Shivamogga Crime News: ಶಿವಮೊಗ್ಗದ ಕುಖ್ಯಾತ ರೌಡಿ ಶೀಟರ್ ಹಂದಿ ಅಣ್ಣಿಯನ್ನು ಕಳೆದ ವಾರ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಇದಾಗಿ ವಾರ ಕಳೆಯುವ ಮುನ್ನವೇ ಹಂದಿ ಅಣ್ಣಿ ಸಹಚರನ ಹತ್ಯೆಗೆ ವಿಫಲ ಯತ್ನ ನಡೆದಿದೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ: ಕಳೆದ ವಾರ ನಟೋರಿಯಸ್ ರೌಡಿ ಶೀಟರ್ ಹಂದಿ ಅಣ್ಣಿಯನ್ನು ಹಾಡಹಗಲೇ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಶಿವಮೊಗ್ಗ ಜನತೆ ಈ ಭೀಕರ ದೃಶ್ಯವನ್ನು ಇನ್ನೂ ಮರೆತೇ ಇಲ್ಲ, ಅಷ್ಟರೊಳಗಾಗಲೇ ಹಂದಿ ಅಣ್ಣಿಯ ಸಹಚರನೊಬ್ಬನನ್ನು ಕೊಲ್ಲಲು ವಿಫಲ ಯತ್ನವೊಂದು ನಡೆದಿದೆ. ಈ ಮೂಲಕ ಬೆಂಕಿ ಮುಚ್ಚಿದ ಕೆಂಡದಂತಿದ್ದ ಶಿವಮೊಗ್ಗ ಭೂಗತ ಲೋಕ ಅಧಿಪತ್ಯವನ್ನು ಕೈಸೆರೆ ಮಾಡಿಕೊಳ್ಳಲು ಗ್ಯಾಂಗ್ ವಾರ್ ಆರಂಭವಾಗಿದೆ. ಕೆಲ ವರ್ಷಗಳಿಂದ ನೆಮ್ಮದಿಯಾಗಿದ್ದ ಜನ, ಈಗ ಮತ್ತೆ ಭಯದತ್ತ ಜಾರುತ್ತಿದ್ದಾರೆ. ಮಲೆನಾಡಿನ ಕಣಿವೆಗಳಲ್ಲಿ ತಣ್ಣಗೆ ಹರಿಯುತ್ತಿರುವ ತೊರೆಯಂತಿದ್ದ ಅಂಡರ್‌ವಲ್ಡ್ ಮತ್ತೆ ಮುನ್ನಲೆಗೆ ಬಂದಿದೆ. ಹಂದಿ ಅಣ್ಣಿ ಸಾವಿನ ಬಳಿಕ ಶಿವಮೊಗ್ಗ ಭೂಗತ ಲೋಕದ ಅಧಿಪತ್ಯಕ್ಕಾಗಿ ಸಣ್ಣಪುಟ್ಟ ಗ್ಯಾಂಗ್‌ಗಳು ಕೆಲಸ ಆರಂಭಿಸಿರುವುದಂತೂ ಈ ಘಟನೆಯಿಂದ ಸ್ಪಷ್ಟವಾಗುತ್ತಿದೆ. ರೌಡಿಶೀಟರ್ ಅನಿಲ ಅಲಿಯಾಸ್ ಅಂಬುವನ್ನು ಕೊಲೆ ಮಾಡಲು ಸಂಚು ರೂಪಿಸಲಾಗಿದ್ದು, ವಿಫಲವಾಗಿದೆ. ಶಿವಮೊಗ್ಗ ಪೊಲೀಸರಿಗೆ ಹತ್ಯೆ ಮಾಡುವ ಬಗ್ಗೆ ಮುಂಚೆಯೇ ಮಾಹಿತಿ ಸಿಕ್ಕ ಹಿನ್ನೆಲೆ, ಅಂಬು ಕೊಲೆಗೆ ಸ್ಕೆಚ್ ಹಾಕಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಅನಿಲ್ ಅಲಿಯಾಸ್ ಅಂಬು ಹಂದಿ ಅಣ್ಣಿಯ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿದ್ದವನು. ಹಂದಿ ಅಣ್ಣಿಯ ಕೊಲೆಯ ನಂತರ ಅಂಬುವನ್ನು ಕೊಲೆ ಮಾಡಲು ಸಂಚು ರೂಪಿಸಲಾಗಿತ್ತು. ಈ ಮೂಲಕ ದಶಕದಿಂದ ಶಿವಮೊಗ್ಗ ಆಳುತ್ತಿರುವ ಹಂದಿ ಅಣ್ಣಿ ಸಾಮ್ರಾಜ್ಯವನ್ನು ಸಂಪೂರ್ಣವಾಗಿ ಕಿತ್ತುಹಾಕಲು ಸಿದ್ಧತೆ ನಡೆಯುತ್ತಿದೆ ಎನ್ನಲಾಗಿದೆ. ಬಂಕ್ ಬಾಲು ಕೊಲೆ ಪ್ರಕರಣದಲ್ಲಿ ಅಂಬು ಪ್ರಮುಖ ಆರೋಪಿ. ಕೊಲೆ ಮಾಡಲು ಮುಂದಾಗಿದ್ದ ಚಂದನ್, ಕಿರಣ್ ವಿಘ್ನೇಶ್ ಎಂಬುವವರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಕಿರಣ್ ಅಲಿಯಾಸ್ ಕುಟ್ಟಿ ಮತ್ತು ವಿಘ್ನೇಶ್ ಅಲಿಯಾಸ್ ಜಿಂಕೆ ಬಂಧನಕ್ಕೊಳಗಾದರೆ, ಮೂರನೇ ಆರೋಪಿ ಚಂದನ್ ತಲೆಮರೆಸಿಕೊಂಡಿದ್ದಾನೆ.
ಬುದ್ದನಗರದ ವಿಘ್ನೇಶ್ ಅಲಿಯಾಸ್ ಜಿಂಕೆಯ ಮನೆಯ ಮೇಲೆ ಇನ್ಸ್‌ಪೆಕ್ಟರ್ ರವಿಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಶಿವಮೊಗ್ಗದ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಂದೇ ಹಂದಿ ಅಣ್ಣಿ ಸಹಚರ ಅಂಬು ಮೇಲೆ ದಾಳಿ ಮಾಡಲು ಆರೋಪಿಗಳು ಸಂಚು ರೂಪಿಸಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು ಎನ್ನಲಾಗಿದೆ. ಮೂರನೇ ಆರೋಪಿ ಚಂದನ್ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದೆ.
ಹಂದಿ ಅಣ್ಣಿ ಬರ್ಬರ ಕೊಲೆ:
ಅದೊಂದು ಕಾಲದಲ್ಲಿ ಇಡೀ ಶಿವಮೊಗ್ಗವನ್ನು ನಡುಗಿಸಿದ್ದ ಲವ - ಕುಶ ಇಬ್ಬರನ್ನೂ ಹತ್ಯೆ ಮಾಡಿ ಶಿವಮೊಗ್ಗ ಭೂಗತ ಲೋಕಕ್ಕೆ ನಾನೇ ಅಧಿಪತಿ ಎಂದು ಸಂದೇಶ ರವಾನಿಸಿದ್ದ ಹಂದಿ ಅಣ್ಣಿ ಕಳೆದ ವಾರ ಬರ್ಬರವಾಗಿ ಕೊಲೆಯಾಗಿದ್ದ. ಇನೋವಾ ಕಾರಿನಲ್ಲಿ ಬಂದ ನಾಲ್ಕಕ್ಕೂ ಹೆಚ್ಚು ಆರೋಪಿಗಳು ಹಂದಿ ಅಣ್ಣಿಯನ್ನು ಅಟ್ಟಾಡಿಸಿ ಲಾಂಗಿನಿಂದ ಕೊಚ್ಚಿ ಕೊಲೆ ಮಾಡಿದ್ದರು. ಹಂದಿ ಅಣ್ಣಿ ತಲೆಗೆ ಗಂಭೀರ ಗಾಯವಾಗಿದ್ದು ಸ್ಥಳದಲ್ಲೇ ಮೃತಪಟ್ಟಿದ್ದ. ಹಂದಿ ಅಣ್ಣಿ ಬೈಕಿನಲ್ಲಿ ಹೋಗುತ್ತಿದ್ದಾಗ ಕಾರಿನಲ್ಲಿ ಅಡ್ಡಗಟ್ಟಿ ಹತ್ಯೆಮಾಡಲಾಗಿತ್ತು. ಹಂದಿ ಅಣ್ಣಿ ಮೇಲೆ ಎಂಟು ಕೊಲೆ ಆರೋಪವಿತ್ತು. ಅದರಲ್ಲಿ ಪ್ರಮುಖವಾದವು ಎಂದರೆ ಲವ-ಕುಶ ಸಹೋದರರ ಹತ್ಯೆ. ಈ ಹತ್ಯೆಯ ಮೂಲಕ ಇಡೀ ರಾಜ್ಯದಲ್ಲಿ ಹಂದಿ ಅಣ್ಣಿ ಹೆಸರು ಚಾಲ್ತಿಗೆ ಬಂದಿತ್ತು. ಕೊಲೆ ಮಾಡಿದ ನಂತರ ಪತ್ರಕರ್ತ ರವಿ ಬೆಳೆಗೆರೆ ಕಚೇರಿಗೆ ತೆರಳಿ ನಂತರ ಪೊಲೀಸರಿಗೆ ಶರಣಾಗಿದ್ದ ಹಂದಿ ಅಣ್ಣಿ. ನಂತರ ಆತನಿಗೆ ಜಾಮೀನು ಸಿಕ್ಕ ಬಳಿಕ ಶಿವಮೊಗ್ಗದಲ್ಲಿ ಹಫ್ತಾ ವಸೂಲಿ ಮಾಡಿಕೊಂಡು ಜನರನ್ನು ಬೆದರಿಸಿಕೊಂಡು ಕಾಲ ಕಳೆಯುತ್ತಿದ್ದ. ಹಂದಿ ಅಣ್ಣಿ ಅಂದರೆ ಶಿವಮೊಗ್ಗದ ಜನ ಭಯ ಪಡುತ್ತಿದ್ದರು.
ಇದನ್ನೂ ಓದಿ: ಲವ - ಕುಶರನ್ನು ಹತ್ಯೆ ಮಾಡಿದ್ದ ಹಂದಿ ಅಣ್ಣಿ ಬರ್ಬರ ಕೊಲೆ ಮತ್ತು ಮುನ್ನೆಲೆಗೆ ಬಂದ ಶಿವಮೊಗ್ಗ ಭೂಗತಲೋಕ
ಯಾರು ಈ ಲವ-ಕುಶ?:
ಶಿವಮೊಗ್ಗ ಜಿಲ್ಲೆಯಷ್ಟೇ ಅಲ್ಲ ಇಡೀ ಮಲೆನಾಡಿನ ತುಂಬ ಭಯದ ವಾತಾವರಣ ಹುಟ್ಟಿಸಿ ರಾಜಾರೋಷವಾಗಿ ಮೆರೆಯುತ್ತಿದ್ದ ಅಣ್ಣ - ತಮ್ಮ ಜೋಡಿ ಲವ-ಕುಶ. 2000ದ ದಶಕದ ಆರಂಭದಲ್ಲಿ ಲವ-ಕುಶ ಹೆಸರು ಕೇಳಿದರೆ ಜನ ಭಯಗೊಳ್ಳುತ್ತಿದ್ದರು. ಶಿವಮೊಗ್ಗ ಜನರ ನೆಮ್ಮದಿಯನ್ನು ಸಂಪೂರ್ಣವಾಗಿ ಕಿತ್ತುಕೊಂಡ ಭಯದಲ್ಲೇ ಬದುಕುವಂತೆ ಮಾಡಿತ್ತು ಈ ಇಬ್ಬರ ಕ್ರೌರ್ಯ. ಆದರೆ 2006ರಲ್ಲಿ ಅಖಾಡಕ್ಕೆ ಇನ್ನೊಬ್ಬನ ಎಂಟ್ರಿಯಾಗಿತ್ತು. ಅವನೇ ಇಂದು ಕೊಲೆಯಾದ ಹಂದಿ ಅಣ್ಣಿ. ಲವ-ಮತ್ತು ಕುಶ ಇಬ್ಬರನ್ನೂ ದಾರುಣವಾಗಿ ಹಾಡಹಗಲೇ ಹಂದಿ ಅಣ್ಣಿ ಗ್ಯಾಂಗ್ ಕೊಚ್ಚಿ ಕೊಲೆ ಮಾಡಿತ್ತು. ಆ ಸಮಯದಲ್ಲಿ ಶಿವಮೊಗ್ಗದ ಜನ ಹಂದಿ ಅಣ್ಣಿಗೆ ಧನ್ಯವಾದ ಅರ್ಪಿಸಿದ್ದರು. ಯಾಕೆಂದರೆ ಶಿವಮೊಗ್ಗ ಜಿಲ್ಲೆಯ ನೆಮ್ಮದಿ ಕಸಿದುಕೊಂಡಿದ್ದ ನಟೋರಿಯಸ್‌ಗಳು ಬೀದಿ ಹೆಣವಾಗಿದ್ದರು.