
ಬೆಂಗಳೂರು[ಮಾ.04]: ಆಸ್ತಿ ವಿಚಾರಕ್ಕೆ ಹೆತ್ತ ತಾಯಿಯನ್ನೇ ಪುತ್ರನೊಬ್ಬ ಅಕ್ರಮ ಬಂಧನದಲ್ಲಿಟ್ಟು ಕಿರುಕುಳ ನೀಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಲಗ್ಗೆರೆಯ ಮುನೇಶ್ವರ ಬಡಾವಣೆ ನಿವಾಸಿ 80 ವರ್ಷದ ಮುನಿಯಮ್ಮ ಅಕ್ರಮ ಬಂಧನದಿಂದ ರಕ್ಷಣೆಗೊಳಗಾದವರು. ಈ ಸಂಬಂಧ ನಂದಿನಿ ಲೇಔಟ್ ಠಾಣೆಯಲ್ಲಿ ಸಂತ್ರಸ್ತೆ ಪುತ್ರ ವೆಂಕಟೇಶ್ ಗೌಡ, ಸೊಸೆ ಮಧುಮಾಲತಿ, ಮೊಮ್ಮಕ್ಕಳಾದ ಯಶಸ್ವಿನಿ, ತೇಜಸ್ವಿನಿ ಹಾಗೂ ರಾಮ ಮತ್ತು ಲಕ್ಷ್ಮಣ ಎಂಬುವರ ವಿರುದ್ಧ ನಂದಿನಿ ಲೇಔಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮುನಿಯಮ್ಮ ಅವರ ಪತಿ 8 ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ದಂಪತಿಗೆ ಐವರು ಪುತ್ರಿಯರು ಹಾಗೂ ಇಬ್ಬರು ಗಂಡು ಮಕ್ಕಳಿದ್ದು, ಎಲ್ಲರಿಗೂ ವಿವಾಹವಾಗಿದೆ. ಲಗ್ಗೆರೆಯಲ್ಲಿ ಮುನಿಯಮ್ಮ ಅವರಿಗೆ ಸೇರಿದ 4 ಅಂತಸ್ತಿನ ಕಟ್ಟಡ ಇದೆ. ಈ ಕಟ್ಟಡದಿಂದ ತಿಂಗಳಿಗೆ ಬರುವ .60 ಸಾವಿರ ಬಾಡಿಗೆಯನ್ನು ಮುನಿಯಮ್ಮ ಅವರೇ ತೆಗೆದುಕೊಳ್ಳುತ್ತಿದ್ದರು. ಮುನಿಯಮ್ಮ ಅವರ ಪತಿ ಬದುಕಿದ್ದಾಗಲೇ ಲಗ್ಗೆರೆಯ ಈ ಕಟ್ಟಡದ ಅರ್ಧ ಭಾಗವನ್ನು ಹಿರಿಯ ಪುತ್ರ ರೋಹಿತ್ ಹಾಗೂ ಪುತ್ರಿಯರ ಹೆಸರಿಗೆ ಬರೆದುಕೊಟ್ಟಿದ್ದರು. ಉಳಿದ ಕಟ್ಟಡದಲ್ಲಿರುವ ಮನೆಯಿಂದ ಬರುವ ಹಣದಲ್ಲಿ ಸಾಲದ ಮೊತ್ತ ತೀರಿಸುವಂತೆ ಹೇಳಿದ್ದರು.
ಮತ್ತೊಬ್ಬ ಪುತ್ರ ವೆಂಕಟೇಶ್‌ಗೆ ಹೆಸರಘಟ್ಟದ ತಿಮ್ಮೇನಪಾಳ್ಯದಲ್ಲಿರುವ ನಿವೇಶನ ಕೊಡಿಸಿದ್ದರು. ತಂದೆ ಮೃತಪಟ್ಟಬಳಿಕ ವೆಂಕಟೇಶ್ ತನ್ನ ಕುಟುಂಬದ ಜತೆ ಲಗ್ಗೆರೆ ಮನೆಗೆ ಬಂದು ನೆಲೆಸಿದ್ದ. ನಂತರ ಸಹೋದರ ರೋಹಿತ್ ಬಳಿ ಜಗಳ ಮಾಡಿ ಅವರ ಕುಟುಂಬವನ್ನು ಅಲ್ಲಿಂದ ಖಾಲಿ ಮಾಡಿಸಿದ್ದ. ಮನೆಯಲ್ಲಿದ್ದ ತಾಯಿ ಮುನಿಯಮ್ಮನನ್ನು ಆರೋಪಿ ತನ್ನ ಜತೆ ಇರಿಸಿಕೊಂಡಿದ್ದ. ಆಸ್ತಿ ವಿಚಾರದ ಪ್ರಕರಣ 2014ರಿಂದ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಈ ನಡುವೆ ವೆಂಕಟೇಶ್ ಗೌಡ ಐದು ತಿಂಗಳಿಂದ ತಾಯಿಯನ್ನು ತನ್ನ ಮನೆಯಲ್ಲಿಯೇ ಅಕ್ರಮವಾಗಿ ಕೂಡಿಟ್ಟಿದ್ದ. ಪುತ್ರಿಯರು ಹಾಗೂ ಸಂಬಂಧಿಕರ ಭೇಟಿಗೂ ಅವಕಾಶ ನೀಡಿರಲಿಲ್ಲ.
ಅಲ್ಲದೇ, ಪುತ್ರ ಸರಿಯಾದ ಸಮಯಕ್ಕೆ ಊಟ, ತಿಂಡಿ ನೀಡುತ್ತಿಲಿಲ್ಲ. ಕೋರ್ಟ್‌ಗೆ ಹೋಗಿ ಸಾಕ್ಷಿ ಹೇಳದಂತೆ ಒತ್ತಾಯಿಸಿ ಸೊಸೆ ಮಧುಮಾಲತಿ ಹಾಗೂ ಆಕೆಯ ಸಹೋದರರಾದ ರಾಮ ಮತ್ತು ಲಕ್ಷ್ಮಣ ಎಂಬುವರು ಬಾಯಿಗೆ ಬಟ್ಟೆತುರುಕಿ ಪೈಪ್‌ನಿಂದ ಹಲ್ಲೆ ಮಾಡಿದ್ದಾರೆ ಎಂದು ಸಂತ್ರಸ್ತೆ ವೃದ್ಧೆ ಮುನಿಯಮ್ಮ ಆರೋಪಿಸಿದ್ದಾರೆ.
ಫೆ.26ರಂದು ವೆಂಕಟೇಶ್ ಗೌಡ ಕೋರ್ಟ್‌ಗೆ ಹಾಜರಾದಾಗ ತನ್ನ ತಾಯಿ ಮನೆಯಲ್ಲಿ ಇಲ್ಲ ಎಂದು ಹೇಳಿಕೆ ನೀಡಿದ್ದ. ಬಳಿಕ ಫೆ.29ರಂದು ಮುನಿಯಮ್ಮ ಅವರ ಪುತ್ರಿಯರು ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮನೆಗೆ ಹೋಗಿ ಕೊಠಡಿ ಬಾಗಿಲು ತೆಗೆಸಿದಾಗ ಮುನಿಯಮ್ಮ ಅವರನ್ನು ಕೊಠಡಿಯಲ್ಲಿ ಕೂಡಿಹಾಕಿರುವುದು ಬೆಳಕಿಗೆ ಬಂದಿದೆ.
ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ನಂದಿನಿ ಲೇಔಟ್ ಇನ್‌ಸ್ಪೆಕ್ಟರ್ ರೋಹಿತ್ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿದಾಗ ನಿತ್ಯ ಇಂತಹ ನೂರು ಪ್ರಕರಣಗಳು ಬರುತ್ತವೆ. ಆ ಪ್ರಕರಣದ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಪ್ರತಿಕ್ರಿಯಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ