
ಬೆಂಗಳೂರು : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಬುಧವಾರ ತಂದೆ-ತಾಯಿಯನ್ನು ಚಾಕುವಿನಿಂದ ಇರಿದು ಹತ್ಯೆಗೈದಿದ್ದ ಆರೋಪಿ, ಪುತ್ರ ರೋಹನ್ ಚಂದ್ರ ಭಟ್‌ನನ್ನು ನ್ಯಾಯಾಲಯದ ನಿರ್ದೇಶನದ ಮೇರೆಗೆ ಪೊಲೀಸರು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆರೋಪಿ ಸ್ಕಿಜೋಫ್ರೇನಿಯಾ ಎಂಬ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವುದರಿಂದ ನಿಮ್ಹಾನ್ಸ್‌ಗೆ ದಾಖಲಿಸಲಾಗಿದೆ. ಪ್ರಕರಣದ ಸಂಬಂಧ ಪಕ್ಕದ ಮನೆಯ ನಿವಾಸಿಯಾದ ಮಾಧವಿ ನಾಯರ್ ಎಂಬುವರು ನೀಡಿದ ದೂರಿನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಸದ್ಯ ಹತ್ಯೆಯ ಉದ್ದೇಶ ಏನು ಎಂಬುದು ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಚ್‌ಎಎಲ್ ಠಾಣೆ ವ್ಯಾಪ್ತಿಯ ವಿಜ್ಞಾನ ನಗರ ನಿವಾಸಿಗಳಾದ ನವೀನ್ ಚಂದ್ರ ಭಟ್ (60) ಮತ್ತು ಶ್ಯಾಮಲಾ ಭಟ್ (55) ಅವರನ್ನು ಕೊಲೆ ಮಾಡಿದ ಆರೋಪದ ಮೇಲೆ ಪುತ್ರ ರೋಹನ್ ಚಂದ್ರ ಭಟ್ (32) ಎಂಬಾತನನ್ನು ಬುಧವಾರ ಎಚ್‌ಎಎಲ್ ಠಾಣೆ ಪೊಲೀಸರು ಬಂಧಿಸಿದ್ದರು. ಆರೋಪಿ ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು, ಕಳೆದ ಕೆಲ ವರ್ಷಗಳಿಂದ ಕೆಲಸವಿಲ್ಲದೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಬಂಧಿತ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಕೋರ್ಟ್‌ನ ನಿರ್ದೇಶನದ ಮೇರೆಗೆ ಆರೋಪಿಯನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮತ್ತೆ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾಧವಿ ನಾಯರ್ ಅವರು ನೀಡಿರುವ ದೂರಿನಲ್ಲಿ ‘ನಮ್ಮ ನೆರೆ ಮನೆಯ ನಿವಾಸಿಯೊಬ್ಬರು ಸಹಾಯಕ್ಕೆ ಕರೆದ ತಕ್ಷಣ ನವೀನ್ ಚಂದ್ರ ಭಟ್ ಅವರ ವಿಲ್ಲಾಗೆ ಬಂದು ನೋಡಿದ್ದಾಗ ಅವರು ತಮ್ಮ ಮನೆಯ ಗಾರ್ಡನ್‌ನಲ್ಲಿ ಗಾಯಗೊಂಡು ನೋವಿನಿಂದ ನರಳುತ್ತಿದ್ದರು. ಕೂಡಲೇ ಸೆಕ್ಯುರಿಟಿ ಗಾರ್ಡ್ ಸಹಾಯದಿಂದ ಇರಿತದಿಂದ ಗಾಯವಾಗಿದ್ದ ಅವರ ಬೆನ್ನಿಗೆ ಬಿಗಿಯಾಗಿ ಬಟ್ಟೆ ಕಟ್ಟಿದೆ. ನಂತರ ಸೆಕ್ಯುರಿಟಿ ಗಾರ್ಡ್‌ಗೆ ಆಂಬ್ಯುಲೆನ್ಸ್‌ಗೆ ಕರೆ ಮಾಡುವಂತೆ ತಿಳಿಸಿ ನಂತರ ಮನೆಯ ಬಾಗಿಲು ತೆರೆದು ನೋಡಿದಾಗ ಶ್ಯಾಮಲ ಅವರು ಮನೆಯ ನೆಲದ ಮೇಲೆ ಮಲಗಿದ್ದ ಸ್ಥಿತಿಯಲ್ಲಿ ಕಂಡು ಬಂದಿದ್ದರು.
ಆದರೆ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಕೂಡಲೇ ಸೆಕ್ಯುರಿಟಿ ಗಾರ್ಡ್ ಮತ್ತು ಗಾರ್ಡನರ್ ಸಹಾಯ ಪಡೆದು ಹೊರಗೆ ಕರೆದುಕೊಂಡು ಹೋಗಿ ಮಲಗಿಸಿ ಸಿ.ಪಿ.ಆರ್ ಮಾಡಿದೆ. ನಂತರ ಆಂಬ್ಯುಲೆನ್ಸ್‌ಗೆ ಕಾದರೆ ತಡವಾಗುತ್ತದೆ ಎಂದು ಸಮೀರ್ ಎಂಬುವರ ಕಾರಿನಲ್ಲಿ ದಂಪತಿಯನ್ನು ಕೂರಿಸಿಕೊಂಡು ಸಮೀಪದಲ್ಲಿದ್ದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಪರೀಕ್ಷಿಸಿದ ವೈದ್ಯರು ದಾರಿ ಮಧ್ಯದಲ್ಲಿಯೇ ಇಬ್ಬರು ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದರು. ಆಸ್ಪತ್ರೆಯ ವೈದ್ಯರು ಮೃತ ದೇಹಗಳನ್ನು ಪರಿಶೀಲಿಸಿದಾಗ ಶ್ಯಾಮಲ ಅವರ ಬೆನ್ನಿನ ಮೇಲೆ ಇರಿತದ ಗಾಯ ಹಾಗೂ ತರಚಿದ ಗಾಯ ಮತ್ತು ನವೀನ್ ಬೆನ್ನಿನ ಮೇಲೆ ಇರಿದ ಗಾಯಗಳು ಮತ್ತು ಬಲಗಣ್ಣಿನ ಬಳಿ, ಭುಜದ ಬಳಿ ಗಾಯಗಳಾಗಿರುವುದು ಕಂಡು ಬಂದಿದೆ.
ದಂಪತಿಯ ಪುತ್ರ ರೋಹನ್ ಅವರೇ ಈ ಕೃತ್ಯ ಎಸಗಿರುವುದು ತಿಳಿಯಿತು. ರೋಹನ್‌ಗೆ ಮಾನಸಿಕ ಕಾಯಿಲೆ ಇದ್ದು, ಆತ ಔಷಧಿ ತೆಗೆದುಕೊಳ್ಳುತ್ತಿರುವ ಬಗ್ಗೆ ಈ ಹಿಂದೆ ಅವರ ತಾಯಿಯಾದ ಶ್ಯಾಮಲ ನನಗೆ ಹೇಳಿದ್ದರು. ಕೃತ್ಯ ಎಸಗಿರುವ ರೋಷನ್ ವಿರುದ್ಧ ಕ್ರಮ ಕಾನೂನು ಕ್ರಮ ಜರುಗಿಸುವಂತೆ ಮಾಧವಿ ನಾಯರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ