Bengaluru: ಡ್ರಗ್ಸ್ ದಂಧೆ: ‘ಭೀಮ’ ಚಿತ್ರ ನಟ ಸೇರಿ ಇಬ್ಬರ ಬಂಧನ

Govindaraj S   | Kannada Prabha
Published : Aug 20, 2025, 09:32 AM IST
Arrest

ಸಾರಾಂಶ

ಡ್ರಗ್ಸ್ ಮಾರಾಟಕ್ಕೆ ಬಂದಿದ್ದಾಗ ಪೆಡ್ಲರ್‌ಗಳನ್ನು ಇನ್ಸ್‌ಪೆಕ್ಟರ್ ಜಿ.ಎಂ. ನವೀನ್ ನೇತೃತ್ವ ತಂಡ ಖಚಿತ ಮಾಹಿತಿ ಪಡೆದು ಬಂಧಿಸಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.

ಬೆಂಗಳೂರು (ಆ.20): ರಾಜಧಾನಿಯ ಮಾದಕ ವಸ್ತು ಮಾರಾಟ ಜಾಲದ ಮೇಲೆ ಭರ್ಜರಿ ಕಾರ್ಯಾಚರಣೆ ನಡೆಸಿರುವ ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು, ದುನಿಯಾ ವಿಜಯ್ ನಟಿಸಿ ನಿರ್ದೇಶಿಸಿದ್ದ ಭೀಮ ಸಿನಿಮಾದ ಪೆಡ್ಲರ್ ಪಾತ್ರಧಾರಿ ಜೋಯಲ್ ಸೇರಿ ಇಬ್ಬರು ವಿದೇಶಿ ಪೆಡ್ಲರ್‌ಗಳನ್ನು ಬಂಧಿಸಿ ಐದು ಕೋಟಿ ರು. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ. ವಿದ್ಯಾರಣ್ಯಪುರದ ಜೋಯಲ್‌ ಕಬೋಂಗ್ ಹಾಗೂ ಜೋಯ್ ಸಂಡೇ ಬಂಧಿತರಾಗಿದ್ದು, ಆರೋಪಿಗಳಿಂದ ಐದು ಕೋಟಿ ರು. ಮೌಲ್ಯದ 2.15 ಕೆಜಿ ಎಂಡಿಎಂಎ ಜಪ್ತಿ ಮಾಡಲಾಗಿದೆ. ಮತ್ತಿಬ್ಬರು ತಲೆಮರೆಸಿಕೊಂಡಿದ್ದು ಶೋಧ ಕಾರ್ಯ ನಡೆದಿದೆ.

ಬೆಟ್ಟದಾಸಪುರದ ಕೇರಳ ಮಸೀದಿ ರಸ್ತೆಯಲ್ಲಿರುವ ಮಹಾಲಕ್ಷ್ಮೀ ಲೇಔಟ್‌ ನ ಖಾಲಿ ಪ್ರದೇಶದಲ್ಲಿ ಡ್ರಗ್ಸ್ ಮಾರಾಟಕ್ಕೆ ಬಂದಿದ್ದಾಗ ಪೆಡ್ಲರ್‌ಗಳನ್ನು ಇನ್ಸ್‌ಪೆಕ್ಟರ್ ಜಿ.ಎಂ. ನವೀನ್ ನೇತೃತ್ವ ತಂಡ ಖಚಿತ ಮಾಹಿತಿ ಪಡೆದು ಬಂಧಿಸಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ. ಭಾರತಕ್ಕೆ ಶೈಕ್ಷಣಿಕ ವೀಸಾದಡಿ 2013ರಲ್ಲಿ ಕಾಂಗೋ ದೇಶದ ಜೋಯಲ್ ಹಾಗೂ 2022ರಲ್ಲಿ ನೈಜೀರಿಯಾದ ಜೋಯ್‌ ಬಂದಿದ್ದರು. ಆನಂತರ ನಗರಕ್ಕೆ ಬಂದು ವಿದ್ಯಾರಣ್ಯಪುರದಲ್ಲಿ ಜೋಯಲ್ ಹಾಗೂ ಪುಟ್ಟೇನಹಳ್ಳಿ ಸಮೀಪ ಜೋಯ್‌ ನೆಲೆಸಿದ್ದಳು.

ಆದರೆ ಯಾವ ಕಾಲೇಜಿಗೂ ಪ್ರವೇಶ ಪಡೆಯದೆ ಅಕ್ರಮವಾಗಿ ನೆಲೆ ನಿಂತ ಈ ಆಫ್ರಿಕಾ ಪ್ರಜೆಗಳು, ಸುಲಭವಾಗಿ ಹಣ ಸಂಪಾದನೆಗೆ ಡ್ರಗ್ಸ್ ದಂಧೆಗಿಳಿದಿದ್ದರು. ದೆಹಲಿಯ ಮಾದಕ ವಸ್ತು ಮಾರಾಟ ಜಾಲದ ಸಂಪರ್ಕದಲ್ಲಿದ್ದ ಜೋಯ್‌, ಅಲ್ಲಿಂದ ಕಡಿಮೆ ಬೆಲೆಗೆ ಎಂಡಿಎಂಎ ಖರೀದಿಸಿ ಬಳಿಕ ನಗರದಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ. ಆನ್‌ಲೈನ್‌ ಮೂಲಕವೇ ಆಕೆ ವ್ಯವಹರಿಸುತ್ತಿದ್ದಳು. ಆಕೆ ಸೂಚಿಸಿದ ಸ್ಥಳಕ್ಕೆ ತೆರಳಿ ಜೋಯಲ್ ಡ್ರಗ್ಸ್ ಇಟ್ಟು ಬರುತ್ತಿದ್ದ.

ಲೋಕೇಷನ್ ಕಳುಹಿಸಿದರೆ ಖಾಲಿ ಪ್ರದೇಶದಲ್ಲಿ ಡ್ರಗ್ಸ್ ಅಡಗಿಸಿ ಆತ ಬರುತ್ತಿದ್ದ. ನಂತರ ಆ ಜಾಗಕ್ಕೆ ಹೋಗಿ ಡ್ರಗ್ಸ್ ಅನ್ನು ಗ್ರಾಹಕ ಪಡೆಯುತ್ತಿದ್ದ. ಹೀಗಾಗಿ ಜೋಯಲ್‌ಗೆ ಗ್ರಾಹಕರ ನೇರ ಸಂಪರ್ಕವಿರಲಿಲ್ಲ. ಇನ್ನು ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಈ ಇಬ್ಬರು ದಂಧೆ ನಡೆಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಸಿನಿಮಾದಲ್ಲೂ ವಿದೇಶಿ ಪೆಡ್ಲರ್‌: ಅಸಲಿ ಮಾತ್ರವಲ್ಲ ಕನ್ನಡ ಚಲನಚಿತ್ರವೊಂದರಲ್ಲಿ ಸಹ ಪೆಡ್ಲರ್ ಪಾತ್ರದಲ್ಲೇ ಕಾಂಗೋ ದೇಶದ ಜೋಯಲ್ ಕಾಬೊಂಗ್ ನಟಿಸಿದ್ದ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ. ದುನಿಯಾ ವಿಜಯ್ ನಟಿಸಿ ನಿರ್ದೇಶಿಸಿದ್ದ ಭೀಮ ಸಿನಿಮಾದಲ್ಲಿ ಜೋಯಲ್ ನಟಿಸಿದ್ದ. ಅದರಲ್ಲಿ ವಿದೇಶದ ಪೆಡ್ಲರ್ ಪಾತ್ರದಲ್ಲಿ. ಕೇವಲ ಒಂದೆರಡು ನಿಮಿಷದಲ್ಲಿ ಆತನ ಪಾತ್ರ ಬಂದು ಹೋಗುತ್ತದೆ. ಪೆಡ್ಲರ್‌ವೊಬ್ಬನನ್ನು ಬಂಧಿಸಿದ್ದ ಬಗ್ಗೆ ಶಾಸಕರಿಗೆ ಬಂದು ದೂರು ಹೇಳುವಾಗ ಖಳ ನಾಯಕ ಡ್ರ್ಯಾಗನ್ ಜತೆ ಜೋಯಲ್‌ ಕಾಣಿಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಕಿಂಗ್: ರಾತ್ರಿಯಾದ್ರೆ ಬೆಡ್‌ರೂಂ ಬಳಿ ಬರ್ತಾನೆ ಸೈಕೋ! ಅಪರಿಚಿತನ ಕಾಟಕ್ಕೆ ಬೇಸತ್ತ ವೈದ್ಯೆ!
ಮಾಟ ಮಂತ್ರ ಪರಿಹಾರದ ನಾಟಕ: ಮಲ್ಲೇಶ್ವರಂನಲ್ಲಿ ಚಿನ್ನಾಭರಣ ದೋಚಿದ ನಕಲಿ ಸ್ವಾಮಿಗಳು!