
ಬೆಂಗಳೂರು(ಏ.21): ಅತಿಯಾದ ಶಿಸ್ತಿನ ವರ್ತನೆಯಿಂದ ಬೇಸತ್ತು ಮಗನೇ ತಾಯಿ ಜತೆಗೆ ಸೇರಿಕೊಂಡು ನಿವೃತ್ತ ಸೈನಿಕನಾಗಿದ್ದ ತಂದೆಯನ್ನು ನಿದ್ದೆಯಲ್ಲಿರುವಾಗ ಉಸಿರುಗಟ್ಟಿಸಿ ಬಳಿಕ ಹಲ್ಲೆಗೈದು ಕೊಲೆ ಮಾಡಿರುವ ಘಟನೆ ವಿವೇಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಿವೇಕನಗರ ನಿವಾಸಿ ಬೋಲು ಅರಬ್ (47) ಕೊಲೆಯಾದ ನಿವೃತ್ತ ಸೈನಿಕ. ಭಾನುವಾರ ಮುಂಜಾನೆ ಸುಮಾರು 1.30ಕ್ಕೆ ಈ ದುರ್ಘಟನೆ ನಡೆದಿದೆ. ಈ ಸಂಬಂಧ ಮೃತನ ಪುತ್ರ ಸಮೀರ್ (19) ಮತ್ತು ಪತ್ನಿ ತಬ್ಸಮ್ (36) ಎಂಬುವವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಕೋಟ್ಯಧೀಶೆ ಮಂಗಳಮುಖಿ ಹತ್ಯೆ; ಪತಿ ಮೇಲೆ ಅನುಮಾನ!
ಘಟನೆ ವಿವರ:
ಮಹಾರಾಷ್ಟ್ರ ಮೂಲದ ಬೋಲು ಅರಬ್ ಸೈನಿಕನಾಗಿ ಕೆಲಸ ಮಾಡಿ ನಿವೃತ್ತರಾಗಿದ್ದರು. ಎರಡು ದಶಕಗಳಿಗೂ ಅಧಿಕ ಸಮಯದಿಂದ ಕುಟುಂಬದೊಂದಿಗೆ ನಗರದಲ್ಲಿ ನೆಲೆಸಿದ್ದರು. ಬೋಲು ಅರಬ್‌ಗೆ ತಬ್ಸಮ್ 2ನೇ ಪತ್ನಿಯಾಗಿದ್ದು, ಗೃಹಿಣಿಯಾಗಿದ್ದಳು. ಪುತ್ರ ಸಮೀರ್ ನಗರದ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ. ಬೋಲು ಅರಬ್ ಶಿಸ್ತಿನ ವ್ಯಕ್ತಿಯಾಗಿದ್ದರು. ಪತ್ನಿ ಮತ್ತು ಪುತ್ರನಿಗೂ ಶಿಸ್ತಿನಿಂದ ಇರುವಂತೆ ಹೇಳುತ್ತಿದ್ದರು. ವಿನಾಕಾರಣ ಮನೆಯಿಂದ ಹೊರಗೆ ಹೋಗುವಂತಿಲ್ಲ. ಬೋಲು ಅರಬ್‌ರ ಈ ಶಿಸ್ತು ಪತ್ನಿ ಮತ್ತು ಪುತ್ರನಿಗೆ ಮಾನಸಿಕ ಹಿಂಸೆಯಂತೆ ಆಗಿತ್ತು. ಹೀಗಾಗಿ ತಾಯಿ-ಮಗ ಸೇರಿಕೊಂಡು ಬೋಲು ಅರಬ್‌ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು.
ಊಟಕ್ಕೆ ನಿದ್ರೆ ಮಾತ್ರೆ ಬೆರೆಸಿಕೊಟ್ಟರು:
ಶನಿವಾರ ರಾತ್ರಿ ಊಟಕ್ಕೆ ನಿದ್ದೆ ಮಾತ್ರೆ ಬರೆಸಿ ಬೋಲು ಅರಬ್‌ಗೆ ನೀಡಿದ್ದರು. ಊಟ ಮಾಡಿದ ಬಳಿಕ ಬೋಲು ಅರಬ್ ಗಾಢ ನಿದ್ದೆಗೆ ಜಾರಿದ್ದಾರೆ. ಮುಂಜಾನೆ 1.30ರ ಸುಮಾರಿಗೆ ತಾಯಿ-ಮಗ ಸೇರಿಕೊಂಡು ತಲೆದಿಂಬು ತೆಗೆದು ಬೋಲು ಅರಬ್ ಮುಖದ ಮೇಲೆ ಅದುಮಿ ಉಸಿರುಗಟ್ಟಿಸಿ ಕೊಲೆ ಮಾಡಲು ಯತ್ನಿಸಿದ್ದಾರೆ. ಆದರೆ, ಎಚ್ಚರಗೊಂಡು ಬೋಲು ಅರಬ್ ಪ್ರತಿರೋಧವೊಡ್ಡಿದ ಪರಿಣಾಮ ಪುತ್ರ ಸಮೀರ್ ಕೈಯಿಂದಲೇ ತಲೆ ಹಾಗೂ ಮುಖಕ್ಕೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.
ಈ ಸಂಬಂಧ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಬರೋಬ್ಬರಿ 39 ವರ್ಷಗಳ ಬಳಿಕ ಈ ಗ್ರಾಮದಲ್ಲಿ ಜಾತ್ರೆ; ಹುಚ್ಚಪ್ಪಸ್ವಾಮಿ ದರ್ಶನಕ್ಕೆ ಬರ್ತಿದ್ದಾರೆ ಸಿಎಂ ಸಿದ್ದರಾಮಯ್ಯ!
ಕೊಲೆ ಬಳಿಕ ಕಥೆ ಕಟ್ಟಿದ ಪುತ್ರ
ಬೋಲು ಅರಬ್ ಮೃತಪಟ್ಟಿರುವುದು ಖಚಿತವಾದ ಬಳಿಕ ಸಮೀರ್, ಪಕ್ಕದ ಮನೆಯ ವ್ಯಕ್ತಿಯನ್ನು ಸಂಪರ್ಕಿಸಿ, ಯಾರೋ ನಾಲ್ಕೈದು ಮಂದಿ ಮನೆಗೆ ನುಗ್ಗಿ ತಂದೆಯನ್ನು ಕೊಲೆ ಮಾಡಿ ಪರಾರಿಯಾದರು ಎಂದು ಹೇಳಿದ್ದಾನೆ. ಬಳಿಕ ನೆರೆ ಮನೆಯ ವ್ಯಕ್ತಿ 112 ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬಳಿಕ ತಾಯಿ-ಮಗನ ವರ್ತನೆ ಬಗ್ಗೆ ಅನುಮಾನಗೊಂಡು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕೊಲೆ ಬಗ್ಗೆ ಬಾಯ್ಬಿಟ್ಟಿದ್ದಾರೆ. ಬಳಿಕ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ