್ಲಿಂದ ನಾಪತ್ತೆಯಾದ ಎಂದು ತಿಳಿದು ಬಂದಿದೆ.

ವಿದ್ಯಾರ್ಥಿನಿಯ ಪರಿಸ್ಥಿತಿಯನ್ನು ಗಮನಿಸಿದ ಇತರೆ ವಿದ್ಯಾರ್ಥಿಗಳು ತಕ್ಷಣ ಆಕೆಗೆ ಆರೈಕೆ ಮಾಡಿದ್ದಾರೆ. ವಿದ್ಯಾರ್ಥಿನಿಗೆ ಮರುದಿನ ತನ್ನ ಮೇಲೆ ದೌರ್ಜನ್ಯ ನಡೆದಿರುವುದು ಗೊತ್ತಾಗಿದೆ. ತಕ್ಷಣ ಕಾಲೇಜಿನ ಮುಖ್ಯಸ್ಥರಿಗೆ ದೂರು ನೀಡಿದ್ದಾಳೆ. ತಕ್ಷಣ ವಿದ್ಯಾರ್ಥಿಯನ್ನು ಅಮಾನತುಗೊಳಿಸಿತು. ತರುವಾಯ ವಿಚಾರಣಾ ಸಮಿತಿ ರಚನೆ ಮಾಡಿ ವಿಚಾರಣೆ ನಡೆಸಿದಾಗ ರಿಹಾನ್‌ ಗುಪ್ತಾ ನಡೆಸಿರುವ ದೌರ್ಜನ್ಯ ಸಾಬೀತಾಗಿದೆ. ಸಿಸಿ ಕ್ಯಾಮೆರಾದಲ್ಲಿ ದಾಖಲಾದ ಸಾಕ್ಷ್ಯ ಮತ್ತು ಸ್ಥಳದಲ್ಲಿದ್ದ ವಿದ್ಯಾರ್ಥಿಗಳ ಹೇಳಿಕೆಗಳಿಂದ ಆರೋಪ ಸಾಬೀತಾಗಿದೆ. ವಿಚಾರಣೆ ಸಮಿತಿಯು ಕುಲಪತಿಗೆ ವರದಿ ನೀಡಿ ವಜಾಗೊಳಿಸುವಂತೆ ಶಿಫಾರಸ್ಸು ಮಾಡಿದೆ. ಅಲ್ಲದೇ, ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳನ್ನು ಒಳಗೊಂಡ ಕಾರ್ಯನಿರ್ವಾಹಕ ಸಮಿತಿಯು ಸಹ ವಿಚಾರಣೆ ಸಮಿತಿಯ ಶಿಫಾರಸ್ಸನ್ನು ಎತ್ತಿ ಹಿಡಿದಿದೆ.

ವಿಚಾರಣೆ ತಪ್ಪಿಸಲು ಅನಾರೋಗ್ಯದ ನೆಪ

ಘಟನೆ ಬಳಿಕ ವಿದ್ಯಾರ್ಥಿ ತನ್ನ ತವರೂರಿಗೆ ಮರಳಿದ್ದು, ವಿಚಾರಣೆಗೆ ಹಾಜರಾಗುವಂತೆ ತಿಳಿಸಿದರೂ ಅನಾರೋಗ್ಯ ನೆಪವೊಡ್ಡಿರುವುದು ಗೊತ್ತಾಗಿದೆ. ಪೋಷಕರು ಪ್ರಭಾವಿಗಳಾಗಿದ್ದು, ವಿಚಾರಣೆಗೆ ಕಳುಹಿಸಲು ಅನಾರೋಗ್ಯ ನೆಪ ಹೇಳಿ ಹಿಂದೇಟು ಹಾಕಿದ್ದರು. ಆನ್‌ಲೈನ್‌ನಲ್ಲಿ ವಿಚಾರಣೆ ನಡೆಸುವಂತೆ ಕೋರಿದ್ದರು. ಆದರೆ, ಇಂತಹ ಗಂಭೀರ ಸ್ವರೂಪದ ಪ್ರಕರಣಗಳನ್ನು ಆನ್‌ಲೈನ್‌ನಲ್ಲಿ ವಿಚಾರಣೆ ನಡೆಸಿದರೆ ನ್ಯಾಯಾಲಯದಲ್ಲಿ ಆರೋಪ ಸಾಬೀತು ಪಡಿಸುವುದು ಕಷ್ಟವಾಗಲಿದೆ ಎಂದು ಮನಗಂಡ ವಿಚಾರಣಾ ಸಮಿತಿಯು ಆರೋಗ್ಯಯುತನಾದ ಬಳಿಕವೇ ವಿಚಾರಣೆ ನಡೆಸುವುದಾಗಿ ಪಟ್ಟು ಹಿಡಿಯಿತು. ಅನಿವಾರ್ಯವಾಗಿ ಪೋಷಕರು ತಮ್ಮ ಮಗನನ್ನು ವಿಚಾರಣೆಗೆ ಕಳುಹಿಸಬೇಕಾಯಿತು. ನಂತರ ವಿಚಾರಣೆ ನಡೆಸಲಾಯಿತು. ಈ ನಡುವೆ, ದೂರನ್ನು ಹಿಂಪಡೆಯುವಂತೆ ವಿದ್ಯಾರ್ಥಿನಿಯ ಪೋಷಕರ ಮೇಲೂ ಒತ್ತಡ ಹಾಕಿರುವ ಘಟನೆಯೂ ನಡೆದಿದೆ. ಆದರೆ, ವಿದ್ಯಾರ್ಥಿನಿಯು ದೂರನ್ನು ಹಿಂಪಡೆಯದೆ, ವಿಚಾರಣೆಗೆ ಸಹಕರಿಸಿದ್ದು ನ್ಯಾಯ ಸಮ್ಮತ ತೀರ್ಮಾನ ಕೈಗೊಳ್ಳಲು ಸಾಧ್ಯವಾಯಿತು ಎಂದು ಹೇಳಲಾಗಿದೆ.
 

click me!