ಬಾಲಕಿಯ ಹೇಳಿಕೆಯನ್ನು ಪಡೆದಿರುವ ಠಾಣಾಧಿಕಾರಿಗಳು ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿ ಮಲತಂದೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾಮನಗರ(ಜು.30): ಮಲತಂದೆಯ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ ಬಾಲಕಿ ತಾಲೂಕಿನ ಸರ್ಕಾರಿ ಶಾಲೆಯಿಂದ ನಾಪತ್ತೆಯಾಗಿ ಗುರುವಾರ ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷವಾಗಿದ್ದಾಳೆ. ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ಗುರುವಾರ ನಾಪತ್ತೆಯಾಗಿದ್ದಳು. ಶಾಲೆ ಬಿಟ್ಟ ನಂತರ ಕತ್ತಲಾದರೂ ಬಾಲಕಿ ಮನೆಗೆ ಬರಲಿಲ್ಲವೆಂದು ಬಾಲಕಿಯ ಮಲತಂದೆ ರಾಮನಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಡಿವೈಎಸ್‌ಪಿ ದಿನಕರ್ ಶೆಟ್ಟಿ ನೇತೃತ್ವದ ಪೊಲೀಸ್ ಅಧಿಕಾರಿಗಳ ತಂಡ ಶುಕ್ರವಾರ ಬೆಳಿಗ್ಗೆ ಸರ್ಕಾರಿ ಶಾಲೆಗೆ ತೆರಳಿ ಪರಿಶೀಲನೆ ನಡೆಸಿತ್ತು. ಶಿಕ್ಷಕರು ಮತ್ತು ಶಾಲಾ ವಿದ್ಯಾರ್ಥಿಗಳಿಂದ ಮಾಹಿತಿ ಕಲೆ ಹಾಕಿದರು. ಆದರೆ, ಶುಕ್ರವಾರ ಸಂಜೆ ವೇಳೆಗೆ ಬೆಂಗಳೂರಿನ ಕೋಣನಕುಂಟೆ ಠಾಣೆಯಲ್ಲಿ ಪ್ರತ್ಯಕ್ಷಳಾಗಿದ್ದು, ಪೊಲೀಸ್ ಅಧಿಕಾರಿಯೊಬ್ಬರು ಕರೆ ಮಾಡಿ ಬಾಲಕಿ ಠಾಣೆಗೆ ಹಾಜರಾಗಿರುವ ವಿಷಯವನ್ನು ದೃಢೀಕರಿಸಿದ್ದಾರೆ.
Mangaluru crimes: ಪ್ರೀತಿಸುವುದಾಗಿ ನಂಬಿಸಿ ಕೇರಳ ಮೂಲದ ಯುವಕರಿಂದ ಅಪ್ರಾಪ್ತೆಯ ಅತ್ಯಾಚಾರ
ತಮಿಳುನಾಡು ಮೂಲದ ಮಲತಂದೆ ಕೂಲಿ ಕೆಲಸ ಮಾಡುತ್ತಿದ್ದು, ಕುಟಂಬದೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದರು. ತನ್ನ ಮಲತಂದೆಯ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರದಿಂದ ನೊಂದ ಬಾಲಕಿ ಮನೆ ತೊರೆಯುವ ನಿರ್ಧಾರ ಮಾಡಿದ್ದಾಗಿ ಬಾಲಕಿ ಕೋಣನಕುಂಟೆ ಠಾಣೆಯಲ್ಲಿ ಹೇಳಿಕೊಂಡಿದ್ದಾಳೆ.
ಬಾಲಕಿಯ ಹೇಳಿಕೆಯನ್ನು ಪಡೆದಿರುವ ಠಾಣಾಧಿಕಾರಿಗಳು ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿ ಮಲತಂದೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂತ್ರಸ್ಥ ಬಾಲಕಿಯನ್ನು ಕೋಣನಕುಂಟೆಯಲ್ಲಿರುವ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ. ರಾಮನಗರ ಗ್ರಾಮಾಂತರ ಠಾಣೆಯಲ್ಲಿಯೂ ಪ್ರಕರಣ ದಾಖಲಾಗಿದೆ.