
ಕಾರವಾರ, ಉತ್ತರಕನ್ನಡ (ಡಿ.12): ತಾನು ಕೆಲಸ ಮಾಡುತ್ತಿದ್ದ ಮಾಲೀಕರ ಮನೆಯಿಂದಲೇ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಶಿರಸಿ ನಗರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಆರೆಂಟು ತಿಂಗಳುಗಳಿಂದ ಶಾಂತಾರಾಮ ಕಿಣಿ ಎಂಬುವವರ ಮನೆಯಲ್ಲಿ ಕೆಲಸಕ್ಕಿದ್ದ ಶಿರಸಿ, ರಾಮನಬೈಲು ನಿವಾಸಿ ಮಹೇಶ್ ಪರಸಪ್ಪ ಭೋವಿ (32) ಎಂಬಾತನೇ ಬಂಧಿತ ಆರೋಪಿ.
ಶಿರಸಿ ಮಾರಿಕಾಂಬಾ ನಗರದಲ್ಲಿರುವ ಶಾಂತಾರಾಮ ಕಿಣಿ ಅವರ ಮನೆಯಲ್ಲಿ ಈ ಕಳ್ಳತನ ಕೃತ್ಯ ನಡೆದಿತ್ತು. ನಂಬಿಕೆ ಇಟ್ಟು ಕೆಲಸಕ್ಕೆ ಇಟ್ಟುಕೊಂಡಿದ್ದ ಮನೆ ಮಾಲೀಕ. ಆದರೆ ಆರೋಪಿ ಮಹೇಶ್, ಮನೆಯ ಒಂದು ಕೀಯನ್ನು ಕದ್ದು ಅದರ ನಕಲಿ ಕೀ (duplicate key) ಮಾಡಿಸಿಕೊಂಡು ಕಳ್ಳತನಕ್ಕೆ ಸಂಚು ರೂಪಿಸಿದ್ದ. ಕಳೆದ ಭಾನುವಾರ ಶಾಂತಾರಾಮ ಕಿಣಿ ಅವರ ಕುಟುಂಬ ಗೋವಾಕ್ಕೆ ತೆರಳಿದ್ದ ವೇಳೆ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭವನ್ನು ಬಳಸಿಕೊಂಡು ಆರೋಪಿ ಮಹೇಶ್ ಕಳ್ಳತನ ಮಾಡಿದ್ದಾನೆ. ಮನೆಯಲ್ಲಿದ್ದ ಸುಮಾರು 16 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 90 ಸಾವಿರ ರೂಪಾಯಿ ನಗದು ಕದ್ದು ಪರಾರಿಯಾಗಿದ್ದನು.
ಘಟನೆ ನಡೆದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಮನೆಯ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಮನೆ ಕೆಲಸದವನೇ ಕೃತ್ಯ ನಡೆಸಿರುವುದು ಗೊತ್ತಾಗಿದೆ.ಬಳಿಕ ಆರೋಪಿಯ ಚಲನವಲನಗಳ ಆಧಾರದ ಮೇಲೆ ಆರೋಪಿಯನ್ನ ಪತ್ತೆ ಹಚ್ಚಿ ಬಂಧಿಸಿದ್ದಾರೆ. ಬಂಧಿತನಿಂದ 60 ಗ್ರಾಂ ಬಂಗಾರ ಹಾಗೂ 70 ಸಾವಿರ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಶಿರಸಿ ನಗರ ಠಾಣೆಯ ಪಿ.ಎಸ್.ಐ. ನಾರಾಯಣ ರಾಥೋಡ ಮತ್ತು ಸಿಬ್ಬಂದಿ ಈ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ. ಪ್ರಕರಣದ ಕುರಿತು ಪೊಲೀಸ್ ತನಿಖೆ ಮುಂದುವರಿದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ