ಇನ್ನೇನು ಎರಡೇ ದಿನ ಸಂಕ್ರಾಂತಿ ಕಳೆಯುತ್ತಿದ್ದಂತೆ ಮತ್ತೆ ಆತ ಸೆರೆಮನೆಗೆ ಹೋಗಬೇಕಾಗಿತ್ತು. ಜೈಲೂಟ ತಿನ್ನೋಕೆ ಇಷ್ಟವಿಲ್ಲದ ಆ ಖದೀಮ ಮಾಡಿದ್ದು ಮಾಸ್ಟರ್ ಪ್ಲಾನ್.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಜ.12): ಇನ್ನೇನು ಎರಡೇ ದಿನ ಸಂಕ್ರಾಂತಿ ಕಳೆಯುತ್ತಿದ್ದಂತೆ ಮತ್ತೆ ಆತ ಸೆರೆಮನೆಗೆ ಹೋಗಬೇಕಾಗಿತ್ತು. ಜೈಲೂಟ ತಿನ್ನೋಕೆ ಇಷ್ಟವಿಲ್ಲದ ಆ ಖದೀಮ ಮಾಡಿದ್ದು ಮಾಸ್ಟರ್ ಪ್ಲಾನ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊಲೆ ಆರೋಪಿ ಪೊಲೀಸರ ಕಣ್ತಪ್ಪಿಸಿ ಜಿಲ್ಲಾಸ್ಪತ್ರೆಯಿಂದ ಎಸ್ಕೇಪ್ ಆಗಿರುವ ಘಟನೆ ಚಿಕ್ಕಮಗಳೂರು ನಗರದ ಜಿಲ್ಲಾ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ವಾರಂಟ್ ಜಾರಿಯಾಗಿದ್ದರೂ ಕೋರ್ಟಿಗೆ ಗೈರಾಗಿದ್ದ ಪೂರ್ಣೇಶ್: ಕೊಲೆ ಆರೋಪಿ ಪೂರ್ಣೇಶ್ ಆಸ್ಪತ್ರೆಯಿಂದ ಎಸ್ಕೇಪ್ ಆಗಿರೋ ರೌಡಿ ಶೀಟರ್. ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಮಾಗಲು ಗ್ರಾಮದ ಪೂರ್ಣೇಶ್ ಮೇಲೆ 2012 ರಿಂದ 8 ಪ್ರಕರಣಗಳು ದಾಖಲಾಗಿದ್ದವು. 4 ಹಾಫ್ ಮರ್ಡರ್ ಕೇಸ್, 3 ಹಲ್ಲೆ ಪ್ರಕರಣ ಮತ್ತೊಂದು ಪೊಲೀಸರ ಮೇಲೆ ಹಲ್ಲೆ ಮಾಡಿದ್ದು. ಪ್ರಕರಣ ಸಂಬಂಧ ಕೋರ್ಟಿನಿಂದ ಸಮನ್ಸ್ ಕೂಡ ಜಾರಿಯಾಗಿತ್ತು. ಆದರೆ, ಆತ ಕೋರ್ಟಿಗೆ ಹಾಜರಾಗಿರಲಿಲ್ಲ.
ಆತ ಮನೆಗೂ ಹೋಗುತ್ತಿರಲಿಲ್ಲ. ರಾತ್ರಿ ವೇಳೆ ಕಾಡು, ಕಾಫಿ ತೋಟ, ಕಾಡಿನ ದೊಡ್ಡ-ದೊಡ್ಡ ಮರಗಳ ಮೇಲೆ ಮಲಗಿ ಪೊಲೀಸರಿಗೂ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ. 2023 ಅಕ್ಟೋಬರ್ 30ರಂದು ಆತ ಮಾಗಲು ಗ್ರಾಮದ ತನ್ನ ಮನೆಯಲ್ಲಿ ಇರುವ ಖಚಿತ ಮಾಹಿತಿ ಮೇರೆಗೆ ಬಂಧಿಸಲು ಹೋದಾಗ ತಪ್ಪಿಸಿಕೊಳ್ಳಲು ಪೊಲೀಸರ ಮೇಲೂ ಮಚ್ಚು ಬೀಸಿದ್ದ. ಬಾಳೆಹೊನ್ನೂರು ಪಿಎಸ್ಐ ದಿಲೀಪ್ ಕುಮಾರ್ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದರು.ಆದರೆ, ಪೊಲೀಸರ ಮಾತು ಕೇಳದೆ ಪೊಲೀಸ್ ಪೇದೆ ಮಂಜುನಾಥ್ ಎಂಬುವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ.
ಕುಸಿಯುವ ಆತಂಕದಲ್ಲಿ ಕೊಡಗಿನ ಕಿರಂಗದೂರು ಸರ್ಕಾರಿ ಶಾಲೆ: 42ಕ್ಕೆ ಇಳಿದ ವಿದ್ಯಾರ್ಥಿಗಳ ಸಂಖ್ಯೆ!
ಪೊಲೀಸರು ಆತನ ಬಲಗಾಲಿಗೆ ಗುಂಡು ಹೊಡೆದು ಬಂಧಿಸಿದ್ದರು: ಪೇದೆ ಮಂಜುನಾಥ್ ಎಡಗೈಗೆ ಗಂಭೀರ ಗಾಯವಾಗಿತ್ತು.ಪೊಲೀಸರ ಮೇಲೆ ಮಚ್ಚು ಬೀಸಿದ ಕಾರಣ ಆತ್ಮರಕ್ಷಣೆಗೆಗೆ ಆತನ ಬಲಗಾಲಿನ ಮಂಡಿಗೆ ಗುಂಡು ಹಾರಿಸಿ ಬಂಧಿಸಿದ್ದರು. ಆದರೆ, ಆತನ ಹಾರೈಕೆಗೆ ಆತನ ಮನೆಯವರು ಯಾರೂ ಬಾರದ ಕಾರಣ ಪೊಲೀಸರೇ ಬೆಂಗಳೂರು ಆಸ್ಪತ್ರೆಗೆ ಸೇರಿಸಿ ಕಾದು ಚಿಕಿತ್ಸೆ ಕೊಡಿಸಿದ್ದರು. ಕಳೆದೊಂದು ತಿಂಗಳ ಹಿಂದೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ತಂದು ದಾಖಲಿಸಿದ್ದರು. ಕಳೆದೊಂದು ತಿಂಗಳಿನಿಂದ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿದ್ದ ಪೂರ್ಣೇಶ್ ಇಂದು ಬೆಳಗಿನ ಜಾವ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದಾನೆ. ಪೊಲೀಸರ ನಿರ್ಲಕ್ಷದಿಂದ ಆರೋಪಿ ಪರಾರಿಯಾಗಿದ್ದು ಕಾವಲಿನಲ್ಲಿ ಇದ್ದ ಪೊಲೀಸರು ಅಮಾನತು ಶಿಕ್ಷೆ ಅನುಭವಿಸಬೇಕಾಗಿದೆ.