
ರಾಜಸ್ಥಾನದ ಕೋಟಾದಲ್ಲಿ ಪೊಲೀಸರು ಕ್ಷುಲ್ಲಕ ಕಾರಣಕ್ಕೆ ಅಂಗಡಿ ಮಾಲೀಕನೋರ್ವ ಮೇಲೆ ಹಲ್ಲೆ ಮಾಡಿದ್ದು, ಪೊಲೀಸರ ಹಲ್ಲೆಯಿಂದ ಆತ ರಸ್ತೆಯಲ್ಲೇ ಪ್ರಜ್ಞೆ ಕಳೆದುಕೊಂಡು ಕುಸಿದು ಬಿದ್ದಂತಹ ಘಟನೆ ನಡೆದಿದೆ. ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ವೀಡಿಯೋ ನೋಡಿದ ಅನೇಕರು ಹಲ್ಲೆ ಮಾಡಿದ ಸ್ಟೇಷನ್ ಆಫೀಸರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಎಸ್‌ಹೆಚ್‌ಒ ಪುಷ್ಪೇಂದ್ರ ಬನ್ಸಿವಾಲ್ ಹಲ್ಲೆ ಮಾಡಿದಾತ.
ಘಟನೆಯ ಹಿನ್ನೆಲೆ
ಕೋಟಾದ ಕೈತುನಿಪೊಲ್(Kaithunipol area)ಪ್ರದೇಶದ ಅಂಗಡಿಯೊಂದರ ಮುಂದೆ ಯಾರೋ ಬೈಕನ್ನು ಪಾರ್ಕ್ ಮಾಡಿ ಹೋಗಿದ್ದು, ಈ ಬೈಕನ್ನು ಅಲ್ಲಿಂದ ತೆಗೆಯುವಂತೆ ಪೊಲೀಸರು ಹಾಗೂ ಎಸ್‌ಹೆಚ್‌ಒ ಅಂಗಡೀ ಮಾಲೀಕನಿಗೆ ತಾಕೀತು ಮಾಡಿದ್ದಾರೆ. ಆದರೆ ಅಂಗಡಿ ಮಾಲೀಕ ಅದು ತನ್ನ ಬೈಕ್ ಅಲ್ಲ, ಹಾಗೂ ಅಲ್ಲಿ ನಿಲ್ಲಿಸುವ ಬೈಕ್ ಲಾಕ್ ಆಗಿದ್ದು, ತನಗೆ ಅದನ್ನು ಅಲ್ಲಿಂದ ತೆಗೆದು ಬೇರೆಡೆ ನಿಲ್ಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ.
ಇಷ್ಟಕ್ಕೆ ಸಿಟ್ಟಿಗೆದ್ದ ಎಸ್‌ಹೆಚ್‌ಒ ಪುಷ್ಪೇಂದ್ರ ಬನ್ಸಿವಾಲ್ ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದಾನೆ. ಅಂಗಡಿ ಮಾಲೀಕನನ್ನು ಅಂಗಡಿಯಿಂದ ಹೊರಗೆ ಎಳೆದು ಆತನ ಕೆನ್ನೆಗೆ ಜೋರಾಗಿ ಹೊಡೆದಿದ್ದು, ಆತನ ಜೊತೆಗಿದ್ದ ಇತರ ಪೊಲೀಸರು ಕೂಡ ಅಂಗಡಿ ಮಾಲೀಕನ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದ ಆತ ಪ್ರಜ್ಞೆ ಕಳೆದುಕೊಂಡು ಪೊಲೀಸ್ ವಾಹನದ ಸಮೀಪದಲ್ಲೇ ಕುಸಿದು ಬಿದ್ದಿದ್ದಾನೆ. ಬಳಿಕ ಪೊಲೀಸರು ಆತನನ್ನು ಮೇಲೆತ್ತುವ ಪ್ರಯತ್ನ ಮಾಡಿದ್ದಾರೆ.
ಈ ಘಟನೆ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ರಾಜಸ್ಥಾನದ ಕೋಟಾ ಪೊಲೀಸರ ವಿರುದ್ಧ ಈಗ ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಸಾರ್ವಜನಿಕರ ಮೇಲೆ ಗೂಂಡಾಗಿರಿ ಮಾಡುತ್ತಿರುವ ಎಸ್‌ಹೆಚ್‌ಒ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜನ ಆಗ್ರಹಿಸಿದ್ದಾರೆ.
ಮೇ 29ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು, ತಿಂಗಳಾಗುತ್ತಾ ಬಂದರೂ ಹೀಗೆ ಹಲ್ಲೆ ಮಾಡಿದ ಎಸ್‌ಹೆಚ್‌ಒ ವಿರುದ್ಧ ಇಲ್ಲಿವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ, ಆದರೆ ಕೆಲ ದಿನಗಳ ಹಿಂದೆ ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದಾದ ನಂತರವಷ್ಟೇ ಎಸ್‌ಪಿ ಅಮೃತ ದುಹಾನ್ ಅವರು ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಆದರೆ ಇಲ್ಲಿವರಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವರದಿಯಾಗಿದೆ.
ಈ ವೀಡಿಯೋವನ್ನು NCMIndia Council For Men Affairs ಎಂಬ ಟ್ವಿಟ್ಟರ್ ಖಾತೆಯಿಂದ ಪೋಸ್ಟ್ ಮಾಡಿದ್ದು, 6 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಪಾರ್ಕಿಂಗ್ ಮಾಡಬಾರದ ಸ್ಥಳದಲ್ಲಿ ಪಾರ್ಕಿಂಗ್ ಮಾಡಿದರೆ ಪೊಲೀಸರಿಗೆ ಹಲ್ಲೆ ಮಾಡುವ ಹಕ್ಕಿಲ್ಲ. ಅವರು ಚಲನ್ ನೀಡಬಹುದು ಅಷ್ಟೇ ಈ ಪೊಲೀಸ್ ಅಧಿಕಾರಿಯನ್ನು ಸಸ್ಪೆಂಡ್ ಮಾಡಬೇಕು, ಈತ ತನ್ನ ಸಮವಸ್ತ್ರ ಹಾಗೂ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ