
ಶೇಷಮೂರ್ತಿ ಅವಧಾನಿ
ಕಲಬುರಗಿ (ಆ.1): ಡೀಲ್‌ನಂತೆ 40 ಲಕ್ಷ ಹೊಂದಿಸಿ ಕೊಡದೆ ಹೋದರೆ ಸಾಯುವುದಾಗಿ ಪೋಷಕರಿಗೆ ಬೆದರಿಸಿದ್ದೆ. ನನ್ನ ಬೆದರಿಕೆಗೆ ಬೆಚ್ಚಿ ಮನೆಯಲ್ಲಿನ ಬಂಗಾರ, ಬೆಳ್ಳಿ, ಇನ್ನೇನೇನೋ ಮಾರಿ ಹಣ ಹೊಂದಿಸಿದ್ದರು. ಅನ್ಯರಿಂದ ಕೈಗಡ- ಹೆಚ್ಚಿನ ಬಡ್ಡಿಗೆ ಸಾಲ ಪಡೆದು ಹಣ ಕೊಟ್ಟಿದ್ದರು. ಪೊಲೀಸ್ ಸಬ್‌ಇನ್ಸಪೆಕ್ಟರ್ ಆಗಲು ಲಕ್ಷಾಂತರ ರು. ಹೊಂದಿಸಿ ಕೊಟ್ಟಿದ್ದೆ. ಈಗ ಹಣವೂ ಇಲ್ಲ, ಹುದ್ದೆಯೂ ಇಲ್ಲ ಎಂಬಂತಾಗಿದೆ.’ ಪೊಲೀಸ್ ಇಲಾಖೆ ಕಳೆದ ಅಕ್ಟೋಬರ್‌ನಲ್ಲಿ 545 ಪಿಎಸ್‌ಐ ಹುದ್ದೆ ಭರ್ತಿಗೆ ನಡೆಸಿದ್ದ ಲಿಖಿತ ಪರೀಕ್ಷೆ ಬರೆದು ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದಿದ್ದ ಸೇಡಂನ ನಿವೃತ್ತ ಎಎಸ್‌ಐ ಪುತ್ರ ವೀರೇಶ ನಂದಗಾಂವ್‌ನ ಪಶ್ಚಾತ್ತಾಪದ ಮಾತುಗಳಿವು. ಈತನ ಬಳಿಯಿದ್ದ ಒಎಂಆರ್ ಶೀಟ್ ನಕಲು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದರಿಂದಲೇ ಇಡೀ ಹಗರಣ ಬಯಲಿಗೆ ಬಂದು ಸರ್ಕಾರ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿತ್ತು. ವಿಚಾರಣೆ ವೇಳೆ ಹಗರಣದ ಎಳೆಎಳೆಯನ್ನೆಲ್ಲ ಬಿಚ್ಚಿಟ್ಟಿರುವ ವೀರೇಶ ತನಗೀಗ ಪಶ್ಚಾತ್ತಾಪವಾಗುತ್ತಿದೆ ಎಂದು ಸಿಐಡಿಗೆ ನೀಡಿರುವ ಸ್ವಯಂ ಹೇಳಿಕೆಯಲ್ಲಿ ದಾಖಲಿಸಿದ್ದಾನೆ. ಇಲ್ಲಿನ ಜೆಎಂಎಫ್‌ಸಿ 3ನೇ ನ್ಯಾಯಾಲಯಕ್ಕೆ ಸಿಐಡಿ ಸಲ್ಲಿಸಿರುವ 1974 ಪುಟಗಳ ಆರೋಪ ಪಟ್ಟಿಯಲ್ಲಿ ವೀರೇಶನ ಮಾತುಗಳೆಲ್ಲವನ್ನು ಉಲ್ಲೇಖಿಸಲಾಗಿದೆ.
ಪಿಎಸ್‌ಐ ತಾತ್ಕಾಲಿಕ ಪಟ್ಟಿಯಲ್ಲಿ ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದಿದ್ದ ವೀರೇಶನ ಬಳಿ ಅಕ್ರಮದ ರೂವಾರಿಗಳಲ್ಲಿ ಒಬ್ಬನಾದ ಎಂಜಿನಿಯರ್ ಮಂಜುನಾಥ ಮೇಳಕುಂದಿ 40 ಲಕ್ಷಕ್ಕೆ ಡೀಲ್ ಮಾಡಿಕೊಂಡು ಪಾಸು ಮಾಡಿಸಿದ್ದ. ತಾನೇ ಮಂಜುನಾಥನಿಗೆ 40 ಲಕ್ಷ ರುಪಾಯಿ ನೀಡಿದ್ದಾಗಿ ವೀರೇಶ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾನೆ ಎಂಬಂಶ ಸಿಐಡಿ ಆರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ.
ಜ್ಞಾನಜ್ಯೋತಿ ಶಾಲೆ ಪರೀಕ್ಷಾ ಕೇಂದ್ರ, ಅಲ್ಲಿನ ಬ್ಲಾಕ್‌ಗಳು, ನಂಬರ್, ಪ್ರಶ್ನೆ ಪತ್ರಿಕೆ ಸೀರೀಸ್ ಎಲ್ಲದರ ಬಗ್ಗೆ ಕರಾರುವಾಕ್ಕಾಗಿ ಮಾಹಿತಿ ನೀಡುತ್ತ ಬ್ಲೂ ಟೂತ್ ಬಳಸಿ ಸರಿ ಉತ್ತರ ಸರಬರಾಜು ಮಾಡುವುದಾಗಿ ಹೇಳಿದಾಗ ನಂಬಿ ಮಂಜುನಾಥ ಮೇಳಕುಂದಿ ಬಳಿ ಡೀಲ್‌ಗೆ ಮುಂದಾದೆ. ಬಳಿಕ ಪೋಷಕರಿಂದ ಕಾಡಿ ಬೇಡಿ ಹಣ ತಂದು ಮಂಜುನಾಥನಿಗೆ ನೀಡಿದೆ ಎಂದು ವೀರೇಶ ಹೇಳಿಕೆ ದಾಖಲಿಸಿದ್ದಾನೆ.
PSI Recruitment Scam: ಮೆಟಲ್ ಡಿಟೆಕ್ಟರ್ ಸರಿಯಿಲ್ಲ ಅಂತ ಬುರುಡೆ ಬಿಟ್ರಾ ಸಿಬ್ಬಂದಿ?
ಮಂಜುನಾಥ ಹೇಳಿದಂತೆಯೇ ಡೀಲ್ ಆದಂತಹ ಅಭ್ಯರ್ಥಿಗಳ ಕೈಗೆ ಆತ ಮುಂಚೆಯೇ ಹೇಳಿದ್ದ ಸೀರೀಸ್‌ನ ಪ್ರಶ್ನೆ ಪತ್ರಿಕೆಗಳೇ ಬಂದಿದ್ದವು. ಅವರೆಲ್ಲರೂ ಲೀಲಾಜಾಲವಾಗಿ ತಮ್ಮ ಒಎಂಆರ್ ಶೀಟ್‌ಗಳನ್ನೆಲ್ಲ ಸರಿ ಉತ್ತರದಿಂದ ತುಂಬಿರುವುದು ಮಂಜುನಾಥನ ಕರಾಮತ್ತಿನಿಂದ ಎಂಬಂಶ ಆರೋಪ ಪಟ್ಟಿ ಯಲ್ಲಿ ದಾಖಲಾಗಿದೆ.
PSI Recruitment Scam ತಲೆ ಮರೆಸಿಕೊಂಡಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಮುಂಬೈನಲ್ಲಿ ಬಂಧನ
ನಿಖರ ಉತ್ತರ ಪೂರೈಸುತ್ತಿದ್ದ ಮಂಜುನಾಥ: ಕಿಂಗ್‌ಪಿನ್ ಮಂಜುನಾಥ ಮೇಳಕುಂದಿಯೊಂದಿಗೆ ಡೀಲ್ ಆದಂತಹ ವೀರೇಶ, ಶಾಂತಿಬಾಯಿ, ಚೇತನ್, ಪ್ರವೀಣ ಕುಮಾರ್ ರೆಡ್ಡಿ ಜ್ಞಾನಜ್ಯೋತಿ ಹೈಸ್ಕೂಲ್ ಪರೀಕ್ಷಾ ಕೇಂದ್ರದಲ್ಲಿಯೇ ಪರೀಕ್ಷೆ ಬರೆದಿದ್ದರು. ಇವರೆಲ್ಲರ ಪ್ರಶ್ನೆ ಪತ್ರಿಕೆ ಸೀರೀಸ್ ಮೊದಲೇ ಅರಿತಿದ್ದ ಮಂಜುನಾಥ ಅವರವರ ಪ್ರಶ್ನೆಗಳನ್ನು ಪಡೆದು ಅದಕ್ಕೆ ತಕ್ಕಂತೆ ನಿಖರ ಉತ್ತರ ಪೂರೈಸುತ್ತಿದ್ದ. ಶಾಲೆಯ ಹೆಡ್‌ಮಾಸ್ಟರ್ ಕಾಶೀನಾಥನಿಗೆ ಮಂಜು ಪೂರೈಸಿದ ಸರಿ ಉತ್ತರ ಕೈ ಸೇರುತ್ತಿದ್ದವು. ಅಲ್ಲಿಂದ ಕೋಣೆಯ ಇನ್ವಿಜಿಲೇಟರ್‌ಗಳ ಕೈ ಸೇರುತ್ತಿದ್ದ ಉತ್ತರಗಳು ಪರೀಕ್ಷೆಯ ನಂತರ 5ರಿಂದ 10 ನಿಮಿಷದೊಳಗೇ ಡೀಲ್ ಆಗಿರುವ ಅಭ್ಯರ್ಥಿಗಳ ಒಎಂಆರ್ ಶೀಟ್‌ನಲ್ಲಿ ಭರ್ತಿಯಾಗುತ್ತಿದ್ದವು ಎಂಬಿತ್ಯಾದಿ ವಿವರಗಳು ಚಾರ್ಜ್‌ಶೀಟ್ ನಲ್ಲಿ ದಾಖಲಾಗಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ