ಮಗು ಪಡೆಯಲು 11 ವರ್ಷ ತಪಸ್ಸು ಮಾಡಿದ ತಾಯಿ : ಆಸ್ತಿಗಾಗಿ ಐದೇ ತಿಂಗಳಿಗೆ ಬಲಿ ಪಡೆದಳು ಮಲತಾಯಿ

By Sathish Kumar KH  |  First Published Sep 1, 2023, 7:01 PM IST

ಗಂಡನಿಗೆ ಮೊದಲ ಹೆಂಡತಿಯಾಗಿದ್ದರೂ 11 ವರ್ಷ ಬಂಜೆ ಎಂದು ಕರೆಸಿಕೊಂಡು ತಾಯಿ ಮಗುವಿಗೆ ಜನ್ಮ ನೀಡಿದರೆ, ಮಲತಾಯಿ ಮಗು ಕಣ್ಣುಬಿಟ್ಟ 5 ತಿಂಗಳಿಗೆ ಹಾಲಿನಲ್ಲಿ ವಿಷ ಬೆರೆಸಿ ಕುಡಿಸಿ ಕೊಲೆ ಮಾಡಿದ್ದಾಳೆ.


ಯಾದಗಿರಿ (ಸೆ.01): ಯಾದಗಿರಿ ಜಿಲ್ಲೆಯಲ್ಲಿ ಮಲತಾಯಿಯೊಬ್ಬಳು ಗಂಡನ ತುಂಡು ಆಸ್ತಿಗಾಗಿ 5 ತಿಂಗಳ ಮಗು ಕುಡಿಯುವ ಹಾಲಿಗೆ ಕ್ರಿಮಿನಾಷಕ ವಿಷವನ್ನು ಬೆರೆಸಿ ಕುಡಿಸಿ ಕೊಲೆ ಮಾಡಿದ್ದಾಳೆ. ಆದರೆ, ಆ ಮಗುವನ್ನು ಪಡೆಯಲು ತಾಯಿ 11 ವರ್ಷ ಜನರು ಬಂಜೆ ಎಂದು ಕರೆಯುವ ನೋವು ನುಂಗಿಕೊಂಡು, ಎಲ್ಲ ದೇವರಿಗೆ ಹರಕೆ ಹೊತ್ತು, ತಪಸ್ಸು ಮಾಡಿದ ನಂತರ ಮಗು ಜನಿಸಿತ್ತು. ತವರು ಮನೆಯಲ್ಲಿ ಬಾಣಂತನ ಮುಗಿಸಿ ಮುಡಿ ಕೊಡುವ ಶಾಸ್ತ್ರಕ್ಕಾಗಿ ಗಂಡನ ಮನೆಗೆ ಮಗುವನ್ನು ಕರೆದುಕೊಂಡು ಬಂದಾಗ ಆಕೆಯ ಸವತಿ (ಗಂಡನ 2ನೇ ಹೆಂಡತಿ) ಆಸ್ತಿಗಾಗಿ ಮಗುವನ್ನೇ ಕೊಲೆ ಮಾಡಿದ್ದಾಳೆ.

ಇಡೀ ಮಾನವ ಕುಲವೇ ತಲೆ ತಗ್ಗಸುವ ಪೈಶಾಚಿಕ ಕೃತ್ಯಕ್ಕೆ ಯಾದಗಿರಿ ಜಿಲ್ಲೆ ವಡಗೇರಾ ತಾಲೂಕಿನ ಬಬಲಾದ ಗ್ರಾಮದಲ್ಲಿ ಘಟ‌ನೆ ನಡೆದಿದೆ. ಇನ್ನು ಸಿದ್ದಪ್ಪ ಚೆಟ್ಟಿಗೇರಿ ಎನ್ನುವ ವ್ಯಕ್ತಿ ಕಳೆದ 11 ವರ್ಷಗಳ ಹಿಂದೆ ಶ್ರೀದೇವಿ ಎನ್ನುವವರನ್ನು ಮದುವೆ ಆಗಿದ್ದರು. ಆದರೆ, ಮಕ್ಕಳಾಗಲಿಲ್ಲವೆಂದು ನಾಲ್ಕು ವರ್ಷಗಳ ಕಾದು ನೋಡಿದ ಗಂಡ ಹಾಗೂ ಗಂಡನ ಮನೆಯವರು ಈಕೆಗೆ ಬಂಜೆ ಪಟ್ಟವನ್ನು ಕಟ್ಟಿದರು. ನಂತರ ಮೊದಲ ಪತ್ನಿ ಇರುವಾಗಲೇ ದೇವಮ್ಮ ಎನ್ನುವ ಯವತಿಯೊಂದಿಗೆ ಇನ್ನೊಂದು ಮದುವೆಯನ್ನೂ ಮಾಡಿಬಿಟ್ಟರು. ಇನ್ನು ಗಂಡ ತನ್ನ ಸವತಿಯೊಂದಿಗೆ ಸಂಸಾರ ಮಾಡುವುದನ್ನು ನೋಡಿಕೊಂಡಿರಲಾಗದೇ ಮೊದಲ ಪತ್ನಿ ಶ್ರೀದೇವಿ ತವರು ಮನೆಗೆ ಹೋಗಿ ಸೇರುತ್ತಾಳೆ.

Tap to resize

Latest Videos

undefined

Bengaluru ಅಪ್ಪ ಇಂಜಿನಿಯರ್‌, ಅಮ್ಮ ಟೀಚರ್‌: ಮಗಳು ಶಾಲೆಗೆ ಹೋಗದೇ 12ನೇ ಫ್ಲೋರ್‌ನಿಂದ ಬಿದ್ದು ಸತ್ತಳು

ಬಂಜೆ ಎಂಬ ಹಣೆಪಟ್ಟಿಯಿಂದ ದೂರಾಗಲು ದೇವರಿಗೆ ಹರಕೆ: ಇನ್ನು ಮೊದಲ ಪತ್ನಿ ಶ್ರೀದೇವಿ ತವರು ಮನೆಗೆ ಹೋದ ಬೆನ್ನಲ್ಲೇ 2ನೇ ಪತ್ನಿ ದೇವಮ್ಮ ಹಾಗೂ ಸಿದ್ದಪ್ಪನ ಸಂಸಾರಕ್ಕೆ ಸಾಕ್ಷಿಯಾಗಿ 4 ಮಕ್ಕಳಾಗುತ್ತವೆ. ಈ ನಡುವೆ ಸಿದ್ದಪ್ಪನ ಮೊದಲ ಪತ್ನಿ ಶ್ರೀದೇವಿಯನ್ನು ತವರು ಮನೆಯಲ್ಲಿ ಹೆಚ್ಚು ವರ್ಷಗಳು ಇಟ್ಟುಕೊಳ್ಳದೇ ಅವರ ಪೋಷಕರು, ಇಬ್ಬರೊಂದಿಗೆ ರಾಜಿ ಸಂಧಾನ ಮಾಡಿ ಗಂಡನ ಮನೆಗೆ ಕಳುಹಿಸಿಕೊಡುತ್ತಾರೆ. ಇಬ್ಬರು ಹೆಂಡಿರ ಗಂಡನಾಗಿ ಸಿದ್ದಪ್ಪ ಸ್ವಲ್ಪ ಭೂಮಿಯಲ್ಲಿ ಕೃಷಿ ಮಾಡುತ್ತಾ, ಬೇರೆಯವರ ಜಮೀನಿನಲ್ಲಿ ಕೂಲಿ ಕೆಲಸ ಮಾಡುತ್ತಾ ಸಂಸಾರ ತೂಗಿಸುತ್ತಿದ್ದನು. ಇನ್ನು ಜೀವನ ಪೂರ್ತಿ ಬಂಜೆ ಎಂಬ ಹಣೆಪಟ್ಟಿ ಹೊತ್ತುಕೊಂಡೇ ಸಾಯಬೇಕಾ ಎಂದು ಕಂಡ ಕಂಡ ದೇವರಿಗೆ ಹರಕೆ ಹೊತ್ತುಕೊಂಡು, ತಪ್ಪಸ್ಸು ಮಾಡುತ್ತಿದ್ದ ಮೊದಲ ಪತ್ನಿ ಶ್ರೀದೇವಿ ಕೊನೆಗೂ ಗರ್ಭಿಣಿ ಆಗುತ್ತಾಳೆ.

ಮುಡಿ ಶಾಸ್ತ್ರಕ್ಕೆಂದು ಕರೆಸಿಕೊಂಡ ಗಂಡ: ಇನ್ನು ಗರ್ಭಿಣಿಯಾದ ಕೆಲವೇ ತಿಂಗಳಲ್ಲಿ ಆಕೆಯ ತವರು ಮನೆಗೆ ಕಳಿಸಲಾಗುತ್ತದೆ. ಗರ್ಭಿಣಿ ಇದ್ದಾಗ ಸೀಮಂತ ಶಾಸ್ತ್ರವನ್ನು ಮಾಡಿಕೊಂಡು ತವರು ಮನೆಗೆ ಕರೆದುಕೊಂಡ ಹೋಗಿದ್ದ ಪೋಷಕರು ತಮ್ಮ ಮಗಳಿಗೆ ಸುಮಾರು ಏಳೆಂಟು ತಿಂಗಳ ಕಾಲ ಬಾಣಂತನವನ್ನೂ ಮಾಡಿದ್ದಾರೆ. ಇನ್ನು ಕೆಲವು ದಿನಗಳು ಶ್ರೀದೇವಿ ತವರು ಮನೆಯಲ್ಲಿಯೇ ಇರುತ್ತಿದ್ದಳು. ಆದರೆ, ಗಂಡ ಸಿದ್ದಪ್ಪ ಮಗುವಿಗೆ ಮುಡಿ ಶಾಸ್ತ್ರ (ಜವಳ-ಕೂದಲು ತೆಗೆಸುವುದು) ಮಾಡಿಸಬೇಕು ಎಂದು ಮೊದಲ ಪತ್ನಿ ಶ್ರೀದೇವಿ ಹಾಗೂ 5 ತಿಂಗಳ ಮಗು ಸಂಗೀತಾಳನ್ನು ಕರೆದುಕೊಂಡು ಬರುತ್ತಾನೆ.

ಕೊಲೆಮಾಡುವುದಕ್ಕಾಗಿಯೇ ಕರೆಸಿಕೊಂಡಿದ್ದ ದೇವಮ್ಮ:  ಮಗುವಿನ ಮುಡಿ ಶಾಸ್ತ್ರಕ್ಕೆ ಇನ್ನೂ ಸಮಯವಿದೆ ಎಂದರೂ ಕೇಳದೇ ಸಿದ್ದಪ್ಪನ ಎರಡನೇ ಪತ್ನಿ ದೇವಮ್ಮ ತನ್ನ ಸವತಿ ಶ್ರೀದೇವಿ ಹಾಗೂ ಆಕೆಯ 5 ತಿಂಗಳ ಮಗುವನ್ನು ಗಂಡನ ಮನೆಗೆ ಕರೆಸಿಕೊಳ್ಳಲು ಹಠ ಮಾಡಿದ್ದಾಳೆ. ಇಬ್ಬರೂ ಹೆಂಡತಿಯರು ಅನ್ಯೋನ್ಯವಾಗಿದ್ದರೆ ಸಾಕು ಎಂದು ಶ್ರೀದೇವಿಯ ಮನವೊಲಿಸಿ ಗಂಡ ಸಿದ್ದಪ್ಪ ಮಗು ಸಮೇತ ಮೊದಲ ಹೆಂಡತಿಯನ್ನು ಆ.28ರಂದು (ಸೋಮವಾರ) ಮನೆಗೆ ಕರೆದುಕೊಂಡು ಬರುತ್ತಾನೆ. ಆದರೆ, ದೇವಮ್ಮ ಮನೆಯಲ್ಲಿ ಅದಾಗಲೇ ಮಗುವನ್ನು ಕೊಲೆ ಮಾಡಲು ಯೋಜನೆ ರೂಪಿಸಿದ್ದಳು. ಅದರಂತೆ ಕೇವಲ ನಾಲ್ಕು ದಿನದಲ್ಲಿ ಶ್ರೀದೇವಿಯ ಮಗುವನ್ನು ಚೆನ್ನಾಗಿ ನೋಡಿಕೊಳ್ಳುವ ಬಗ್ಗೆ ನಂಬಿಕೆ ಹುಟ್ಟಿಸಿ, ಬುಧವಾರ ಮಗುವಿಗೆ ಬಾಟಲಿ ಹಾಲು ಕುಡಿಸುವುದಾಗಿ ರೂಮಿಗೆ ಎತ್ತಿಕೊಂಡು ಹೋಗಿ ಹೊಲಕ್ಕೆ ಸಿಂಪಡಣೆ ಮಾಡುವ ಕ್ರಿಮಿನಾಶಕವನ್ನು ಹಾಲಿಗೆ ಬೆರೆಸಿ ಕುಡಿಸಿದ್ದಾಳೆ.

ಪೊಲೀಸ್‌ ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡ ಮಲತಾಯಿ: ವಿಷ ಬೆರೆಸಿದ ಹಾಲು ಕುಡಿದು ಮಗು ವಾಂತಿ ಮಾಡಿಕೊಳ್ಳುತ್ತಾ ಅಳಲು ಆರಂಭಿಸಿದೆ. ನಂತರ ಬಾಯಲ್ಲಿ ನೊರೆ ಬರಲು ಆರಂಭಿಸಿದೆ. ಆಗ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮಗು ಸಾವನ್ನಪ್ಪಿತ್ತು. ಈ ಬಗ್ಗೆ ಅನುಮಾನ ಬಂದು ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ. ಈ ಬಗ್ಗೆ ಪೊಲೀಸರು ಬಂದು ವಿಚಾರಣೆ ಮಾಡಿದಾಗ ದೇವಮ್ಮ ಮಗುವನ್ನು ಆಸ್ತಿಗಾಗಿಯೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. ಗಂಡನ ತುಂಡು ಆಸ್ತಿ ಮೊದಲ ಪತ್ನಿ ಮಗಳಿಗೆ ಹೋಗಿನಬಿಟ್ಟರೆ ತನ್ನ ಮಕ್ಕಳು ಬೀದಿ ಪಾಲಾಗುತ್ತಾರೆ ಎಂಬ ಆಲೋಚನೆಯಿಂದ ಹೀಗೆ ಮಾಡಿದೆ ಎಂದು ಹೇಳಿದ್ದಾಳೆ.

ಆಸ್ತಿಗಾಗಿ 5 ತಿಂಗಳ ಹಸುಗೂಸಿಗೆ ಹಾಲಿನಲ್ಲಿ ವಿಷ ಬೆರೆಸಿ ಕುಡಿಸಿದ ಮಲತಾಯಿ: ಕಂದಮ್ಮ ದಾರುಣ ಸಾವು

ಮಲತಾಯಿ ಆಸ್ತಿ ಹುಚ್ಚಿಗೆ ಬಲಿಯಾದ ಕಂದಮ್ಮ: ಆದರೆ, ಸುಮಾರು 11 ವರ್ಷಗಳ ಕಾಲ ಬಂಜೆ, ಬಂಜೆ ಎಂದು ಕರೆಸಿಕೊಂಡು ಇತ್ತೀಚೆಗೆ ಮಗು ಹುಟ್ಟಿದ್ದರಿಂದ ಅದಕ್ಕೆ ಮುಕ್ತಿ ಸಿಕ್ಕಿತ್ತು. ಆದರೆ, ನಾಲ್ಕು ಮಗುವನ್ನು ಹೆತ್ತು ಹೊತ್ತು ಸಾಕಿದ ಮಲತಾಯಿ ಒಂದು ಚಿಕ್ಕ ಜೀವದ ಬೆಲೆಯನ್ನೂ ಅರಿಯದೇ ಆಸ್ತಿಗಾಗಿ ಕೊಲೆ ಮಾಡಿದ್ದಾಳೆ. ಇತ್ತ ಮಗುವನ್ನು ಕಳೆದುಕೊಂಡ ತಾಯಿಯ ರೋದನೆ ಮುಗಿಲು ಮುಟ್ಟಿದೆ. 2ನೇ ಹೆಂಡತಿ ಕುತಂತ್ರ ತಿಳಿಯದೇ ಪುಟ್ಟ ಕಂದಮ್ಮನನ್ನು ಕರೆದುಕೊಂಡು ಬಂದ ಅಪ್ಪ ಮಮ್ಮಲ ಮರುಗುತ್ತಿದ್ದಾನೆ. ಇತ್ತ ತನ್ನ ತಾಯಿ ನಮಗೆ ಆಸ್ತಿ ಕೊಡಿಸಬೇಕೆಂದು ತಮ್ಮ ತಂಗಿಯನ್ನೇ ಕೊಲೆ ಮಾಡಿ ಜೈಲು ಸೇರಿದಳೆಂದು ಅಳುತ್ತಿದ್ದಾರೆ. ಪ್ರಪಂಚವನ್ನೇ ಅರಿಯದ ಪುಟ್ಟ ಕಂದಮ್ಮನನ್ನು ಕೊಲೆ ಮಾಡಿದ ಮಲತಾಯಿ ಆಸ್ತಿ ಹುಚ್ಚಿಗೆ ಇಡೀ ಕುಟುಂಬವೇ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.

click me!