
ಬೆಂಗಳೂರು (ಏ.7): ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ \\Bವಿಮಾನ ನಿಲ್ದಾಣದಲ್ಲಿ ತಪಾಸಣೆ ನೆಪದಲ್ಲಿ ದಕ್ಷಿಣ ಕೊರಿಯಾ ಮಹಿಳೆಯ ಖಾಸಗಿ ಭಾಗಗಳನ್ನು ಸ್ಪರ್ಶಿಸಿ ಲೈಂಗಿಕ ದೌರ್ಜನ್ಯ ಎಸಗಿದ ಉದ್ಯೋಗಿಗೆ ಹೈಕೋರ್ಟ್ ಛೀಮಾರಿ ಹಾಕಿದೆ.
‘ಅನ್ಯ ದೇಶದ ಮಹಿಳೆಯನ್ನು ತಪಾಸಣೆ ನೆಪದಲ್ಲಿ ಪುರುಷರ ಶೌಚಾಲಯಕ್ಕೆ ಕರೆದೊಯ್ದು, ‘ಟಿ’ ಮಾದರಿಯಲ್ಲಿ ನಿಲ್ಲಿಸಿ ದೇಹದ ಎಲ್ಲಾ ಭಾಗಗಳನ್ನು ಸ್ಪರ್ಶಿಸಲಾಗಿದೆ. ಈತ ಎಂತಹ ಅಧಿಕಾರಿ? ಈ ವರ್ತನೆಯನ್ನು ಸಹಿಸಲಾಗದು’ ಎಂದು ವಿಮಾನ ನಿಲ್ದಾಣದಲ್ಲಿ ವಲಸೆ ತಪಾಸಣೆ ವಿಭಾಗದ ಸಿಬ್ಬಂದಿ ಬೆಂಗಳೂರ ಉತ್ತರ ತಾಲೂಕಿನ ರಾಮಯ್ಯ ಲೇಔಟ್‌ನ ಥಾಮಸ್ ಟೌನ್ ನಿವಾಸಿ ಮೊಹಮ್ಮದ್ ಆಫಾನ್ ಅಹ್ಮದ್‌ಗೆ ಹೈಕೋರ್ಟ್ ಚಾಟಿ ಬೀಸಿದೆ.
ಲೈಂಗಿಕ ದೌರ್ಜನ್ಯ ಅಪರಾಧ ಸಂಬಂಧ ತನ್ನ ವಿರುದ್ಧ ಬಿಐಎಎಲ್ ಪೊಲಿಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಮೊಹಮ್ಮದ್ ಆಫಾನ್ ಅಹ್ಮದ್ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ, ಆರೋಪಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿತು. ಇದಕ್ಕೂ ಮುನ್ನ ವಿಚಾರಣೆ ವೇಳೆ ಆರೋಪಿ ಪರ ವಕೀಲೆ ಹಾಜರಾಗಿ, ಅರ್ಜಿದಾರರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವಿದೆ ಎಂದು ತಿಳಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಅರ್ಜಿದಾರ ವಲಸೆ ತಪಾಸಣೆ ವಿಭಾಗದಲ್ಲಿ ದಕ್ಷಿಣ ಕೊರಿಯಾ ದೇಶದ ಮಹಿಳೆಯನ್ನು ಪುರುಷರ ಶೌಚಾಲಯಕ್ಕೆ ಕರೆದೊಯ್ದು ‘ಟಿ’ ಮಾದರಿಯಲ್ಲಿ ನಿಲ್ಲಿಸಿ ದೇಹದೆಲ್ಲೆಡೆ ಸ್ಪರ್ಶಿಸಿದ್ದಾರೆ. ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿರುವುದನ್ನು ಸಹಿಸಿಕೊಳ್ಳಬೇಕೆ ಎಂದು ಖಾರವಾಗಿ ಪ್ರಶ್ನಿಸಿತು.
ಅಲ್ಲದೆ, ಪುರುಷರ ಶೌಚಾಲಯಕ್ಕೆ ಮಹಿಳೆಯನ್ನು ಏಕೆ ಕರೆದೊಯ್ಯಲಾಗಿತ್ತು? ಎಂಬುದನ್ನು ಮೊದಲು ಹೇಳಿ ಎಂದು ಕೇಳಿದ ಪೀಠ, ಮಹಿಳಾ ಶೌಚಾಲಯದಲ್ಲಿ ಮತ್ತೊಬ್ಬರು ಇದ್ದರು ಎಂಬುದಾಗಿ ಅರ್ಜಿದಾರ ಸಮರ್ಥನೆ ಬೇರೆ ಕೊಟ್ಟಿದ್ದಾರೆ. ಅರ್ಜಿದಾರ ಯಾವ ರೀತಿಯ ಅಧಿಕಾರಿ ಎಂದು ಚಾಟಿ ಬೀಸಿ, ಅರ್ಜಿ ವಜಾಗೊಳಿಸಿ ಆದೇಶಿಸಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ