* ಲೈಂಗಿಕ ದೌರ್ಜನ್ಯ ಆರೋಪ; ಪತಿ ವಿರುದ್ಧ ಹೆಚ್ಚಿನ ತನಿಖೆಗೆ ಆದೇಶ
* ಅಸ್ವಾಭಾವಿಕ ಲೈಂಗಿಕತೆಗೆ ಒತ್ತಾಯಿಸಿ ಅಶ್ಲೀಲ ಫೋಟೋ ತೆಗೆದಿದ್ದ ಟೆಕ್ಕಿ
* 2019ರಲ್ಲಿ ವಿವೇಕನಗರ ಠಾಣಾ ಪೊಲೀಸರು ನಡೆಸಿದ ತನಿಖೆ ಕಳಪೆಯಾಗಿದೆ
ಬೆಂಗಳೂರು(ಜೂ.01): ಪತ್ನಿಯನ್ನು ಅಸ್ವಾಭಾವಿಕ ಲೈಂಗಿಕತೆಗೆ ಒತ್ತಾಯಿಸಿದಲ್ಲದೆ, ಅಶ್ಲೀಲ ಪೋಟೋ ತೆಗೆದು ಆಕೆಯ ತಂದೆ ಮತ್ತು ಸ್ನೇಹಿತರಿಗೆ ಕಳುಹಿಸುವ ಮೂಲಕ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ನಗರದ ಸಾಫ್ಟ್‌ವೇರ್ ಉದ್ಯೋಗಿ ವಿರುದ್ಧ ಹೆಚ್ಚಿನ ತನಿಖೆ ನಡೆಸಲು ಹೈಕೋರ್ಟ್ ಆದೇಶಿಸಿದೆ. ಪ್ರಕರಣ ಕುರಿತು ಪೊಲೀಸರು ಸಮರ್ಪಕ ತನಿಖೆ ನಡೆಸಿಲ್ಲ ಎಂದು ಆಕ್ಷೇಪಿಸಿ ಸಂತ್ರಸ್ತೆ ಮಹಿಳೆ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನಾಯಮೂರ್ತಿ ಎಂ.ನಾಗಪ್ರಸನ್ನ ಅವರ ನ್ಯಾಯಪೀಠ ಈ ಆದೇಶ ಮಾಡಿದೆ.
ಪ್ರಕರಣದಲ್ಲಿ 2019ರಲ್ಲಿ ವಿವೇಕನಗರ ಠಾಣಾ ಪೊಲೀಸರು ನಡೆಸಿದ ತನಿಖೆ ಕಳಪೆಯಾಗಿದೆ. ದೂರಿನಲ್ಲಿರುವ ಅಂಶಗಳ ಬಗ್ಗೆ ತನಿಖಾಧಿಕಾರಿಗಳು ಹೆಚ್ಚಿನ ವಿವರ ಸಂಗ್ರಹಿಸಿಲ್ಲ. ಮಹಿಳೆಯ ತಂದೆಯಿಂದ ವಶಪಡಿಸಿಕೊಂಡು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾದ ಮೊಬೈಲ್ ಫೋನ್‌ನಲ್ಲಿರುವ ವಿಷಯಗಳ ಬಗ್ಗೆ ಆರೋಪ ಪಟ್ಟಿಯಲ್ಲಿ ಉಲ್ಲೇಖಸಿಲ್ಲ. ಅಲ್ಲದೆ, ಪತಿಯ ಸೆಲ್‌ಫೋನ್ ವಶಪಡಿಸಿಕೊಂಡು ತನಿಖೆ ನಡೆಸಿಲ್ಲ. ಪ್ರಕರಣದಲ್ಲಿ ಐಪಿಸಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿಯ ಶಿಕ್ಷಾರ್ಹ ಅಪಾದನೆಗಳನ್ನು ಕೈಬಿಡಲಾಗಿದೆ. ಹಾಗಾಗಿ, ಹೆಚ್ಚಿನ ತನಿಖೆ ನಡೆಸಬೇಕು ಹಾಗೂ ಬೇರೊಬ್ಬ ತನಿಖಾಧಿಕಾರಿಯನ್ನು ನೇಮಿಸಬೇಕಾಗುತ್ತದೆ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ. ಜತೆಗೆ, ಕಳಪೆ ತನಿಖೆ ಮಾಡುವಂತಹ ಅಧಿಕಾರಿಗಳ ವಿರುದ್ಧ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಅಥವಾ ನಗರಪೊಲೀಸ್ ಆಯುಕ್ತರು ಕ್ರಮ ಜರುಗಿಸಬೇಕು ಎಂದು ನ್ಯಾಯಪೀಠ ನುಡಿದಿದೆ.
Bengaluru: ಮನೆಯಲ್ಲಿ ಯಾರೂ ಇಲ್ಲದಾಗ ಮಹಿಳಾ ಟೆಕ್ಕಿ ಆತ್ಮಹತ್ಯೆ: ಕಾರಣ ನಿಗೂಢ..?
ಪ್ರಕರಣದ ವಿವರ:
ಛತ್ತೀಸ್‌ಗಢ ಮೂಲದ ಮಹಿಳೆ ಮತ್ತು ಬೆಂಗಳೂರು ನಿವಾಸಿಯಾದ ವ್ಯಕ್ತಿ 2013ರಲ್ಲಿ ಮುಂಬೈನ ಐಐಟಿಯಲ್ಲಿ ಪಿಎಚ್‌ಡಿ ಕೋರ್ಸ್ ಮಾಡುತ್ತಿದ್ದರು. ಈ ವೇಳೆ ಪರಸ್ಪರ ಪ್ರೀತಿಸಿ 2015ರಲ್ಲಿ ವಿವಾಹವಾಗಿದ್ದರು. 2016ರಲ್ಲಿ ಪತಿಯು ತನ್ನನ್ನು ನಿಂದಿಸುತ್ತಾನೆ ಮತ್ತು ಅಸ್ವಾಭಾವಿಕ ಲೈಂಗಿಕತೆಗೆ ಒತ್ತಾಯಿಸುತ್ತಾನೆಂದು ಆರೋಪಿಸಿದ್ದ ಪತ್ನಿ ತವರು ಮನೆ ಸೇರಿದ್ದಳು. ನಂತರ ಪತಿಯು ಪತ್ನಿಯ ಕೆಲ ಅಶ್ಲೀಲ ಚಿತ್ರಗಳನ್ನು ಆಕೆಯ ತಂದೆ ಮತ್ತು ಕೆಲ ಸ್ನೇಹಿತರಿಗೆ ಕಳುಹಿಸಿದ್ದರು. ಈ ಕುರಿತು ಛತ್ತೀಸ್‌ಗಢ ಪೊಲೀಸರಿಗೆ ಪತ್ನಿ ದೂರು ನೀಡಿದ್ದರು. ಪತಿ ಬೆಂಗಳೂರಿನಲ್ಲಿ ನೆಲೆಸಿದ್ದ ಕಾರಣ ತನಿಖೆಯನ್ನು ವಿವೇಕನಗರ ಪೊಲೀಸರಿಗೆ ವರ್ಗಾಯಿಸಲಾಗಿತ್ತು.