ಮೊಬೈಲ್‌ ಸಿಬ್ಬಂದಿ ಸೋಗಲ್ಲಿ ಕಾನ್ಸ್‌ಟೇಬಲ್‌ಗೆ ಟೋಪಿ!

By Kannadaprabha NewsFirst Published May 19, 2020, 9:56 AM IST
Highlights

ಮೊಬೈಲ್‌ ಸಿಬ್ಬಂದಿ ಸೋಗಲ್ಲಿ ಕಾನ್ಸ್‌ಟೇಬಲ್‌ಗೆ ಟೋಪಿ!| ಧೋಖಾ- ಕಸ್ಟಮರ್‌ ಕೇರ್‌ ಸಿಬ್ಬಂದಿ ಎಂದು ಹೇಳಿ ಪೊಲೀಸಪ್ಪನ ಖಾತೆಯಿಂದ ಹಣ ದೋಚಿದ ಸೈಬರ್‌ ಕಳ್ಳ

ಬೆಂಗಳೂರು(ಮೇ.19): ಹೆಡ್‌ ಕಾನ್‌ಸ್ಟೇಬಲ್‌ಗೆ ವಂಚಕ ಚಳ್ಳೆಹಣ್ಣು ತಿನ್ನಿಸಿ, ಅವರ ಖಾತೆಯಿಂದ ಹಣ ಎಗರಿಸಿರುವ ಘಟನೆ ಬೆಳಕಿಗೆ ಬಂದಿದೆ.

ನಗರ ಸಶಸ್ತ್ರ ಮೀಸಲು ಪಡೆ ಹೆಡ್‌ ಕಾನ್‌ಸ್ಟೇಬಲ್‌ ವಿಜಯ್‌ ಮಂಜುನಾಥ್‌ ಹಣ ಕಳೆದುಕೊಂಡವರು. ಕೆಲ ದಿನಗಳ ಹಿಂದೆ ಏರ್‌ಟೆಲ್‌ ಕಸ್ಟಮರ್‌ ಕೇರ್‌ ಸಿಬ್ಬಂದಿ ಸೋಗಿನಲ್ಲಿ ಸೈಬರ್‌ ಕಳ್ಳರು ಅವರ ಖಾತೆಯಿಂದ .4,800 ದೋಚಿದ್ದಾರೆ ಎಂದು ಪಶ್ಚಿಮ ವಿಭಾಗದ ಸೈಬರ್‌ ಪೊಲೀಸರು ಹೇಳಿದ್ದಾರೆ.

ಸಮಯ ಕಾದು ಕದ್ದರು:

ಮೇ ಮೊದಲ ವಾರದಲ್ಲಿ ವಿಜಯ್‌ಗೆ ಕರೆ ಮಾಡಿದ ಆರೋಪಿ, ತಾನು ಏರ್‌ಟೆಲ್‌ ಕಸ್ಟಮರ್‌ ಕೇರ್‌ನಿಂದ ಫೋನ್‌ ಮಾಡುತ್ತಿದ್ದು, ನೀವು ರೀಚಾಜ್‌ರ್‍ ಮಾಡಿರುವ ಹಣವನ್ನು ನಿಮ್ಮ ಖಾತೆಗೆ ವಾಪಸ್‌ ಜಮೆ ಮಾಡುತ್ತೇವೆ. ನಿಮ್ಮ ಮೊಬೈಲ್‌ಗೆ ಲಿಂಕ್‌ ಕಳುಹಿಸುತ್ತೇನೆ. ಅದರಲ್ಲಿ ಬ್ಯಾಂಕ್‌ ಖಾತೆ ವಿವರ, ನಿಮಗೆ ಬರಬೇಕಾದ ಮೊತ್ತ ಹಾಗೂ ಕೊನೆಯಲ್ಲಿ ನಿಮ್ಮ ಪಿನ್‌ ಹಾಕಿ ಎಂದಿದ್ದಾನೆ.

ಅನುಮಾನಗೊಂಡ ವಿಜಯ್‌, ತಮ್ಮ ಬ್ಯಾಂಕ್‌ ಖಾತೆಯಲ್ಲಿದ್ದ ಹಣವನ್ನು ಬೇರೊಂದು ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ನಂತರ ಆರೋಪಿ ಹೇಳಿದಂತೆ ಲಿಂಕ್‌ನಲ್ಲಿ ವಿವರ ನಮೂದಿಸಿದ್ದಾರೆ. ಬಳಿಕ ಆರೋಪಿಗೆ, ಬ್ಯಾಂಕ್‌ ಖಾತೆಯಲ್ಲಿ ಹಣ ಇಲ್ಲದಿರುವುದು ಗೊತ್ತಾಗಿದೆ. ಮತ್ತೆ ವಿಜಯ್‌ಗೆ ಕರೆ ಮಾಡಿ ಬೇರೊಂದು ಬ್ಯಾಂಕ್‌ ವಿವರ ಕೊಡಿ, ಮೊದಲು ಕೊಟ್ಟಖಾತೆಗೆ ಹಣ ವರ್ಗಾವಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದಿದ್ದಾನೆ. ಇದಕ್ಕೆ ವಿಜಯ್‌ ನಿರಾಕರಿಸಿದ್ದಾರೆ.

ಕೆಲ ಹೊತ್ತಿನ ನಂತರ ವಿಜಯ್‌, ಅದೇ ಖಾತೆಗೆ ಮತ್ತೆ .4 ಸಾವಿರ ವರ್ಗಾವಣೆ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಕಾಯುತ್ತಿದ್ದ ಸೈಬರ್‌ ಕಳ್ಳ, ತಕ್ಷಣ ವಿಜಯ್‌ ಖಾತೆಯಿಂದ ಹಣ ಎಗರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧು ಅಂತ ಹೇಳಿ ಟೋಪಿ

ಕೇಂದ್ರ ಸರ್ಕಾರದ ಉದ್ಯೋಗಿಯೊಬ್ಬರಿಗೆ ಸಂಬಂಧಿಕರ ಸೋಗಿನಲ್ಲಿ ಕರೆ ಮಾಡಿ ಸೈಬರ್‌ ವಂಚಕರು .15 ಸಾವಿರ ಟೋಪಿ ಹಾಕಿದ್ದಾರೆ. ಕಾಕ್ಸ್‌ಟೌನ್‌ ನಿವಾಸಿ ಸಚಿನ್‌ ಕಾಂಬೊಜ್‌ ಎಂಬುವರೇ ಹಣ ಕಳೆದುಕೊಂಡಿದ್ದು, ಮೇ 15ರಂದು ಕರೆ ಮಾಡಿದ ಕಿಡಿಗೇಡಿ ಈ ಕೃತ್ಯ ಎಸಗಿದ್ದಾನೆ ಎಂದು ಪೂರ್ವ ವಿಭಾಗದ ಸೈಬರ್‌ ಕ್ರೈಂ ಠಾಣೆ ಪೊಲೀಸರು ತಿಳಿಸಿದ್ದಾರೆ.

ಬ್ಯಾಂಕ್‌ ಅಧಿಕಾರಿ ಹೆಸರಿನಲ್ಲಿ ವಂಚನೆ

ಡಾಲ​ರ್‍ಸ್ ಕಾಲೋನಿ ನಿವಾಸಿ ಟಿ.ದೇವಕಿ ಉಮೇಶ್‌ (67) ಎಂಬುವರಿಗೆ ಬ್ಯಾಂಕ್‌ ಅಧಿಕಾರಿ ಅಂತ ಹೇಳಿ ಕಿಡಿಗೇಡಿಗಳು, .49,999 ಹಣ ಎಗರಿಸಿದ್ದಾರೆ.

3 ದಿನಗಳ ಹಿಂದೆ ದೇವಕಿಗೆ ಕರೆ ಮಾಡಿದ ಆರೋಪಿ, ಬ್ಯಾಂಕ್‌ ಅಧಿಕಾರಿ ಎಂದ ಪರಿಚಯಿಸಿಕೊಂಡಿದ್ದಾನೆ. ಬಳಿಕ ನಿಮ್ಮ ಬ್ಯಾಂಕ್‌ ಖಾತೆಗೆ ಪ್ಯಾನ್‌ ಹಾಗೂ ಆಧಾರ್‌ ನಂಬರ್‌ ಲಿಂಕ್‌ ಮಾಡದಿದ್ದರೆ ಖಾತೆಯನ್ನು ಫ್ರೀಜ್‌ ಮಾಡುತ್ತೇವೆ ಎಂದಿದ್ದಾನೆ. ಈ ಮಾತು ನಂಬಿ ವಿವರ ನೀಡಿದಾಗ ಹಣ ಎಗರಿಸಿದ್ದಾರೆ.

click me!