ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಅಪರಾಧಿಗೆ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಹಾಗೂ ಎಫ್‌ಟಿಎಸ್‌ಸಿ-2 ನ್ಯಾಯಾಲಯವು 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಕಾವೂರು ಮರಕಡ ಸಮೀಪದ ನಿವಾಸಿ, ಬಸ್ ಚಾಲಕ ದಯಾನಂದ ದಾನಣ್ಣನವರ್ (30) ಅಪರಾಧಿ.
ಮಂಗಳೂರು (ಮಾ.25) : ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಅಪರಾಧಿಗೆ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಹಾಗೂ ಎಫ್‌ಟಿಎಸ್‌ಸಿ-2 ನ್ಯಾಯಾಲಯವು 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಕಾವೂರು ಮರಕಡ ಸಮೀಪದ ನಿವಾಸಿ, ಬಸ್ ಚಾಲಕ ದಯಾನಂದ ದಾನಣ್ಣನವರ್(Dayananda danannavar) (30) ಅಪರಾಧಿ.
ಈತ 13 ವರ್ಷದ ವಿದ್ಯಾರ್ಥಿನಿಯೊಂದಿಗೆ ಇನ್‌ಸ್ಟಾಗ್ರಾಂ(Istagram) ಮೂಲಕ ಪರಿಚಯ ಮಾಡಿಕೊಂಡಿದ್ದ. 2022ರ ಜ.27ರಂದು ಹೊರಗೆ ತಿರುಗಾಡುವುದಕ್ಕೆ ಬರುವಂತೆ ಸಂದೇಶ ಕಳುಹಿಸಿದ್ದ. ಬಾಲಕಿ ಇದಕ್ಕೆ ನಿರಾಕರಿಸಿದ್ದಳು. ಆದರೂ ಒತ್ತಾಯ ಮಾಡಿ ಪುಸಲಾಯಿಸಿ ಜ.28ರಂದು ಆಟೋರಿಕ್ಷಾದರಲ್ಲಿ ಮಂಗಳೂರಿನ(Mangaluru) ಹಂಪನಕಟ್ಟೆಗೆ ಕರೆದೊಯ್ದು ಲಾಡ್ಜ್‌ನಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ. ಅಲ್ಲದೆ ಮನೆಯಲ್ಲಿ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ಬಾಲಕಿ ಮನೆಯಲ್ಲಿ ನಡೆದ ವಿಷಯ ತಿಳಿಸಿದ್ದಳು. ಮನೆಯವರು ಮಂಗಳೂರಿನ ಮಹಿಳಾ ಠಾಣೆಗೆ ದೂರು ನೀಡಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯವು ದಯಾನಂದನನ್ನು ತಪ್ಪಿತಸ್ಥನೆಂದು ತೀರ್ಮಾನಿಸಿ ಪೊಕ್ಸೋ(Pocso act) ಕಲಂ 4ರಡಿ 20 ವರ್ಷ ಕಠಿಣ ಸಜೆ, 50 ಸಾವಿರ ರು. ದಂಡ ವಿಧಿಸಿದೆ. ದಂಡ ಪಾವತಿಸಲು ತಪ್ಪಿದರೆ ಮತ್ತೆ 4 ತಿಂಗಳು ಕಠಿಣ ಸಜೆ ವಿಧಿಸಲಾಗಿದೆ. ಅಲ್ಲದೆ ನೊಂದ ಬಾಲಕಿಗೆ 3 ಲಕ್ಷ ರು. ಪರಿಹಾರ ನೀಡಬೇಕು. ಅದರಲ್ಲಿ 1 ಲಕ್ಷ ರು.ನ್ನು ಕೂಡಲೆ ಬಿಡುಗಡೆ ಮಾಡಿ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡಬೇಕು. ಉಳಿದ 2 ಲಕ್ಷ ರು.ಗಳನ್ನು ಆಕೆಯ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಠೇವಣಿ ಇಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮಹಿಳಾ ಠಾಣೆಯ ಪೊಲೀಸ್ ನಿರೀಕ್ಷಕರಾಗಿದ್ದ ಎಸ್.ಎಚ್. ಭಜಂತ್ರಿ ಮತ್ತು ರೇವತಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಸಲ್ಲಿಸಿದ್ದರು. ವಿಶೇಷ ಸರ್ಕಾರಿ ಅಭಿಯೋಜಕ ವೆಂಕಟರಮಣ ಸ್ವಾಮಿ ಸಿ. ಸರ್ಕಾರದ ಪರವಾಗಿ ವಾದಿಸಿದ್ದರು.
ಅಪ್ರಾಪ್ತೆಗೆ ಲೈಂಗಿಕ ಕಿರುಕುಳ; ಯುವಕನಿಗೆ 20 ಜೈಲು ಶಿಕ್ಷೆ:
ಭದ್ರಾವತಿ: 2019ರಲ್ಲಿ 13 ವರ್ಷದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ತಾಲೂಕಿನ ಯುವಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಶಿವಮೊಗ್ಗ ಪೋಕ್ಸೋ ನ್ಯಾಯಾಲಯ ತೀರ್ಪು ನೀಡಿದೆ.
ಸಂತ್ರಸ್ತೆಯ ತಂದೆ ಹಳೇನಗರ ಪೊಲೀಸ್ ಠಾಣೆ(Halenagara police station)ಯಲ್ಲಿ ದೂರು ದಾಖಲಿಸಿದ್ದರು. ಅಂದಿನ ತನಿಖಾಧಿಕಾರಿಯಾಗಿದ್ದ ನಗರ ಪೊಲೀಸ್ ವೃತ್ತ ನಿರೀಕ್ಷಕ ನಂಜಪ್ಪ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ವಿಜಯಕಲಾ ಎಂ.ಎಚ್.ಸಿ ತನಿಖಾ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿದ್ದರು. ವಿಚಾರಣೆ ಬಳಿಕ ಮಾ.23ರಂದು ಹೆಚ್ಚುವರಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮೋಹನ ಜೆ.ಎಸ್. ಯುವಕ ಅಪರಾಧಿ ಎಂದು ತೀರ್ಮಾನಿಸಿ, ತೀರ್ಪು ನೀಡಿದ್ದಾರೆ.
ಅಪರಾಧಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ಜೊತೆಗೆ .1.10 ಲಕ್ಷ ದಂಡ ವಿಧಿಸಲಾಗಿದೆ. ದಂಡ ಕಟ್ಟಲು ವಿಫಲವಾದಲ್ಲಿ, ಹೆಚ್ಚುವರಿಯಾಗಿ 6 ತಿಂಗಳ ಕಾಲ ಸಾದಾ ಜೈಲು ಶಿಕ್ಷೆ ವಿಧಿಸಿ ನ್ಯಾಯಾಧೀಶರು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಹರಿಪ್ರಸಾದ್ ವಾದ ಮಂಡಿಸಿದ್ದರು.