ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಹೂತಿಟ್ಟಿದ್ದ ಬ್ಯಾರಲ್‌ಗನ್ ಪತ್ತೆ!| ತುಕ್ಕು ಹಿಡಿದ ಸ್ಥಿತಿಯಲ್ಲಿ ಪೊಲೀಸ್ ಕೈಗೆ ಸಿಕ್ಕ ಗನ್| ರಾತ್ರಿ ಪಾಳಿ ಮುಗಿಸಿ ಮನೆಗೆ ಮರಳುತ್ತಿದ್ದ ಕಾನ್ಸ್‌ಟೇಬಲ್| ಈ ವೇಳೆ ಆವರಣದಲ್ಲಿ ಮಣ್ಣಿನಡಿ ಪೈಪ್ ಮಾದರಿ ವಸ್ತು ಪತ್ತೆ| ಅನುಮಾನಗೊಂಡು ಪರಿಶೀಲಿಸಿದಾಗ ತುಕ್ಕು ಹಿಡಿದಿದ್ದ ಗನ್ ಪತ್ತೆ
ಬೆಂಗಳೂರು[ಫೆ.11]: ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ಹತ್ತಾರು ವರ್ಷಗಳಿಂದ ಹೂತಿಟ್ಟಿದ್ದ ಡಬಲ್ ಬ್ಯಾರಲ್‌ಗನ್‌ವೊಂದು ಪತ್ತೆಯಾಗಿದೆ. ಈ ಸಂಬಂಧ ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾನ್ಸ್‌ಟೇಬಲ್ ಗೋಪಾಲಕೃಷ್ಣ ಅವರು ಫೆ.6ರಂದು ವಿಕ್ಟೋರಿಯಾ ಆಸ್ಪತ್ರೆಯ ಹೊರ ಠಾಣೆಯಲ್ಲಿ ಗಸ್ತು ಕರ್ತವ್ಯ ನಿಯೋಜನೆಗೊಂಡಿದ್ದರು. ರಾತ್ರಿ ಪಾಳಿ ಕೆಲಸ ಮುಗಿಸಿ ಮರುದಿನ ಬೆಳಗ್ಗೆ 7.30ರ ಸುಮಾರಿಗೆ ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿರುವ ಸುಟ್ಟು ಗಾಯಗಳ ವಿಭಾಗದ ಹಿಂಭಾಗದಲ್ಲಿ ಬರುತ್ತಿದ್ದರು. ಈ ವೇಳೆ ಅಲ್ಲಿಯೇ ಬಾಳೆ ಗಿಡದ ಪಕ್ಕದ ಮಣ್ಣಿನಡಿ ಪೈಪ್ ಮಾದರಿ ವಸ್ತು ಕಾನ್ಸ್‌ಟೇಬಲ್‌ಗೆ ಕಂಡು ಬಂದಿದೆ.
ಅನುಮಾನಗೊಂಡ ಕಾನ್ಸ್‌ಟೇಬಲ್ ಮಣ್ಣು ತೆಗೆದು ನೋಡಿದಾಗ ಡಬಲ್ ಬ್ಯಾರಲ್ ಗನ್ ಪತ್ತೆಯಾಗಿದೆ. ಗನ್ ತುಕ್ಕು ಹಿಡಿದ ಸ್ಥಿತಿಯಲ್ಲಿದ್ದು, ಅದರ ಮೇಲೆ ‘ಯೆಸ್ ಇನ್ಸಾಫ್ ಅಂಡ್ ಸನ್ಸ್’ ಎಂದು ಹಾಗೂ 39752011 ಎಂದು ಬರೆಯಲಾಗಿದೆ. ಯಾರೋ ಅಪರಿಚಿತರು ಕೆಲ ವರ್ಷಗಳ ಹಿಂದೆ ಈ ಗನ್ ಹೂತಿಟ್ಟಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ವಿವಿ ಪುರಂ ಪೊಲೀಸರು ತಿಳಿಸಿದರು.