
ರೋಣ(ಫೆ.16): ತಾಲೂಕಿನ ಹಿರೇಹಾಳ ಗ್ರಾಮದ ವೈದ್ಯ ಡಾ. ಶಶಿಧರ ಹಟ್ಟಿ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ ತಾಲೂಕಿನ ಸರ್ಜಾಪುರದ ಶರಣಗೌಡ ಪಾಟೀಲನನ್ನು ಬಂಧಿಸುವಲ್ಲಿ ಪೊಲೀಸರು ಮೀನಮೇಷ ಎನಿಸುತ್ತಿದ್ದಾರೆ ಎನ್ನುವ ಆರೋಪ ವ್ಯಾಪಕವಾಗಿ ಕೇಳಿ ಬರುತ್ತಿದೆ.
ಆತ್ಮಹತ್ಯೆ ಘಟನೆ ನಡೆದು 4 ದಿನವಾದರೂ ಆರೋಪಿ ಬಂಧನವಾಗಿಲ್ಲ. ತಲೆ ಮರೆಸಿಕೊಂಡಿದ್ದಾನೆ, ಹುಡುಕುತ್ತಿದ್ದೇವೆ ಎನ್ನುವುದರಲ್ಲಿಯೇ ಕಾಲಹರಣ ಮಾಡುವ ಪೊಲೀಸರ ನಡೆ ಸಾಕಷ್ಟು ಸಂಶಯಕ್ಕೆ ಎಡೆಮಾಡುತ್ತಿದೆ. ರಾಜಕೀಯ ಪ್ರಭಾವಕ್ಕೋ, ಸ್ಥಳೀಯ ಶಾಸಕರ ಪರಮಾಪ್ತ ಎಂಬ ಕಾರಣಕ್ಕೋ , ಹಣ ಬಲದ ವ್ಯಕ್ತಿ ಎಂಬ ಕಾರಣದಿಂದಲೋ ಬಂಧನಕ್ಕೆ ಮೀನಮೇಷ ಮಾಡುತ್ತಿದ್ದಾರೆಯೆ? ಆರೋಪಿ ಬಂಧಿಸಲು ಇನ್ನೆಷ್ಟು ದಿನ ಬೇಕು? ಪೊಲೀಸರ ಈ ನಡೆ ಸಾರ್ವಜನಿಕರಲ್ಲಿ ನಾನಾ ರೀತಿಯ ಸಂಶಯಕ್ಕೆ ಕಾರಣವಾಗಿದೆ.
ಗದಗ: ಕಾಂಗ್ರೆಸ್ ಮುಖಂಡ ಶಶಿಧರ್ ಹಟ್ಟಿ ನೇಣಿಗೆ ಶರಣು, ಕಾರಣ?
ಡಾ.ಶಶಿಧರ ಹಟ್ಟಿ ಆತ್ಮಹತ್ಯೆಗೂ ಮುನ್ನ ಬರೆದಿಟ್ಟ ಡೆತ್‌ನೋಟ್‌ನಲ್ಲಿ ಶರಣಗೌಡ ಪಾಟೀಲನ ಹೆಸರು ಉಲ್ಲೇಖಿಸಿ, ನನ್ನ ಸಾವಿಗೆ ಶರಣಗೌಡನ ಕಿರುಕುಳವೇ ಕಾರಣ ಎಂದು ನಮೂದಿಸಿದ್ದಾನೆ. ಅಲ್ಲದೇ ಮೃತ ವೈದ್ಯನ ಪತ್ನಿ ಸಲ್ಲಿಸಿರುವ ದೂರಿನ ಅನ್ವಯ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಪ್ರಮುಖ ಆರೋಪಿ ಇದೇ ಶರಣಗೌಡ. ಇಷ್ಟಿದ್ದಾಗ್ಯೂ ನಾಲ್ಕು ದಿನ ಕಳೆದರೂ ಆರೋಪಿಯ ಬಂಧನ ಆಗದಿರುವುದು ಹಿರೇಹಾಳ ಜನರಲ್ಲಿ ಆಕ್ರೂಶ ಹುಟ್ಟಿಸಿದೆ.
ಡಾ. ಶಶಿಧರ ಹಟ್ಟಿ ಆತ್ಮಹತ್ಯೆ ಹಿಂದಿನ ರಹಸ್ಯ ಭೇದಿಸಿದಲ್ಲಿ, ವ್ಯಾಪಕವಾಗಿ ಬೆಳೆದ ಮರಳು ಮಾಫಿಯಾ ದಂಧೆಯ ಕರಾಳ ಮುಖ ಎಳೆ ಎಳೆಯಾಗಿ ತೆರೆದುಕೊಂಡರೆ ನಮ್ಮ ಗತಿ ಏನು? ಎಂಬ ಆತಂಕ ಪೊಲೀಸರು ಹಾಗೂ ಕೆಲ ಪ್ರಭಾವಿಗಳನ್ನು ಕಾಡುತ್ತಿದೆಯೆ? ಹೀಗೇ ನಾನಾ ರೀತಿಯ ಪ್ರಶ್ನೆಗಳು ಆರೋಪಿ ಶರಣಗೌಡ ಬಂಧನ ವಿಳಂಬದಿಂದ ಜನರನ್ನು ತೀವ್ರ ಕಾಡುತ್ತಿವೆ.
ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಆರೋಪಿಯ ರಕ್ಷಣೆಗೆ ನಿಂತಿದ್ದರಿಂದ ಪೊಲೀಸರು ಅಸಹಾಯಕರಾಗಿದ್ದಾರೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ. ಈ ಮಧ್ಯೆ ತಲೆಮರೆಸಿಕೊಂಡಿರುವ ಆರೋಪಿ ಶರಣಗೌಡ ಪಾಟೀಲ್ ಅಜ್ಞಾತ ಸ್ಥಳದಲ್ಲಿ ಇದ್ದುಕೊಂಡೇ ರಾಜ್ಯ ಹೈಕೋರ್ಟಗೆ ಜಾಮೀನು ಅರ್ಜಿ ಸಲ್ಲಿಸುವ ಯತ್ನ ನಡೆಸಿದ್ದಾನೆ ಎಂದು ಮೂಲಗಳು ಹೇಳಿವೆ.
ಕುರುಬರ ಸಂಘ ಮನವಿ:
ಆರೋಪಿ ಶರಣಗೌಡ ಪಾಟೀಲನನ್ನು ಶೀಘ್ರವೇ ಬಂಧಿಸುವಂತೆ ಕರ್ನಾಟಕ ಪ್ರದೇಶ ಕುರುಬರ ಸಂಘ ಸಿಪಿಐಗೆ ಮನವಿ ಸಲ್ಲಿಸಿದೆ. ಪತಿ ಸಾವಿಗೆ ನ್ಯಾಯ ಸಿಗುವುದೇ ಎಂದು ಡಾ. ಶಶಿಧರ ಪತ್ನಿ ಸುನಂದಾ ಹಟ್ಟಿ ಕಣ್ಣೀರು ಹಾಕುತ್ತಿದ್ದಾರೆ. ಅಪ್ಪನ ಸಾವು ನೆನೆದು ಮಗ, ಮಗಳು ಕಳೆದ 4 ದಿನಗಳಿಂದ ಗೋಗರೆದು ಅಳುತ್ತಿದ್ದಾರೆ. ಕೂಡಲೇ ಪೊಲೀಸರು ಎಚ್ಚೆತ್ತುಕೊಂಡು ಆರೋಪಿ ಬಂಧನಕ್ಕೆ ಮುಂದಾಗಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಗದಗ: ತಂಗಿಗೆ ಚುಡಾಯಿಸ್ಬೇಡ ಎಂದಿದ್ದಕ್ಕೆ ಅಣ್ಣನ ಮೇಲೆ ಪುಂಡರಿಂದ ಮಾರಣಾಂತಿಕ ಹಲ್ಲೆ!
ತಲೆ ಮರೆಸಿಕೊಂಡ ಆರೋಪಿ, ಸರ್ಜಾಪೂರ ಶರಣಗೌಡ ಪಾಟೀಲ ಬಂಧನಕ್ಕೆ ಪಿಎಸ್‌ಐ ಎಲ್.ಕೆ. ಜೂಲಕಟ್ಟಿ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಆರೋಪಿ ಎಲ್ಲಿಯೇ ಇದ್ದರೂ ತಡಮಾಡದೇ ಬಂಧಿಸಲಾಗುವುದು. ಈ ನಿಟ್ಟಿನಲ್ಲಿ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆರೋಪಿ ಬಂಧನಕ್ಕೆ ಕುರುಬರ ಸಂಘದಿಂದಲೂ ಮನವಿ ಬಂದಿದೆ ಎಂದು ರೋಣ ವಲಯ ಸಿಪಿಐ ಎಸ್.ಎಸ್. ಬೀಳಗಿ ತಿಳಿಸಿದ್ದಾರೆ.
ಹಾಲುಮತ ಸಮಾಜದ ಮುಖಂಡ ಡಾ. ಶಶಿಧರ ಹಟ್ಟಿ ಆತ್ಮಹತ್ಯೆಯ ಹಿಂದೆ ಗಜೇಂದ್ರಗಡ ತಾಲೂಕಿನ ಸರ್ಜಾಪೂರದ ಶರಣಗೌಡ ಪಾಟೀಲನ ಕೈವಾಡವಿದ್ದು, ಈ ಕುರಿತು ಡಾ. ಶಶಿಧರ ಹಟ್ಟಿ ಪತ್ನಿ ದೂರು ನೀಡಿ 4 ದಿನಗಳಾದರೂ ಆರೋಪಿ ಮಾತ್ರ ಬಂಧನವಾಗದಿರುವುದು ಸಂಶಕ್ಕೆಡೆ ಮಾಡಿದೆ. ಆರೋಪಿಯನ್ನು ಶೀಘ್ರ ಬಂಧಿಸಲು ಸಿಪಿಐ ಅವರಿಗೆ ಮನವಿ ಸಲ್ಲಿಸಿದ್ದೇವೆ. ಅನಗತ್ಯ ವಿಳಂಬ ಮಾಡಿದಲ್ಲಿ ಬೀದಿಗಿಳಿದು ಹೋರಾಟ ಮಾಡಲಾಗುವದು ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘ ರೋಣ ತಾಲೂಕು ಘಟಕ ಅಧ್ಯಕ್ಷ ಬಸವರಾಜ ಜಗ್ಗಲ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ