
ಲಕ್ನೋ (ಜೂನ್ 25): ಅವರಿಬ್ಬರೂ ಪ್ರೇಮಿಗಳು. ಬಾಲಿವುಡ್‌ನ "ಸಿರ್ಫ್ ತುಮ್' (Sirf Tum Movie) ಚಿತ್ರದಿಂದ ಪ್ರೇರಣೆ ಪಡೆದುಕೊಂಡಿದ್ದವರು. ಆ ಚಿತ್ರದಲ್ಲಿ ಹೀರೋ ಹಾಗೂ ಹೀರೋಯಿನ್, ತಾವಿಬ್ಬರು ಯಾವಾಗ ಮೊದಲು ಭೇಟಿಯಾಗುತ್ತೇವೋ ಅಂದೇ ಇಬ್ಬರ ಮುಖ ನೋಡಿಕೊಳ್ಳುತ್ತೇವೆ ಎಂದು ವಾಗ್ದಾನ ಮಾಡಿರುತ್ತಾರೆ. ಕೊನೆಗೆ ಸಾಕಷ್ಟು ಕಷ್ಟಗಳನ್ನು ಎದುರಿಸಿ ತಮ್ಮ ಮಾತನ್ನು ಪೂರೈಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಈ ಚಿತ್ರದಿಂದ ಸ್ಫೂರ್ತಿ ತೆಗೆದುಕೊಂಡ ಉತ್ತರ ಪ್ರದೇಶದ ಇಬ್ಬರು ಪ್ರೇಮಿಗಳು, ಮೊದಲ ಭೇಟಿಯಲ್ಲಿಯೇ ಪರಸ್ಪರ ಮುಖ ನೋಡಿಕೊಳ್ಳುವ ಭಾಷೆ ಮಾಡಿರುತ್ತಾರೆ. ಆದರೆ, ವಿಧಿಯಾಟ ಬೇರೆಯಾಗಿತ್ತು.
ಉತ್ತರ ಪ್ರದೇಶದ (Uttar Pradesh) ಬರೇಲಿ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿನಿಯೊಬ್ಬಳು, ಬ್ಯಾಂಕ್ ನಲ್ಲಿ ಕೆಲಸ ಮಾಡುವ ಸಂಚಿತ್ ಅರೋರಾ (Sanchit Arora) ಎನ್ನುವ ಯುವಕನನ್ನು ಇಷ್ಟಪಡುತ್ತಿದ್ದಳು. ಈ ಪ್ರೀತಿಯ ವಿಚಾರ ಮನೆಯವರಿಗೆ ಯಾರಿಗೂ ತಿಳಿದಿರಲಿಲ್ಲ. ಇಬ್ಬರೂ ಫೋನ್ ನಲ್ಲಿ ಗಂಟೆಗಟ್ಟಲೆ ಮಾತನಾಡಿಕೊಳ್ಳುತ್ತಿದ್ದರು. ಮೊದಲ ಬಾರಿಗೆ ಮೀಟ್ ಆಗುವವರೆಗೂ ವಿಡಿಯೋ ಕಾಲ್ ಆಗಲಿ, ಫೋಟೋ ಆಗಲಿ ಕಳಿಸುವಂತಿಲ್ಲ ಎನ್ನುವುದು ಇವರಿಬ್ಬರ ನಡುವಿನ ವಾಗ್ದಾನವಾಗಿತ್ತು. ಎಂದಿನಂತೆ ಗುರುವಾರ ವ್ಯಾಟ್ಸ್ ಆಪ್ ನಲ್ಲಿ ಚಾಟ್ ಮಾಡುವ ವೇಳೆ ಹುಡುಗಿಗೆ ಫೋಟೋ ಕಳಿಸುವಂತೆ ಪರಿ ಪರಿಯಾಗಿ ಬೇಡಿದ್ದಾನೆ. ಆದರೆ, ಕೊಟ್ಟ ಮಾತಿಗೆ ಕಟ್ಟುಬಿದ್ದ ಗೆಳತಿ ಫೋಟೋ ನೀಡಲು ನಿರಾಕರಿಸಿದ್ದಾಳೆ.
ಪ್ರೇಮಿ ಪದೇ ಪದೇ ಒತ್ತಾಯಿಸಿದರೂ ಗೆಳತಿ ತನ್ನ ಫೋಟೋ ಕಳುಹಿಸಿರಲಿಲ್ಲ ವಿಡಿಯೋ ಕಾಲ್‌ನಲ್ಲಿಯೂ ಮಾತನಾಡುವಂತೆ ಪ್ರೇಮಿ ಕೇಳಿದ್ದಾನೆ. ಇದಕ್ಕೂ ಗೆಳತಿ ನಿರಾಕರಿಸಿದ್ದು ಪ್ರಿಯಕರನ ಕೋಪಕ್ಕೆ ಕಾರಣವಾಗಿದೆ. ಬಳಿಕ ಫೋನ್ ಮಾಡಿದ ಆತ, ನೀನು ಫೋಟೋ ಕಳಿಸದೇ ಇದ್ದಲ್ಲಿ, ರೈಲಿಗೆ ತಲೆ ಕೊಟ್ಟು ಖಂಡಿತಾ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿ ಫೋನ್ ಕಟ್ ಮಾಡಿದ್ದಾನೆ. ಇದರ ಬೆನ್ನಲ್ಲಿಯೇ ಗೆಳತಿ ನಿರಂತರವಾಗಿ ಹುಡುಗನಿಗೆ ಕರೆ ಮಾಡಿದ್ದಾಳೆ. ಆದರೆ, ಸಿಟ್ಟಿನಲ್ಲಿದ್ದ ಆತ, ಫೋನ್ ಸ್ವೀಕರಿಸಿರಲಿಲ್ಲ. ಅಂದಾಜು 40 ಬಾರಿ ಹುಡುಗಿ ಕರೆ ಮಾಡಿದ್ದಾಳೆ. ಆದರೆ, ಪ್ರೇಮಿ ಒಮ್ಮೆಯೂ ಆಕೆಯ ಫೋನ್ ಸ್ವೀಕರಿಸಿರಲಿಲ್ಲ.
ಮೊದಲೇ ಸಿಟ್ಟಿನ ಆಸಾಮಿ, ನಿಜವಾಗಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಎಂದು ಆಕೆ ಭಾವಿಸಿದ್ದಾಳೆ. ಇದರಿಂದ ಭಯಗೊಂಡ ಗೆಳತಿ ಕೂಡ ರಾತ್ರಿ ಮನೆಯಲ್ಲಿ ಎಲ್ಲರೂ ಮಲಗಿದ್ದ ವೇಳೆ ವಿಷಕಾರಿ ಪದಾರ್ಥವನ್ನು ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಳು.
ಹೊಟ್ಟೆ ಕೊಯ್ದು ಹಾಗೆ ಬಿಟ್ಟ ವೈದ್ಯ, ದಾವಣಗೆರೆ ಡಾಕ್ಟರ್ ಯಡವಟ್ಟಿಗೆ ವೃದ್ಧೆ ನರಳಾಟ
ರಾತ್ರಿಯ ವೇಳೆ ಆಕೆಯ ಸ್ಥಿತಿ ಹದಗೆಟ್ಟಾಗ ಮನೆಯವರು ಆಸ್ಪತ್ರೆಗೆ ಕರೆದೊಯ್ದರು. ಆದರೆ ಸಮಯ ಕಳೆದ ಹಾಗೆ ಆಕೆಯ ಆರೋಗ್ಯ ಕೂಡ ಹದಗೆಟ್ಟಿದ್ದರಿಂದ ಶುಕ್ರವಾರ ಚಿಕಿತ್ಸೆ ವೇಳೆ ಹುಡುಗಿ ಮೃತಪಟ್ಟಿದ್ದಾಳೆ. ಈ ವೇಳೆ ಪ್ರಿಯಕರನಿಗೆ ಪ್ರೇಯಸಿ ವಿಷ ಸೇವಿಸಿರುವ ಬಗ್ಗೆಯೂ ಮಾಹಿತಿ ಸಿಕ್ಕಿದೆ. ನಿನಗೇನಾದರೂ ಆಯಿತೆಂದರೆ ನಿನ್ನ ಕುಟುಂಬದವರನ್ನು ಸಾಯಿಸುತ್ತೇನೆ ಎಂದೂ ಆತ ಸಂದೇಶ ಕಳುಹಿಸಿದ್ದ.
ಡೇ ಟೈಂನಲ್ಲಿ ಸ್ಕೆಚ್ ಹಾಕಿ ರಾತ್ರಿ ಹೊತ್ತಲ್ಲಿ ಬೈಕ್ ಕ್ಯಾಚ್, ಬೆಂಗ್ಳೂರಲ್ಲಿ ಗ್ಯಾಂಗ್ ಆಕ್ಟೀವ್
ಆರೋಪಿಯ ಶೋಧಕ್ಕಿಳಿದ ಪೊಲೀಸ್: ಬ್ಯಾಂಕ್ ಉದ್ಯೋಗಿ ಸಂಚಿತ್ ಅರೋರಾ ಅವರ ಪ್ರಚೋದನೆ ಮತ್ತು ಒತ್ತಡದಿಂದ ಹುಡುಗಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೇಪಿಸಲಾಗಿದೆ ಎಂದು ಆರೋಪಿಸಿದ್ದಾರೆ. ಬಾಲಕಿಯ ಅಂತಿಮ ಸಂಸ್ಕಾರದ ಬಳಿಕ ಸಂಬಂಧಿಕರ ದೂರಿನ ಮೇರೆಗೆ ಪೊಲೀಸರು ನೋವು ತೋಡಿಕೊಂಡಿದ್ದಾರೆ. ಸದ್ಯ ಗೆಳೆಯ ಸಂಚಿತ್ ಅರೋರಾ ಸ್ಥಳದಿಂದ ತಲೆಮರೆಸಿಕೊಂಡಿದ್ದಾನೆ. ಆರೋಪಿ ಪ್ರಿಯಕರನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಸಿರ್ಫ್ ತುಮ್ ತಮಿಳಿನ ಕಾದಲ್ ಕೊಟ್ಟೈ ಚಿತ್ರದ ರಿಮೇಕ್. ಕನ್ನಡದಲ್ಲಿ ರವಿಚಂದ್ರನ್ ನಟನೆಯಲ್ಲಿ ಯಾರೆ ನೀನು ಚೆಲುವೆ ಎನ್ನುವ ಹೆಸರಿನಲ್ಲಿ ಬಿಡುಗಡೆಯಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ