ಡ್ರಗ್ಸ್‌ ದಂಧೆಕೋರನಿಗೆ ಪೊಲೀಸರ ಗುಂಡೇಟು

By Kannadaprabha NewsFirst Published Sep 16, 2020, 7:24 AM IST
Highlights

ಅತ್ತಿಬೆಲೆ ಠಾಣಾ ವ್ಯಾಪ್ತಿಯಲ್ಲಿ ಘಟನೆ| ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆ ನಡೆಸಿದ ಪೆಡ್ಲರ್‌ಗೆ ಕಾಲಿಗೆ ಗುಂಡು| 7 ಕೆ.ಜಿ. ಗಾಂಜಾ ವಶ|

ಆನೇಕಲ್‌(ಸೆ.16): ಡ್ರಗ್ಸ್‌ ದಂಧೆಕೋರರ ವಿರುದ್ಧ ಕಾರ್ಯಾಚರಣೆ ಮುಂದುವರೆಸಿರುವ ಪೊಲೀಸರು, ಅತ್ತಿಬೆಲೆ ಠಾಣಾ ವ್ಯಾಪ್ತಿಯ ಬಿದರಗುಪ್ಪೆ ಬಳಿ ಗುಂಡು ಹಾರಿಸಿ ಪೆಡ್ಲರ್‌ ಒಬ್ಬನನ್ನು ಮಂಗಳವಾರ ಬಂಧಿಸಿದ್ದಾರೆ. ಡ್ರಗ್ಸ್‌ ದಂಧೆಯಲ್ಲಿ ನಟ-ನಟಿಯರು, ರಾಜಕಾರಣಿಗಳ ಮಕ್ಕಳು, ಉದ್ಯಮಿಗಳ ಹೆಸರು ಕೇಳಿ ಬಂದ ನಂತರ ರಾಜ್ಯಾದ್ಯಂತ ಪೆಡ್ಲರ್‌ಗಳ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ನಿರತವಾಗಿದ್ದು, ಈ ಸಂದರ್ಭದಲ್ಲಿ ಗಾಂಜಾ ಸರಬರಾಜುದಾರನ ಮೇಲೆ ನಡೆದ ಮೊದಲ ಶೂಟೌಟ್‌ ಇದಾಗಿದೆ.

ಆನೇಕಲ್‌ ತಾಲೂಕಿನ ಅಡಿಗಾರ ಕಲ್ಲಹಳ್ಳಿಯ ಅಯೂಬ್‌ ಖಾನ್‌ ಅಲಿಯಾಸ್‌ ಇಸ್ಮಾಯಿಲ್‌ ಬಂಧಿತ ಆರೋಪಿ. ಆರೋಪಿಯು ಬೇರೆ ಬೇರೆ ರಾಜ್ಯಗಳಿಂದ ಕೆ.ಜಿ.ಗಟ್ಟಲೇ ಗಾಂಜಾ ತರಿಸಿ ಮಾರಾಟ ಮಾಡುತ್ತಿದ್ದ. ವಿದ್ಯಾರ್ಥಿಗಳು, ಯುವಜನರು, ಟೆಕ್ಕಿಗಳು ಇವನ ಪ್ರಮುಖ ಟಾರ್ಗೆಟ್‌ ಆಗಿದ್ದರು. ಅಲ್ಲದೇ ಆರೋಪಿ ತನ್ನದೇ ತಂಡ ಕಟ್ಟಿಕೊಂಡಿದ್ದ ಆನೇಕಲ್‌ ತಾಲೂಕು ಹಾಗೂ ಬೆಂಗಳೂರು ನಗರದ ಕೆಲವೆಡೆ ಸಣ್ಣ ಪ್ರಮಾಣದಲ್ಲಿ ತನ್ನದೇ ಹವಾ ಸೃಷ್ಟಿಸಿದ್ದ ಎಂದು ತಿಳಿದು ಬಂದಿದೆ.

ಡ್ರಗ್ಸ್ ಮಾಫಿಯ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಿಸಿಎಂ ಅಶ್ವತ್ಥನಾರಾಯಣ

ಈ ಸಂಬಂಧ ‘ಕನ್ನಡಪ್ರಭ’ದ ಜತೆ ಮಾತನಾಡಿದ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ ಚನ್ನಣ್ಣನವರ್‌, ಆರೋಪಿಯು 8 ಬಾರಿ ಎನ್‌ಡಿಪಿಎಸ್‌ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ವಾಂಟೆಡ್‌ ಪಟ್ಟಿಯಲ್ಲಿದ್ದ. ಬಿದರಗುಪ್ಪೆ ಬಳಿ ಆರೋಪಿ ಇಸ್ಮಾಯಿಲ್‌ ಗಾಂಜಾ ಮಾರಾಟ ಮಾಡುತ್ತಿರುವ ಕುರಿತು ಲಭ್ಯವಾದ ಖಚಿತ ಮಾಹಿತಿ ಮೇರೆಗೆ ಅತ್ತಿಬೆಲೆ ಪೊಲೀಸರು ದಾಳಿ ನಡೆಸಿ, ಬಂಧಿಸಲು ಮುಂದಾದರು. ಈ ವೇಳೆ ಆರೋಪಿಯು ಮಾರಕಾಸ್ತ್ರಗಳಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು, ಪಿಎಸ್‌ಐ ಹರೀಶ್‌ ರೆಡ್ಡಿ, ಮುರಳಿ ಹಾಗೂ ಮುಖ್ಯಪೇದೆ ರವಿಕುಮಾರ್‌ ಅವರ ಭುಜ, ಕೈಗಳಿಗೆ ಗಾಯವಾಗಿದೆ.

ಈ ವೇಳೆ ವೃತ್ತ ನಿರೀಕ್ಷಕ ಸತೀಶ್‌ ಒಂದು ಸುತ್ತಿ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ. ಆದರೆ, ಆರೋಪಿಯು ಪ್ರತಿದಾಳಿಗೆ ಮುಂದಾದಾಗ ಸತೀಶ್‌ ಆತನ ಬಲಗಾಲಿಗೆ ಗುಂಡು ಹಾರಿಸಿ ಬಂಧಿಸಿ, 7 ಕೆ.ಜಿ. ಗಾಂಜಾ ವಶ ಪಡಿಸಿಕೊಂಡರು. ಆರೋಪಿಯನ್ನು ಆನೇಕಲ್‌ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಾಯಗೊಂಡ ನಮ್ಮ ಸಿಬ್ಬಂದಿ ಸಹ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿವರಿಸಿದರು. ಇಸ್ಮಾಯಿಲ್‌ ತಂಡದಲ್ಲಿ ಮತ್ತಷ್ಟು ಆರೋಪಿಗಳಿದ್ದು, ಶೀಘ್ರದಲ್ಲೇ ಎಲ್ಲರನ್ನು ಬಂಧಿಸಲಾಗುವುದು ಎಂದು ತಿಳಿಸಿದರು.
 

click me!