
ಮುಂಬೈ(ಸೆ.07): ನಟ ಸುಶಾಂತ್ ಸಿಂಗ್ ಅಸಹಜ ಸಾವಿನ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ, ಪ್ರೇಯಸಿ ರಿಯಾ ಚಕ್ರವರ್ತಿ ತಾವು ತಮ್ಮ ಸೋದರನಿಂದಲೇ ಮಾದಕ ವಸ್ತು ಖರೀದಿಸಿದ್ದಕ್ಕಾಗಿ ಮಾದಕ ವಸ್ತು ಸಂಸ್ಥೆ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಭಾನುವಾರ ರಿಯಾರನ್ನು ಎನ್‌ಸಿಬಿ ಅಧಿಕಾರಿಗಳು ಸತತ 6 ತಾಸು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ‘ಸುಶಾಂತ್‌ಗಾಗಿ ನಾನು ನನ್ನ ಸೋದರ ಶೋವಿಕ್‌ನಿಂದಲೇ ಮಾದಕ ವಸ್ತು ಖರೀದಿಸಿದ್ದು ನಿಜ. ಮಾದಕ ವಸ್ತು ಖರೀದಿ ಸಂಬಂಧ ಮಾ.15ರಿಂದ ತಾನು ಸೋದರ ಶೋವಿಕ್ ಜೊತೆ ನಡೆಸಿದ ವಾಟ್ಸಾಪ್ ಚಾಟ್ ಬಗ್ಗೆಯೂ ಒಪ್ಪಿಕೊಂಡಿದ್ದಾಳೆ. ಜೊತೆಗೆ ಮಾ.17ರಂದು ಸುಶಾಂತ್‌ರ ಮ್ಯಾನೇಜರ್ ಸ್ಯಾಮ್ಯುಯಲ್ ಮಿರಾಂಡಾ, ಡ್ರಗ್ ಪೆಡ್ಲರ್ ಝೈದ್‌ನಿಂದ ಮಾದಕ ವಸ್ತು ಖರೀದಿಗೆ ತೆರಳಿದ ಮಾಹಿತಿಯೂ ನನಗೆ ಗೊತ್ತಿತ್ತು ಎಂದು ತಿಳಿಸಿದ್ದಾಳೆ ಎಂದು ಮೂಲಗಳು ತಿಳಿಸಿವೆ.
ಸೋಮವಾರ ಬೆಳಗ್ಗೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ರಿಯಾಗೆ ಎನ್‌ಸಿಬಿ ಸೂಚನೆ ನೀಡಿದೆ. ಸೋಮವಾರ ಇನ್ನಷ್ಟುವಿಚಾರಣೆ ವೇಳೆ ರಿಯಾ ಬಂಧನ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ.
ಬಂಧನಕ್ಕೆ ರಿಯಾ ಸಿದ್ಧ: ವಕೀಲ
ಸುಶಾಂತ್ ನಿಗೂಢ ಸಾವಿನ ಹಿಂದೆ ಮಾದಕ ವಸ್ತುಗಳ ದುರ್ಬಳಕೆ ಪ್ರಕರಣದಲ್ಲಿ ತಮ್ಮ ಕಕ್ಷಿದಾರೆ ಬಂಧನಕ್ಕೊಳಗಾಗಲು ಸಹ ಸಿದ್ಧರಿದ್ದಾರೆ ಎಂದು ನಟಿ ರಿಯಾ ಚಕ್ರವರ್ತಿ ಅವರ ವಕೀಲರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಈಗಾಗಲೇ ಬಂಧನವಾಗಿರುವ ರಿಯಾ ಸೋದರ ಶೋವಿಕ್ ಚಕ್ರವರ್ತಿ ಹಾಗೂ ರಿಯಾ ಅವರ ಮುಖಾಮುಖಿ ವಿಚಾರಣೆಗೆ ಎನ್‌ಸಿಬಿ ಯೋಜಿಸಿದೆ. ಅಲ್ಲದೆ, ಈ ಪ್ರಕರಣದಲ್ಲಿ ರಿಯಾರನ್ನು ದಂಡನೆಗೆ ಗುರಿಪಡಿಸುವ ಯತ್ನ ನಡೆಯುತ್ತಿದ್ದು, ಯಾವುದೇ ತಪ್ಪು ಮಾಡದ ಅವರ ವಿರುದ್ಧ ಬಿಹಾರ ಪೊಲೀಸರು, ಸಿಬಿಐ, ಇ.ಡಿ ಹಾಗೂ ಎನ್‌ಸಿಬಿಯಂಥ ತನಿಖಾ ಸಂಸ್ಥೆಗಳು ತನಿಖೆ ಕೈಗೊಂಡಿದ್ದಾಗ್ಯೂ, ಅವರು ಈವರೆಗೂ ನಿರೀಕ್ಷಣ ಜಾಮೀನಿಗಾಗಿ ಯಾವುದೇ ಕೋರ್ಟ್ ಮೊರೆ ಹೋಗಿಲ್ಲ ಎಂದು ಅವರ ವಕೀಲರು ತಿಳಿಸಿದ್ದಾರೆ.
ಸುಶಾಂತ್ ಗಾಂಜಾ ಸೇದಿದ್ದು ನೋಡಿದ್ದೆ
ಸುಶಾಂತ್ ಸಿಂಗ್ ಗಾಂಜಾ ಸೇದಿದ್ದನ್ನು 2 ವರ್ಷಗಳ ಹಿಂದೆಯೇ ಖುದ್ದು ನೋಡಿದ್ದಾಗಿ ಸುಶಾಂತ್‌ರ ಮನೆಗೆಲಸದಾಳು ದೀಪೇಶ್ ಸಾವಂತ್ ಎನ್‌ಸಿಬಿಗೆ ತಿಳಿಸಿದ್ದಾನೆ. ಶನಿವಾರ ರಾತ್ರಿಯಷ್ಟೇ ಎನ್‌ಸಿಬಿಯಿಂದ ಬಂಧನಕ್ಕೀಡಾಗಿದ್ದ ದೀಪೇಶ್‌ನನ್ನು ಭಾನುವಾರ ವಿಚಾರಣೆಗೊಳಪಡಿಸಲಾಗಿದ್ದು, ಈ ವೇಳೆ ತಾನೆಂದಿಗೂ ಸುಶಾಂತ್ ಅವರಿಗೆ ಗಾಂಜಾ ತಂದುಕೊಟ್ಟಿಲ್ಲ. ಆದರೆ, ಮನೆಗೆಲಸದ ಮತ್ತೋರ್ವ ಸಿಬ್ಬಂದಿ ರಿಷಿಕೇಶ್ ಪವಾರ್, ಸುಶಾಂತ್‌ರಿಗೆ ಗಾಂಜಾ ಪೂರೈಸುತ್ತಿದ್ದ. ಜೊತೆಗೆ, ಗಾಂಜಾ ತಯಾರಿಸುತ್ತಿದ್ದ ಅಬ್ಬಾಸ್ ಖಲೂಯಿ ಎಂಬ ಮತ್ತೋರ್ವ ವ್ಯಕ್ತಿಯು ಸುಶಾಂತ್ ಅವರ ಜೊತೆಯೇ ಗಾಂಜಾ ಹೊಗೆ ಹೀರುತ್ತಿದ್ದ ಎಂದು ಬಾಯ್ಬಿಟ್ಟಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ