
ಬೆಂಗಳೂರು (ಮೇ.06): ವಿಕ್ಟೋರಿಯಾ ಆಸ್ಪತ್ರೆಯ ತುರ್ತು ನಿಗಾ ಘಟಕದಿಂದ ರಾತ್ರೋರಾತ್ರಿ ಎಸ್ಕೇಪ್ ಆಗಿದ್ದ ಪ್ರಕರಣವೊಂದರ ವಿಚಾರಣಾಧೀನ ಕೈದಿಯನ್ನು ವಿ.ವಿ.ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚಂದ್ರಶೇಖರ್ ಅಲಿಯಾಸ್ ಚಂದ್ರು (32) ಬಂಧಿತ. ಈತ ಶನಿವಾರ ರಾತ್ರಿ ವಿಕ್ಟೋರಿಯಾ ಆಸ್ಪತ್ರೆಯ ತುರ್ತು ನಿಗಾ ಘಟಕದಿಂದ ಆಸ್ಪತ್ರೆ ಸಿಬ್ಬಂದಿ ಹಾಗೂ ಜೈಲು ಸಿಬ್ಬಂದಿ ಕಣ್ಣು ತಪ್ಪಿಸಿ ಪರಾರಿಯಾಗಿದ್ದ. ಈ ಸಂಬಂಧ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ ಜೈಲರ್ ಡಿ.ಗೋಪಿನಾಥ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಕಾರ್ಯಾಚರಣೆ ನಡೆಸಿ ತುಮಕೂರು ಬಸ್ ನಿಲ್ದಾಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಡಕಾಯಿತಿ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಆರೋಪಿ ಚಂದ್ರು 2023ನೇ ಸಾಲಿನಿಂದ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿದ್ದ. ಮೇ 2ರಂದು ಎದೆ ನೋವು ಹಾಗೂ ವಾಂತಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜೈಲು ಸಿಬ್ಬಂದಿ ಜೈಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ಮುಂದುವರೆಸಲಾಗಿತ್ತು.
ಕಣ್ಣ ಎದುರೇ ತಂದೆಯ ಕೊಂದ ಮಾವನ ಹ*ತ್ಯೆ: ನಾಲ್ವರ ಬಂಧನ
ರಾತ್ರೋರಾತ್ರಿ ಎಸ್ಕೇಪ್: ಈ ವೇಳೆ ಕೇಂದ್ರ ಕಾರಾಗೃಹದ ವಾಚರ್ ಸಂತೋಷ್ ರಾಥೋಡ್ ಅವರನ್ನು ಶನಿವಾರ ರಾತ್ರಿ 9ರಿಂದ 12ರವರೆಗೆ ಆಸ್ಪತ್ರೆಯಲ್ಲಿ ಆರೋಪಿಯ ಪಹರೆ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಈ ನಡುವೆ ಆರೋಪಿ ಚಂದ್ರು ರಾತ್ರಿ 1ರಿಂದ 11.55ರ ನಡುವೆ ಎಲ್ಲರ ಕಣ್ಣು ತಪ್ಪಿಸಿ ಪರಾರಿಯಾಗಿದ್ದ. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ತುಮಕೂರಿನಲ್ಲಿ ಬಂಧಿಸಿ ಕರೆತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ