
ಪುತ್ತೂರು: ಕಳೆದ 7 ವರ್ಷಗಳ ಹಿಂದೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿ ಅಪರಾಧಿ ಪೀರೇಶ್ ಪೀರಪ್ಪ ಸಂಗಪ್ಪ ಮಾಲೋತ್ತರ ಎಂಬಾತನಿಗೆ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಪುತ್ತೂರು ತಾಲೂಕಿನ ಮೈಂದನಡ್ಕ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಅಪರಾಧಿ, ಗದಗ ಜಿಲ್ಲೆಯ ರೋಣ ತಾಲೂಕಿನ ರಾಜೂರ ದಿಂಡೂರ ಸರ್ಕಾರಿ ಪ್ರಾಥಮಿಕ ಶಾಲೆಯ ಬಳಿಯ ನಿವಾಸಿ.
2007ರ ಆಗಸ್ಟ್‌ನಲ್ಲಿ ಆರೋಪಿಯು ಅಪ್ರಾಪ್ತ ಬಾಲಕಿಯನ್ನು ಆಕೆಯ ಮೊಬೈಲ್ ಚಾರ್ಜ್ ಮಾಡಲು ತನ್ನ ಬಾಡಿಗೆ ಮನೆಗೆ ಆಗಮಿಸುವಂತೆ ಪುಸಲಾಯಿಸಿ ಅತ್ಯಾ*ಚಾರ ಎಸಗಿರುವುದು ಮತ್ತು ಬಳಿಕದ ದಿನಗಳಲ್ಲಿ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿ ಆಕೆ ಗರ್ಭಿಣಿಯಾಗಲು ಕಾರಣನಾಗಿದ್ದ ಎಂದು ಆರೋಪಿಸಲಾಗಿತ್ತು. ಬಾಲಕಿಯ ತಾಯಿ ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮತ್ತು ಪೋಕ್ಸೋ ವಿಶೇಷ ನ್ಯಾಯಾಲಯ ಪ್ರಕರಣದಲ್ಲಿ ಒಟ್ಟು 18 ಸಾಕ್ಷಿಗಳನ್ನು ವಿಚಾರಣೆ ನಡೆಸಿತ್ತು. ನ್ಯಾಯಾಧೀಶೆ ಸರಿತಾ ಡಿ. ಅವರು ಅಫರಾಧಿಗೆ ಭಾ.ದಂ.ಸ. ಕಲಂ 376 ರಡಿ ಅಪರಾಧಕ್ಕೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ರು. 20ಸಾವಿರ ದಂಡ, ದಂಡ ತೆರಲು ತಪ್ಪಿದ್ದಲ್ಲಿ 1 ವರ್ಷ ಸಾದಾ ಶಿಕ್ಷೆ ಮತ್ತು ಭಾ.ದಂ.ಸ. ಕಲಂ 506 ರಡಿ ಅಪರಾಧಕ್ಕೆ 2 ವರ್ಷಗಳ ಸಾದಾ ಶಿಕ್ಷೆ ಮತ್ತು ರು. 5ಸಾವಿರ ದಂಡ, ದಂಡ ತೆರಲು ತಪ್ಪಿದಲ್ಲಿ 3 ತಿಂಗಳ ಸಾದಾ ಶಿಕ್ಷೆ ಮತ್ತು ಪೋಕೋ ಕಾಯ್ದೆಯಡಿ ಅಪರಾಧಕ್ಕೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ರು. 10ಸಾವಿರ ದಂಡ, ದಂಡ ತೆರಲು ತಪ್ಪಿದ್ದಲ್ಲಿ 1 ವರ್ಷ ಕಾರಾಗೃಹ ಶಿಕ್ಷೆಯನ್ನು ವಿಧಿಸಿರುತ್ತಾರೆ. ದಂಡ ಪ್ರಕ್ರಿಯಾ ಸಂಹಿತೆ ಕಲಂ 357ಎ ಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಬಾಲಕಿಗೆ ರು. 6 ಲಕ್ಷ ಪರಿಹಾರ ರೂಪವಾಗಿ ನೀಡಬೇಕೆಂದು ಆದೇಶಿಸಿದೆ. ಸರ್ಕಾರದ ಪರ ಪೋಕೋ ವಿಶೇಷ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕ ಕುದ್ರಿಯ ಪುಷ್ಪರಾಜ ಅಡ್ಯಂತಾಯ ವಾದಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ