ಸೊರಬದಲ್ಲಿ ಆಘಾತಕಾರಿ ಘಟನೆ: ಕಾದ ಚಾಕುವಿನಿಂದ ಮಗು ಗಲ್ಲಕ್ಕೆ ಬರೆ ಎಳೆದ ಅಂಗನವಾಡಿ ಸಹಾಯಕಿ

Published : Oct 31, 2025, 10:29 AM IST
Soraba incident

ಸಾರಾಂಶ

ಬೆಂಕಿಯಲ್ಲಿ ಕಾಸಿದ ಚಾಕುವಿನಿಂದ ಗಲ್ಲಕ್ಕೆ ಬರೆ ಎಳೆದ ಘಟನೆ ಗುರುವಾರ ತಾಲೂಕಿನ ಚಿಕ್ಕಸವಿ ಗ್ರಾಮದಲ್ಲಿ ನಡೆದಿದೆ. ಚಿಕ್ಕಸವಿ ಗ್ರಾಮದ ಚಂದ್ರಪ್ಪ ಮತ್ತು ನಂದಿನಿ ದಂಪತಿಯ ಮೂರುವರೆ ವರ್ಷದ ಯೋಧಮೂರ್ತಿ ಬೆಂಕಿ ಬರೆಗೆ ತುತ್ತಾದ ಮಗುವಾಗಿದೆ.

ಸೊರಬ (ಅ.31): ಅಂಗನವಾಡಿ ಕೇಂದ್ರದ ಮಗುವಿಗೆ ಸಹಾಯಕಿ ಬೆಂಕಿಯಲ್ಲಿ ಕಾಸಿದ ಚಾಕುವಿನಿಂದ ಗಲ್ಲಕ್ಕೆ ಬರೆ ಎಳೆದ ಘಟನೆ ಗುರುವಾರ ತಾಲೂಕಿನ ಚಿಕ್ಕಸವಿ ಗ್ರಾಮದಲ್ಲಿ ನಡೆದಿದೆ. ಚಿಕ್ಕಸವಿ ಗ್ರಾಮದ ಚಂದ್ರಪ್ಪ ಮತ್ತು ನಂದಿನಿ ದಂಪತಿಯ ಮೂರುವರೆ ವರ್ಷದ ಯೋಧಮೂರ್ತಿ ಬೆಂಕಿ ಬರೆಗೆ ತುತ್ತಾದ ಮಗುವಾಗಿದೆ. ಉಳವಿ ಹೋಬಳಿಯ ಚಿಕ್ಕಸವಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ10 ಮಕ್ಕಳಿದ್ದಾರೆ.

ಗುರುವಾರ ಬೆಳಿಗ್ಗೆ ಎಂದಿನಂತೆ ಮಕ್ಕಳು ಹಾಜರಾಗಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರು ಮಕ್ಕಳು ಜಗಳವಾಡಿದ್ದಾರೆ. ಯೋಧಮೂರ್ತಿ ಇನ್ನೊಬ್ಬ ಮಗುವಿಗೆ ಕಚ್ಚಿದ್ದಾನೆ. ಪರಸ್ಪರ ಜಗಳವಾಡುತ್ತಿದ್ದ ಮಕ್ಕಳನ್ನು ಬಿಡಿಸುವ ಬದಲು ಅಂಗನವಾಡಿ ಸಹಾಯಕಿ ಹೇಮಮ್ಮ ಎನ್ನುವವರು ಚಾಕುವನ್ನು ಬೆಂಕಿಯಲ್ಲಿ ಕಾಸಿ ಯೋಧಮೂರ್ತಿ ಮಗುವಿನ ಗಲ್ಲಕ್ಕೆ ಬರೆ ಎಳೆದಿದ್ದಾರೆ. ಕೂಡಲೇ ಮಗುವಿನ ಪೋಷಕರು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಗು ಯೋಧಮೂರ್ತಿಯನ್ನು ಚಿಕಿತ್ಸೆಗಾಗಿ ಸೊರಬ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಿಸಿಯ ಉರಿಯಿಂದ ಅಳತೊಡಗಿದ ಮಗು ಅಸ್ವಸ್ಥಗೊಂಡಿದೆ.

ಹೇಮಮ್ಮ ವಿರುದ್ಧ ದೂರು

ಮಗುವಿನ ಪೋಷಕ ಚಂದ್ರಪ್ಪ ಈ ಸಂಬಂಧ ಸೊರಬ ಪೊಲೀಸ್ ಠಾಣೆಗೆ ಅಂಗನವಾಡಿ ಸಹಾಯಕಿ ಹೇಮಮ್ಮ ವಿರುದ್ಧ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಈ ಸಂದರ್ಭದಲ್ಲಿ ಅಂಗನವಾಡಿ ಶಿಕ್ಷಕಿ ಸುನೀತಾ ಸಿಡಿಪಿಒ ಕಚೇರಿಯಲ್ಲಿ ಮೀಟಿಂಗ್ ಇದ್ದ ಕಾರಣ ಕರ್ತವ್ಯಕ್ಕೆ ಹಾಜರಿರಲಿಲ್ಲ ಎಂದು ತಿಳಿದು ಬಂದಿದೆ. ಮಾಹಿತಿ ತಿಳಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಸಿಬ್ಬಂದಿ ಸೊರಬ ಸಾರ್ವಜನಿಕ ಆಸ್ಪತ್ರೆಗೆ ದೌಡಾಯಿಸಿ ಮಗುವಿನ ಯೋಗಕ್ಷೇಮ ವಿಚಾರಿಸಿದರು.

ಜಗಳವಾಡುತ್ತಿದ್ದ ಮಕ್ಕಳನ್ನು ಬಿಡಿಸಿ ಸಂತೈಸಬೇಕಾಗಿದ್ದ ಅಂಗನವಾಡಿ ಸಹಾಯಕಿ ತಮ್ಮ ಮಗನಿಗೆ ಚಾಕು ಕಾಯಿಸಿ ಗಲ್ಲಕ್ಕೆ ಬರೆ ಎಳೆದಿದ್ದಾರೆ. ಇದರಿಂದ ಬೊಬ್ಬೆ ಬಂದಿದೆ. ಅವರ ವಿಕೃತಿ ವರ್ತನೆಯಿಂದ ಮಕ್ಕಳನ್ನು ಅಂಗನವಾಡಿ ಕೇಂದ್ರಗಳಿಗೆ ಕಳುಹಿಸಲು ಹೆದರಿಕೆಯಾಗುತ್ತಿದೆ. ಇನ್ನು ಮುಂದೆ ಜೀವ ಭಯದಿಂದಲೇ ಕಳುಹಿಸುವ ವಾತಾವರಣ ನಿರ್ಮಾಣವಾಗಿದೆ
-ಚಂದ್ರಪ್ಪ, ನಂದಿನಿ ಚಿಕ್ಕಸವಿ, ಮಗುವಿನ ಪೋಷಕರು


ಅಂಗನವಾಡಿ ಕೇಂದ್ರಗಳೆಂದರೆ ಮನೆಯ ವಾತಾವರಣ ಸೃಷ್ಟಿಸಬೇಕು. ಆದರೆ ಚಿಕ್ಕಸವಿ ಗ್ರಾಮದಲ್ಲಿ ಸಹಾಯಕಿಯಿಂದ ಮಗುವಿನ ಮೇಲೆ ಬರೆ ಎಳೆಯುವಂತಹ ದೌರ್ಜನ್ಯ ನಡೆದಿದೆ. ತಪ್ಪು ನಡೆದಿದೆ. ತಾಲೂಕಿನ ಯಾವ ಅಂಗನವಾಡಿ ಕೇಂದ್ರಗಳಲ್ಲೂ ಇಂಥಹ ಘಟನೆ ಸಂಭವಿಸಿಲ್ಲ. ಪೋಷಕರಿಂದ ಸೊರಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇಲಾಖೆಯಿಂದ ಸಹಾಯಕಿ ಹೇಮಮ್ಮ ಅವರನ್ನು ಅಮಾನತ್ತುಗೊಳಿಸಲು ಸಿಡಿಪಿಒಗೆ ಶಿಫಾರಸ್ಸು ಮಾಡಲಾಗಿದೆ
-ನೇತ್ರಾವತಿ, ಉಳವಿ ವಲಯ ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಕಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ