ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ
ಬೆಂಗಳೂರು(ಅ.29): ಹಿಡಿಯಲು ಬಂದ ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್ ಸೇರಿ ಮೂವರು ಕಾನ್‌ಸ್ಪೇಬಲ್‌ಗಳ ಮೇಲೆ ರೌಡಿ ಶೀಟರ್ ಪೆಪ್ಪರ್ ಸ್ಪ್ರೇ ಹಾಕಿ ಡ್ರ್ಯಾಗರ್‌ನಿಂದ ಹಲ್ಲೆಗೈದು ಪರಾರಿಯಾಗಿರುವ ಘಟನೆ ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರೌಡಿ ಶೀಟರ್ ವಿಜಯ್ ಅಲಿಯಾಸ್ ಗೊಣ್ಣೆ ವಿಜಿ (25) ಪೊಲೀಸರ ಮೇಲೆ ಹಲ್ಲೆಗೈದು ಪರಾರಿಯಾದವನು. ಗಿರಿನಗರ ಠಾಣೆ ಕಾನ್‌ಸ್ಟೇಬಲ್‌ಗಳಾದ ನಾಗೇಂದ್ರ ತೇಲಿ, ಕಿರಣ್ ಮುಂದಿನ ಮಣಿ, ನೇತ್ರಾ ಹಲ್ಲೆಗೊಳಗಾದವರು. ತಲೆಮರೆಸಿಕೊಂಡಿರುವ ಆರೋಪಿ ವಿಜಯ್ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಿಳಾ ಕಾನ್‌ಸ್ಟೇಬಲ್ ನೇತ್ರಾ ಅವರು ಶುಕ್ರವಾರ ಸಂಜೆ 4ರ ಸುಮಾರಿಗೆ ಹೊಸಕೆರೆಹಳ್ಳಿಯ ಬಸ್ ನಿಲ್ದಾಣದ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಬ್ಲೂ ಕಲರ್ ಡಿಯೊವೊಂದು ಅದೇ ಮಾರ್ಗದಲ್ಲಿ ಬಂದಿದೆ. ಈ ವೇಳೆ ಅದರಲ್ಲಿ ನಂಬರ್ ಪ್ಲೇಟ್ ಇಲ್ಲದಿರುವುದನ್ನು ನೇತ್ರಾ ಗಮನಿಸಿದ್ದಾರೆ. ಈ ವೇಳೆ ಆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ವ್ಯಕ್ತಿಯನ್ನು ನೋಡಿದಾಗ ಆತ ರೌಡಿ ಶೀಟರ್ ವಿಜಯ್ ಎಂಬುದು ಗೊತ್ತಾಗಿದೆ.
ಆವಾಜ್ ಹಾಕಿದ ರೌಡಿಯನ್ನೇ ಕೊಂದ ಆಟೋ ಚಾಲಕರು!
ಈ ವೇಳೆ ಕಾನ್‌ಸ್ಟೇಬಲ್‌ಗಳಾದ ನೇತ್ರಾ, ನಾಗೇಂದ್ರ ತೇಲಿ ಹಾಗೂ ಕಿರಣ್ ಆರೋಪಿ ವಿಜಯ್‌ನನ್ನು ಹಿಡಿಯಲು ಯತ್ನಿಸಿದ್ದಾರೆ. ತಪ್ಪಿಸಿಕೊಂಡು ಓಡಲು ಯತ್ನಿಸಿದ ಆರೋಪಿಯನ್ನು ನಾಗೇಂದ್ರ ಮತ್ತು ಕಿರಣ್ ಇಬ್ಬರು ಸೇರಿ ಹಿಡಿದಿದ್ದಾರೆ. ಅಷ್ಟರಲ್ಲಿ ಆರೋಪಿಯು ಪೆಪ್ಪರ್ ಸ್ಪ್ರೇ ತೆಗೆದು ಮೂವರು ಕಾನ್‌ಸ್ಟೇಬಲ್‌ಗಳ ಮೇಲೆ ಸ್ಪ್ರೇ ಮಾಡಿದ್ದಾನೆ. ಅಷ್ಟೇ ಅಲ್ಲದೆ, ತನ್ನ ಬಳಿಯಿದ್ದ ಡ್ರ್ಯಾಗರ್ ತೆಗೆದು ಕಾನ್‌ಸ್ಟೇಬಲ್ ನಾಗೇಂದ್ರ ತೇಲಿ ಅವರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಸ್ಥಳೀಯರು ಕೂಡಲೇ ಪೊಲೀಸರ ನೆರವಿಗೆ ಧಾವಿಸಿ ಗಾಯಗೊಂಡಿದ್ದ ಕಾನ್‌ಸ್ಟೇಬಲ್‌ಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.