ಮೃತರ ಮನೆಯಲ್ಲಿ ಪತ್ತೆಯಾಗಿರುವ ಮರಣ ಪತ್ರದಲ್ಲಿ ತಮ್ಮ ಆತ್ಮಹತ್ಯೆಗೆ ಹಿಂದಿನ ಕಾರಣದ ಬಗ್ಗೆ ವಿವರಿಸಿದ್ದಾರೆ. ತಮ್ಮ ವಿರುದ್ದ ಸುಳ್ಳು ಪ್ರಕರಣ ದಾಖಲಿಸಿ ತೊಂದರೆ ನೀಡಿದ್ದಾರೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀಧರ್ ವಿರುದ್ದ ಆರೋಪವನ್ನು ಪತ್ರದಲ್ಲಿ ರಶೀದ್ ಉಲ್ಲೇಖಿಸಿರುವುದಾಗಿ ತಿಳಿದು ಬಂದಿದೆ.
ಬೆಂಗಳೂರು(ಆ.11): ನಿವೃತ್ತಿ ಬಳಿಕ ತಮಗೆ ಸಿಗಬೇಕಾದ ಸೌಲಭ್ಯಗಳಿಗೆ ಇಲಾಖೆ ತಡೆ ನೀಡಿದ್ದರಿಂದ ಜಿಗುಪ್ಸೆಗೊಂಡು ನಿವೃತ್ತ ಸರ್ಕಾರಿ ಅಧಿಕಾರಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚಿಕ್ಕಬಾಣವಾರ ಸಮೀಪದ ಎಜಿಆರ್‌ಲೇಔಟ್ ನಿವಾಸಿ ಅಬ್ದುಲ್ ರಶೀದ್ (64) ಮೃತ ವ್ಯಕ್ತಿ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಶುಕ್ರವಾರ ರಶೀದ್ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತರ ಮನೆಗೆ ಮನೆ ಮಾಲೀಕ ರಾತ್ರಿ ತೆರಳಿದ್ದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
undefined
ಶಿವಮೊಗ್ಗ: ಇಬ್ಬರು ಮಕ್ಕಳನ್ನು ಬಾವಿಗೆ ತಳ್ಳಿ ತಾಯಿಯೂ ಆತ್ಮಹತ್ಯೆ..!
10 ವರ್ಷದ ಕೇಸ್ ತಂದ ನೋವು:
35 ವರ್ಷಗಳ ಕಾಲ ಕೃಷಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ರಶೀದ್ ನಿವೃತ್ತರಾಗಿದ್ದರು. ನಿವೃತ್ತ ನಂತರ ಚಿಕ್ಕಬಾಣವಾರ ಸಮೀಪ ತಮ್ಮ ಪತ್ನಿ ಜತೆ ವಾಸವಾಗಿದ್ದರು. ಮದುವೆ ನಂತರ ಪೋಷಕರಿಂದ ಪ್ರತ್ಯೇಕವಾಗಿ ಮೃತರ ಇಬ್ಬರು ಮಕ್ಕಳು ವಾಸವಾಗಿದ್ದಾರೆ. ಹತ್ತು ವರ್ಷಗಳ ಹಿಂದೆ ಚಿತ್ರದುರ್ಗದಲ್ಲಿ ಸೇವೆ ಸಲ್ಲಿಸು ವಾಗ ರೈತರಿಗೆ ನೀಡಬೇಕಿದ್ದ ಸಹಾಯಧನ ದುರ್ಬಳಕೆ ಆರೋಪದ ಮೇರೆಗೆ ರಶೀದ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ರಶೀದ್ ವಿರುದ್ದ ಇಲಾಖಾ ಮಟ್ಟದ ಆಂತರಿಕ ತನಿಖೆ ನಡೆದಿತ್ತು. ಈ ಪ್ರಕರಣ ಇತ್ಯರ್ಥವಾಗದ ಕಾರಣ ನಿವೃತ್ತಿ ನಂತರ ಅವರಿಗೆ ಸಿಗ ಬೇಕಾದ ಆರ್ಥಿಕ ನೆರವು ಸೇರಿದಂತೆ ಇತರೆ ಸೌಲಭ್ಯಗಳನ್ನು ನೀಡದೆ ಕೃಷಿ ಇಲಾಖೆ ತಡೆಹಿಡಿದಿತ್ತು.
ಈ ವಿಚಾರವಾಗಿ ಹಲವು ಬಾರಿ ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಭೇಟಿಯಾದರೂ ಅವರಿಗೆ ನ್ಯಾಯ ಸಿಗಲಿಲ್ಲ. ಇದರಿಂದ ಬೇಸರಗೊಂಡು ರಶೀದ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಪ್ರೀತಿಸಿದ ಹುಡುಗಿ ಕೈಕೊಟ್ಲು ಅಂತಾ ಆತ್ಮಹತ್ಯೆ ಮಾಡಿಕೊಂಡ ಯುವಕ
ಎರಡು ದಿನಗಳ ಹಿಂದೆ ಸಂಬಂಧಿಕರ ಮನೆಗೆ ರಶೀದ್ ಪತ್ನಿ ತೆರಳಿದ್ದರು. ಮನೆಯಲ್ಲಿ ಏಕಾಂಗಿಯಾಗಿದ್ದ ರಶೀದ್ ಶುಕ್ರವಾರ ಬೆಳಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರ ಮನೆಗೆ ರಾತ್ರಿ 9 ಗಂಟೆಗೆ ಅವರ ಮನೆ ಮಾಲೀಕ ತೆರಳಿದ್ದಾಗ ನೇಣಿನ ಕುಣಿಕೆಯಲ್ಲಿ ಮೃತದೇಹ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮರಣ ಪತ್ರದಲ್ಲಿ ಅಧಿಕಾರಿ ಹೆಸರು
ಮೃತರ ಮನೆಯಲ್ಲಿ ಪತ್ತೆಯಾಗಿರುವ ಮರಣ ಪತ್ರದಲ್ಲಿ ತಮ್ಮ ಆತ್ಮಹತ್ಯೆಗೆ ಹಿಂದಿನ ಕಾರಣದ ಬಗ್ಗೆ ವಿವರಿಸಿದ್ದಾರೆ. ತಮ್ಮ ವಿರುದ್ದ ಸುಳ್ಳು ಪ್ರಕರಣ ದಾಖಲಿಸಿ ತೊಂದರೆ ನೀಡಿದ್ದಾರೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀಧರ್ ವಿರುದ್ದ ಆರೋಪವನ್ನು ಪತ್ರದಲ್ಲಿ ರಶೀದ್ ಉಲ್ಲೇಖಿಸಿರುವುದಾಗಿ ತಿಳಿದು ಬಂದಿದೆ.